ಕ್ಲಾಸ್ ಮತ್ತು ಮಾಸ್ ಗು ಸೈ… ಮಂಡ್ಯ ಶೈಲಿಯ ನಾಟಿ ಬಾಡೂಟ

0
4323

ಒಳ್ಳೆ ಬಾಡೂಟ ಗಲ್ಲೀಲೇ ಇರಲಿ,- ಸಂದೀಲೇ ಇರ್ಲಿ ಹುಡಿಕ್ಕೊಂಡ್‌ ಹೋಗಿ ಜಪ್ಪಂತ ಜಮಾಯ್ಸಿಬಿಡೋದು ಮಂಡ್ಯ ಮತ್ತು ಹಾಸನದ ಬಾಡೂಟ ಪ್ರಿಯರ ಹುಟ್ಟುಗುಣ. ಗಡದ್ದಾಗಿ ಉಂಡ ನಂತರ ಕೈಗಂಟಿದ ಛರ್ಬಿಯ ಬನಿಯನ್ನು ನೀಟಾಗಿ ನೆಕ್ಕಿ ಕೈತೊಳೆದ ಮೇಲೂ, ಅವರು ತಮ್ಮ ಕೈಯಿಂದ ಹೊಮ್ಮುವ ಬಾಡೂಟದ ಪರಿಮಳವನ್ನೂ ಆಸ್ವಾದಿಸುತ್ತಾರೆ. ಇಂಥದ್ದೊಂದು ಪಕ್ಕಾ ನಾಟಿ ಶೈಲಿಯ ಬಾಡೂಟವನ್ನು ಉಣಿಸುವ ಮೂಲಕವೇ ಪ್ರಸಿದ್ಧಿ ಪಡೆದಿದೆ ‘ಮೀರಾಸ್‌ ಬೀಗರ ಊಟ’.

ಇಲ್ಲಿ ಸಿಗುವ ಮಟನ್‌ ಚಾಪ್ಸ್‌ ನೋಡುತ್ತಲೇ ನಾಲಗೆಯಲ್ಲಿನ ನೀರು ಕಿತ್ತುಕೊಳ್ಳುತ್ತದೆ. ಪರಿಮಳಕ್ಕೆ ಮೂಗಿನ ಹೊಳ್ಳೆ ಅರಳುತ್ತದೆ. ತಿಂದ ನಂತರ ಮತ್ತೊಂದು ಚಾಪ್ಸ್‌ ಆರ್ಡರ್‌ ಮಾಡುವಷ್ಟು ಉತ್ಸಾಹ ಚಿಮ್ಮುತ್ತದೆ. ಮನೆಯಲ್ಲಿ ತಯಾರಿಸಿದ ಮಸಾಲೆ ಮತ್ತು ಹದವಾಗಿ ಒಗ್ಗರಣೆ ಕೊಟ್ಟು ತಯಾರಿಸಿದ ಬೋಟಿ ಫ್ರೈ ಹಾಗೂ ತಲೆ ಮಾಂಸದ ರುಚಿಯೂ ಅಷ್ಟೇ ಅದ್ಭುತ. ಸಂಡೇ ಬ್ರೇಕ್‌ಫಾಸ್ಟ್‌ಗೆಂದು ಇಲ್ಲಿ ಇಡ್ಲಿ, ಕಾಲುಸೂಪು ಮತ್ತು ಕೋಳಿಸಾರು ತಯಾರಿಸುತ್ತಾರೆ. ಗ್ರಾಹಕರು ಇಲ್ಲಿನ ತಿಂಡಿ ಸವಿಯಲು ಕಾದು ನಿಲ್ಲುತ್ತಾರೆ. ‘ಬಿಡದಿ ಇಡ್ಲಿಗಿಂತಲೂ ನಾವು ಕೊಡೋ ತಟ್ಟೆಇಡ್ಲಿ ಸಖತ್‌ ಟೇಸ್ಟಿಯಾಗಿದೆ. ಬೇಕಿದ್ರೆ ಓಪನ್‌ ಚಾಲೆಂಜ್‌ ಹಾಕ್ತೀನಿ’ ಅಂದರು ಮಧು. ಇಡ್ಲಿ ತಿಂದ ನಂತರ ಅವರ ಮಾತು ಉತ್ಪ್ರೇಕ್ಷೆ ಅಂತ ಅನ್ನಿಸಲಿಲ್ಲ. ಆ ಇಡ್ಲಿ ಕೇವಲ ತಾಜಾ ಮತ್ತು ಮೃದುವಿನಿಂದಷ್ಟೇ ಅಲ್ಲದೇ ರುಚಿಯಿಂದಲೂ ಇಷ್ಟವಾಯ್ತು.

NON veg

ಮಂಡ್ಯ, ಹಾಸನದಲ್ಲಿ ನಡೆಯುವ ಮದುವೆಗಳಿಗಿಂತ ಬೀಗರೂಟ ಸಖತ್‌ ಜೋರಾಗಿರುತ್ತದೆ. ಆ ಭಾಗದಲ್ಲಿ ಬೀಗರೂಟದಲ್ಲಿ ಬಡಿಸುವ ಎಲ್ಲ ಖಾದ್ಯಗಳನ್ನು ಸೇರಿಸಿ ಇಲ್ಲಿ ‘ಬೀಗರೂಟ’ ಎಂದು ಕೊಡುತ್ತಾರೆ. ಇದು ಈ ಹೋಟೆಲ್‌ನಲ್ಲಿ ಸಿಗುವ ಮತ್ತೊಂದು ರುಚಿಕಟ್ಟಾದ ಊಟ. ಬಿಸಿಬಿಸಿ ಮುದ್ದೆ, ಬೋಟಿ ಗೊಜ್ಜು, ಚಿಕನ್‌ ಮತ್ತು ಮಟನ್‌ ಫ್ರೈ, ಬಿರಿಯಾನಿ, ಅನ್ನ, ಮೊಸರು, ಗೊಜ್ಜು, ಈರುಳ್ಳಿ, ನಿಂಬೆಹಣ್ಣು, ಸೌತೆಕಾಯಿ, ರಸಂ ಒಳಗೊಂಡಿರುವ ಬೀಗರೂಟವನ್ನು ಬಾಳೆ ಎಲೆಯ ಮೇಲೆ ಬಡಿಸುತ್ತಾರೆ. ಬೀಗರೂಟ ಉಂಡರೆ ಮತ್ತೆ ಯಾವುದೇ ಖಾದ್ಯಗಳನ್ನು ಸವಿಯಲು ಹೊಟ್ಟೆಯಲ್ಲಿ ಜಾಗವಿರುವುದಿಲ್ಲ.

‘ನಾನ್‌ವೆಜ್‌ ಹೋಟೆಲ್‌ಗಳಲ್ಲಿ ಒಳ್ಳೆ ಊಟ ಸಿಗುತ್ತೆ ನಿಜ. ಆದರೆ, ಅನೇಕರು ಶುಚಿಗೆ ಮಹತ್ವ ನೀಡುವುದಿಲ್ಲ. ಮನೆಯಿಂದ ಹೆಣ್ಮಕ್ಕಳು ಹೊರಗೆ ಬರುವುದೇ ಕಷ್ಟ. ಅಂಥಾದ್ದರಲ್ಲಿ ಮಿಲ್ಟ್ರಿ ಹೋಟೆಲ್‌ಗೆ ಹೋಗೋಣ ಅಂದರೆ ಜಪ್ಪಯ್ಯ ಅಂದರೂ ಅವರು ಬರಲ್ಲ.  ಹಾಗಾಗಿ, ನಾವು ರುಚಿರುಚಿಯಾಗಿ ಊಟ ಕೊಡುವುದರ ಜೊತೆಗೆ ಶುಚಿಯತ್ತಲೂ ಹೆಚ್ಚಿನ ಗಮನ ನೀಡಿದ್ದೇವೆ. ನಮ್ಮಲ್ಲಿನ ನಾಟಿ ಸ್ಟೈಲ್‌ ಊಟ ಸವಿಯಲು ಗ್ರಾಹಕರು ಒಬ್ಬರೇ ಬರುವುದಿಲ್ಲ. ಫ್ಯಾಮಿಲಿಯನ್ನೂ ಜೊತೆಗೆ ಕರೆದುಕೊಂಡು ಬರುತ್ತಾರೆ. ನಮ್ಮ ಟಾರ್ಗೆಟ್‌ ಇದ್ದಿದ್ದೇ ಫ್ಯಾಮಿಲಿ ಕಸ್ಟಮರ್‌ ಮೇಲೆ. ಹಾಗಾಗಿ ನಮ್ಮ ರೆಸ್ಟೋರೆಂಟ್‌ಗೆ ಮಿಲ್ಟ್ರಿ ಹೋಟೆಲ್‌ ಎನ್ನುವ ಬದಲು ‘ಬೀಗರೂಟ’ ಅಂತ ಹೆಸರಿಟ್ಟೆವು. ಹೆಸರೂ ಕ್ಯಾಚಿಯಾಗಿದೆ’ ಎಂದರು ಹೋಟೆಲ್‌ ಮಾಲೀಕರಾದ ಮಧುಸೂದನ್‌ ಮತ್ತು ಯೋಗೇಶ್‌. ವರ್ಲಿ ಚಿತ್ತಾರದಿಂದ ನಳನಳಿಸುತ್ತಿದ್ದ ರೆಸ್ಟೋರೆಂಟ್‌ ನೋಡಿದಾಗ ಅದು ಶುರುವಾಗಿ ಒಂದೂವರೆ ವರ್ಷ ಕಳೆದಿದೆ ಅಂತ ಅನ್ನಿಸಲಿಲ್ಲ. ಅಷ್ಟು ನೀಟಾಗಿ ಇಟ್ಟುಕೊಂಡಿದ್ದಾರೆ.

NON veg

‘ನಮ್ಮಿಬ್ಬರಿಗೂ ಊಟದ ಹುಚ್ಚು. ಎಲ್ಲೇ ಒಳ್ಳೆಯ ಊಟ ಸಿಗುತ್ತದೆ ಅಂದರೂ ಹುಡುಕಿಕೊಂಡು ಹೋಗಿ ತಿನ್ನುತ್ತಿದ್ದೆವು. ಆನಂತರ ನಮ್ಮಿಬ್ಬರಿಗೂ ಸ್ವಂತ ಬ್ಯುಸಿನೆಸ್‌ ಮಾಡಬೇಕು ಎಂಬ ಆಲೋಚನೆ ಬಂತು. ಆಗ ನಮಗೆ ಬೆಸ್ಟ್‌ ಆಯ್ಕೆ ಅನಿಸಿದ್ದು ಹೋಟೆಲ್‌ ಉದ್ಯಮ. ಯಾಕಂದರೆ, ಮಧು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದ. ದೊಡ್ಡ ಸಮಾರಂಭಗಳಲ್ಲಿ ಮೊದಲು ಮಧುಗೆ ಊಟಕ್ಕೆ ಇಕ್ಕುತ್ತಿದ್ದರು. ಊಟದಲ್ಲಿ ಏನೇ ಹೆಚ್ಚು ಕಡಿಮೆ ಇದ್ದರೂ ಆತ ಥಟ್‌ ಅಂತ ಕಂಡುಹಿಡಿಯುತ್ತಿದ್ದ. ಅವನು ಚೆನ್ನಾಗಿದೆ ಅಂತ ಅಂದರೆ, ಎಲ್ಲ ಸರಿಯಾಗಿದೆ ಎಂದರ್ಥ. ಅದಕ್ಕೇ ನಾವು ಗೊತ್ತಿಲ್ಲದ ವ್ಯವಹಾರಕ್ಕೆ ಕೈ ಹಾಕುವ ಬದಲು ಹೋಟೆಲ್‌ ಆರಂಭಿಸುವ ಯೋಚನೆ ಮಾಡಿದೆವು. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಒಳ್ಳೆ ಬಾಡೂಟದ ಹೋಟೆಲ್‌ ಇರಲಿಲ್ಲ. ಅದಕ್ಕಾಗಿ ನಾವು ಈ ಏರಿಯಾ ಆಯ್ಕೆ ಮಾಡಿಕೊಂಡೆವು’ ಎಂದು ಮೀರಾಸ್‌ ಬೀಗರೂಟ ಹುಟ್ಟಿಕೊಂಡ ಬಗೆ ವಿವರಿಸಿದರು ಯೋಗೇಶ್‌.

NON veg

ಹೋಟೆಲ್‌ ಉದ್ಯಮದ ಹಿನ್ನೆಲೆ ಇಲ್ಲದೇ ರೆಸ್ಟೋರೆಂಟ್‌ ಶುರು ಮಾಡಿ ಯಶಸ್ವಿಯಾಗಿರುವ ಈ ಹುಡುಗರು ಮುಂದೆ ನಗರದ ವಿವಿಧೆಡೆ ಶಾಖೆಗಳನ್ನು ತೆರೆಯುವ ಕನಸು ಹೊಸೆಯುತ್ತಿದ್ದಾರೆ. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಂಡಿರುವುದು ಇವರ ಯಶಸ್ಸಿನ ಗುಟ್ಟುಗಳಲ್ಲಿ ಒಂದು. ‘‘ನಮ್ಮ ಹೋಟೆಲ್‌ಗೆ ಬರುವ ಗ್ರಾಹಕರು ಊಟ ಚೆನ್ನಾಗಿದ್ದರೆ  ಹೊಗಳುತ್ತಾರೆ. ಹೆಚ್ಚುಕಡಿಮೆ ಆಗಿದ್ದರೆ ‘ಮಧು, ಇವತ್ತು ಬಿರಿಯಾನಿಗೆ ಸ್ವಲ್ಪ ಉಪ್ಪು ಕಮ್ಮಿ ಆಗಿದೆ ಸರಿಮಾಡ್ಕೊ’ ಎನ್ನುತ್ತಾರೆ. ಸುಮ್‌ಸುಮ್ಮನೆ ಕಿರಿಕಿರಿ ಮಾಡುವ ಯಾವ ಗಿರಾಕಿಯೂ ನಮಗಿಲ್ಲ’ ಎನ್ನುತ್ತಾ ಕಸ್ಟಮರ್‌ ಜೊತೆಗಿನ ತಮ್ಮ ಬಾಂಧವ್ಯದ ಬಗ್ಗೆ ಮಾಲೀಕರಿಬ್ಬರೂ ಹೇಳಿಕೊಂಡರು.

ಹೋಟೆಲ್‌ ಆರಂಭಿಸುವ ಮುನ್ನ ಸಾಕಷ್ಟು ಸಮೀಕ್ಷೆ ನಡೆಸಿರುವ ಈ ಹುಡುಗರು ನಾಟಿ ಶೈಲಿಯ ಬಾಡೂಟದ ಪರಿಮಳವನ್ನು ನಗರದಾದ್ಯಂತ ಪಸರಿಸುತ್ತಿದ್ದಾರೆ. ಸದ್ಯದಲ್ಲೇ ಸಿಲ್ಕ್‌ಬೋರ್ಡ್‌ನಲ್ಲಿ ಮತ್ತೊಂದು ಶಾಖೆಯನ್ನು ತೆರೆಯುತ್ತಿದ್ದಾರೆ. ನಾರ್ತ್ ಇಂಡಿಯನ್‌ ಕಸ್ಟಮರ್‌ಗಳು ಇಲ್ಲಿಗೆ ಬಂದು ಊಟ ಮಾಡಿ, ‘ಮಂಡ್ಯದ ಸ್ನೇಹಿತನ ಮನೆಯಲ್ಲಿ ಉಂಡಷ್ಟೇ ರುಚಿ ಸಿಕ್ಕಿತು’ ಎಂಬ ಕಮೆಂಟ್ಸ್‌ ನೀಡಿದ್ದನ್ನು ನೆನೆಯುತ್ತಾರೆ ಮಧು. ಅಂದಹಾಗೆ, ಇವರ ಹೋಟೆಲ್‌ ಊಟದ ರುಚಿ ಬಾಯಿಂದ ಬಾಯಿಗೆ ಹರಡಿಯೇ ಮಲ್ಲೇಶ್ವರ, ಕೋರಮಂಗಲ, ಜೆ.ಪಿ.ನಗರದಿಂದಲೂ ಗ್ರಾಹಕರನ್ನು ಕರೆದು ತರುತ್ತಿದೆ. ಹಾಗೆಯೇ ಕಾಯಂ ಆದ ಫ್ಯಾಮಿಲಿ ಕಸ್ಟಮರ್‌ಗಳೂ ಇದ್ದಾರೆ.  ಟೇಸ್ಟಿಂಗ್‌ ಪೌಡರ್‌ ಲೇಪಿಸದ, ವಿಪರೀತ ಖಾರ ಇಲ್ಲದ ಇಲ್ಲಿನ ಖಾದ್ಯಗಳ ರುಚಿ ಕ್ಲಾಸ್‌ ಮತ್ತು ಮಾಸ್‌ ಇಬ್ಬರಿಗೂ ಇಷ್ಟವಾಗುವಂತಿದೆ.