ಪೋಷಕರೇ, ವಯಸ್ಸಿಗೆ ಬಂದ ಮಕ್ಕಳ ನಡುವಳಿಕೆ ಹೇಗಪ್ಪಾ ಸರಿಪಡಿಸೋದು ಅಂತ ತಲೆಕೆಡಿಸ್ಕೊಂಡಿದ್ರೆ ಈ ಆರ್ಟಿಕಲ್ ಓದಿ…

0
794

ಈಗಿನ ಜೆನೆರೇಷನ್ ಸಿಕ್ಕಾಪಟ್ಟೆ ಫಾಸ್ಟ್. ಎಲ್ಲದಕ್ಕೂ ಧಾವಂತ, ಒತ್ತಡಗಳನ್ನು ಪಡುವ ಯುವಜನಾಂಗವನ್ನು ನಿಯಂತ್ರಣದಲ್ಲಿಡುವುದು ಕಷ್ಟಕರವಾದ ವಿಷಯವೇ ಸರಿ.. ಹೀಗಿರುವಾಗ ಕೌಟುಂಬಿಕ ಸಮಸ್ಯೆಗಳು ಹದಿಹರೆಯದವರಲ್ಲಿ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರಬಹುದು. ಪ್ರೌಢವಯಸ್ಸಿನ ಮಕ್ಕಳ ಪಾಲನೆಯಲ್ಲಿ ಪೋಷಕರಿಗೆ ತಮ್ಮದೇ ಆದ ದ್ವಂದ್ವ ಹಾಗು ಮಾನಸಿಕ ಕ್ಲೇಶಗಳು ಉಂಟಾಗಬಹುದು.

ಬದಲಾದ ಸಮಾಜ ವ್ಯವಸ್ಥೆ, ಪಾಶ್ಚಿಮಾತ್ಯ ಸಂಸ್ಕೃತಿಗಳ ಅನುಕರಣೆ, ನಮ್ಮ ಪರಂಪರೆ ಮತ್ತು ಕೌಟುಂಬಿಕ ವ್ಯವಸ್ಥೆಗಳ ಮೇಲೆ ಧಾಳಿ ಮಾಡಿ ಬೆಳೆಯುವ ಮಕ್ಕಳ ನಡುವಳಿಕೆ, ಭಾವನೆ, ಮಾನಸಿಕ ಚಿಂತನೆಗಳ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಸದಸ್ಯನು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತಾರೆ. ತಂದೆ ತಾಯಿಗಳ ಉದ್ಯೋಗ, ಹಣಕಾಸು ಸಮಸ್ಯೆ, ಕೌಟುಂಬಿಕ ಹಿನ್ನಲೆ ಮುಂತಾದವುಗಳು ಪ್ರಮುಖ ಪಾತ್ರವಹಿಸುತ್ತವೆ.

ಪರಿಣಾಮ ಬೀರುವ ಕೆಲವೊಂದು ಪೋಷಕರ ನಡುವಳಿಕೆಗಳು:

  • ಅತಿಯಾದ ಆಕಾಂಕ್ಷೆ ಹೊಂದುವುದು
  • ಲಿಂಗಭೇದ
  • ಸಾಂಸ್ಕೃತಿಕ ಹಿನ್ನಲೆ
  • ಪೋಷಕರ ವಿದ್ಯಾರ್ಹತೆ
  • ಪೋಷಕರ ಸಾಮಾಜಿಕ ವ್ಯವಹಾರ
  • ಹಣಕಾಸಿನ ಸಮಸ್ಯೆಗಳು
  • ಕೌಟುಂಬಿಕ ಕಲಹ
  • ವೈವಾಹಿಕ ಸಮಸ್ಯೆಗಳು

ಪೋಷಕರ ವರ್ತನೆ ಹಾಗು ಮಕ್ಕಳ ನಡುವಳಿಕೆ:

೧) ಅತಿ ಸಂರಕ್ಷಣೆ (Over Protectiveness)

ಅತಿಯಾದ ಕಾಳಜಿ,ಅತಿಯಾದ ಶಿಸ್ತು, ಮಕ್ಕಳನ್ನು ಅವಲಂಬಿತರಾಗಿ ಮಾಡಿ ಕ್ರಿಯಾಶೀಲರಾಗದಂತೆ ತಡೆಗಟ್ಟುತ್ತದೆ. ಮಕ್ಕಳಲ್ಲಿ ಭಯವನ್ನು ಮೂಡಿಸುತ್ತದೆ.

೨) ಇಷ್ಟಬಂದಂತೆ ಮಾಡುವುದು:

ಮಕ್ಕಳಿಗೆ ಕಾಲಕಾಲಕ್ಕೆ ತಿಳುವಳಿಕೆ ನೀಡದೆ, ಅವರ ತಪ್ಪನ್ನು ತಿದ್ದದೆ ಅವರು ಇಷ್ಟಬಂದಂತೆ ನಡೆದು ಕೊಳ್ಳಲು ಬಿಡುವುದರಿಂದ ಮಕ್ಕಳು ಸರಿಯಾದ ದಾರಿಯಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಚೈತನ್ಯ, ಪ್ರತಿಭೆ ಹೊರಬರಲು ಅಗತ್ಯವಿರುವ ಸ್ವಾತಂತ್ರ್ಯ ಮಕ್ಕಳಿಗೆ ಬೇಕೇ ಬೇಕು. ಅದರ ಬಗ್ಗೆ ವ್ಯವಸ್ಥಿತ ರೀತಿಯಲ್ಲಿ ಗಮನ ಹರಿಸಿ ಅನುಕೂಲ ಮಾಡಿಕೊಡಬೇಕು.

೩) ಸ್ವೇಚ್ಛೆಯಾಗಿ ಬಿಡುವುದು:

ಅತಿಯಾದ ಸ್ವಾತಂತ್ರ್ಯ ಹದಿಹರೆಯದವರಲ್ಲಿ ಸ್ವೇಚ್ಛೆಯಾಗಿರಲು ಪ್ರಚೋಧಿಸುತ್ತದೆ. ಇದು ಅವರಲ್ಲಿ ಅಧಿಕಾರಯುತ ಪ್ರವೃತ್ತಿ ಉಂಟು ಮಾಡಿ ಸಮಾಜ ಮತ್ತು ಕುಟುಂಬಗಳ ಅನುಸರಣೆಯಲ್ಲಿ ಭಂಗ ಉಂಟುಮಾಡುತ್ತದೆ.

೪) ತಿರಸ್ಕಾರ ಮನೋಭಾವ:

ಪೋಷಕರ ಅಥವಾ ಶಿಕ್ಷಕರ ಮನೋಭಾವನೆ ಮಕ್ಕಳಲ್ಲಿ ಅಸಹಾಯಕತೆ, ಉದ್ವಿಗ್ನತೆ, ಶತ್ರುತ್ವ, ದ್ವೇಷ ಬೆಳೆಸುತ್ತದೆ.

೫) ಸ್ವೀಕಾರ:

ಪ್ರೀತಿ, ವಿಶ್ವಾಸ, ಹಂಚಿಕೊಳ್ಳುವ ಮನೋಭಾವ, ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ವಿಧಾನ, ಹದಿಹರೆಯದವರಲ್ಲಿ ಹೊಂದಾಣಿಕೆ, ಸ್ನೇಹತ್ವ, ವಿಧೇಯತೆ, ಬೇರೆಯವರ ಭಾವನೆಗಳಿಗೆ ಸ್ಪಂದಿಸುವಂತೆ ಮಾಡುತ್ತದೆ.

೬) ಅಧಿಕಾರಯುತ ನಡವಳಿಕೆ:

ಪೋಷಕರ ಅಧಿಕಾರಯುತ ನಡವಳಿಕೆ ಮಕ್ಕಳಲ್ಲಿ ಶಿಸ್ತುರ ಪ್ರತಿಕೂಲ ಪರಿಣಾಮಗಳಾದ ಮುಂದಾಲೋಚನೆ ಮತ್ತು ಗ್ರಹಿಕೆ ಕಡಿಮೆ ಮಾಡಿ ಒಂದು ರೀತಿಯ ಕೀಳರಿಮೆ ಬೆಳೆಸುತ್ತದೆ.

೭) ಅಧೀನರಾಗುವುದು:

ಪೋಷಕರು ಹಾಗು ಶಿಕ್ಷಕರು ಮಕ್ಕಳ ಬೇಡಿಕೆಗಳನ್ನೆಲ್ಲ ಮನ್ನಿಸಿ ಈಡೇರಿಸುತ್ತಾ ಬಂದಲ್ಲಿ ಹಣದ ವಸ್ತುವಿನ ಮೌಲ್ಯವನ್ನು ಮಕ್ಕಳು ಅರಿಯದೆ ಸೋಮಾರಿಗಳಾಗುತ್ತಾರೆ. ಇದೆ ರೀತಿಯ ಈಡೇರಿಕೆಯನ್ನು ತಮ್ಮ ಸಹಪಾಠಿ, ಸಹೋದರರಲ್ಲಿ ಅಪೇಕ್ಷಿಸುತ್ತಾರೆ. ತಮ್ಮ ಕೋರಿಗೆಗಳು ಈಡೇರದ ಪಕ್ಷದಲ್ಲಿ ಕೋಪತಾಪವನ್ನು ಪ್ರದರ್ಶಿಸಲು ಕೂಡ ಹಿಂಜರಿಯುವುದಿಲ್ಲ.

೮) ಪಕ್ಷಪಾತ ಮಾಡುವುದು:

ಪೋಷಕರು ಮಕ್ಕಳಲ್ಲಿ ಭೇದ-ಭಾವ ಮಾಡಿದಾಗ, ಮಕ್ಕ್ಕಳು ದ್ವೇಷ ಅಸೂಯೆ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾರೆ.

೯) ಅತಿಯಾದ ಅಪೇಕ್ಷೆ:

ಪೋಷಕರ ಅತಿಯಾದ ಆಕಾಂಕ್ಷೆ, ಅಪೇಕ್ಷೆ, ಶೈಕ್ಷಣಿಕ ಒತ್ತಡ ಮಕ್ಕಳನ್ನು ಮಾನಸಿಕ ಉದ್ವೇಗಕ್ಕೆ ಒಳಪಡಿಸಿ ಬಳಲುವಂತೆ ಮಾಡುತ್ತದೆ. ಇದು ಅವರಲ್ಲಿರುವ ಆತ್ಮವಿಶ್ವಾಸ, ಪ್ರಭುದ್ದತೆಗೆ ಪೆಟ್ಟು ಕೊಡಬಹುದು.

ಹದಿಹರೆಯದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೌಟುಂಬಿಕ ಮೌಲ್ಯಗಳ ಜೊತೆಗೆ ಕುಟುಂಬದವರೆಲ್ಲರ ನಡವಳಿಕೆಗಳು, ಜವಾಬ್ದಾರಿಗಳು ಬಹಳ ಮುಖ್ಯ. ಆದ್ದರಿಂದ ಮಕ್ಕಳ ಪಾಲನೆಯ ಜೊತೆಗೆ ಅವರ ಪ್ರಭುದ್ದತೆಯು ಅರಳಲು ಅವಶ್ಯಕವಾದ ವಾತಾವರಣವನ್ನು ಸೃಷ್ಟಿಸುವುದು ಎಲ್ಲ ಪೋಷಕರ ಕರ್ತವ್ಯವಾಗಿದೆ.