ಪ್ರವಾಹದಲ್ಲಿ ಉತ್ತರ ಕರ್ನಾಟಕದ ಜನ; ಧಾರವಾಡ, ಹಾವೇರಿಯಲ್ಲಿ 1500 ಮನೆ ಕುಸಿದು ಹಾನಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..

0
302

ಎಂದೂ ಕಾಣದ ಪ್ರವಾಹದಲ್ಲಿ ಉತ್ತರ ಕರ್ನಾಟಕದ ಜನರು ಸಿಲುಕ್ಕಿದು, ಈ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮನೆಗಳೇ ಕುಸಿದು ಬಿಳ್ಳುತ್ತಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಆಗಿದೆ. ಧಾರವಾಡ, ಹಾವೇರಿಯಲ್ಲಿ 1500 ಮನೆ ಕುಸಿದು ಬಿದ್ದಿದೆ. 13,398 ಜನರ ಸ್ಥಳಾಂತರಗೊಳಿಸಲಾಗಿದೆ. ಹಿರಣ್ಯಕೇಶಿ, ಮಾರ್ಕಂಡೇಯ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ಸೇತುವೆ ಮೇಲೆ ಸುಮಾರು ಎಂಟು ಅಡಿಯಷ್ಟು ನೀರು ಹರಿಯುತ್ತಿದೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 1243 ಮನೆಗಳು ಕುಸಿದಿವೆ. ಹಾವೇರಿ ಜಿಲ್ಲೆಯಲ್ಲಿ 389 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 3, ಹಾವೇರಿ ಜಿಲ್ಲೆಯಲ್ಲಿ 2 ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಮನೆಯೊಂದು ಬಿದ್ದು ಮೂವರು ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 6, ಹಾವೇರಿಯಲ್ಲಿ 3 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಗಾಳಿ, ಮಳೆಯ ಅಬ್ಬರ ಮುಂದುವರಿದಿದೆ. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಗುರುವಾರ 12 ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಆ.10ರವರೆಗೆ ರಜೆ ಘೋಷಿಸಲಾಗಿದೆ. ಕೊಡಗು, ಹಾವೇರಿ, ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ರಜೆ ಘೋಷಿಸಲಾಗಿದೆ. ಉಳಿದಂತೆ ಗುರುವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ತಾಲೂಕಿನಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಎನ್‌.ಆರ್‌.ಪುರ, ಕೊಪ್ಪ ತಾಲೂಕಿನಲ್ಲಿ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ತಾಲೂಕಿನಲ್ಲಿ, ಗದಗ ಜಿಲ್ಲೆ ರೋಣ, ನರಗುಂದ ತಾಲೂಕುಗಳಲ್ಲಿ ಮತ್ತು ಶಿರಹಟ್ಟಿತಾಲೂಕಿನ ಗ್ರಾಮೀಣ ಭಾಗಕ್ಕೆ ಗುರುವಾರ ರಜೆ ಘೋಷಿಸಲಾಗಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗದ ನಿಪ್ಪಾಣಿ ಹತ್ತಿರ ಬಿರುಕು ಬಿಟ್ಟು ಸಂಚಾರ ಸ್ಥಗಿತಗೊಂಡಿರುವ ಕಾರಣ ಹಾವೇರಿಯಿಂದ ಧಾರವಾಡ ಕಡೆಗೆ ಹೋಗುವ ಮಾರ್ಗದ ವಾಹನಗಳನ್ನು ಶಿಗ್ಗಾಂವಿ, ಲಕ್ಷ್ಮೇಶ್ವರ ಮುಖಾಂತರ ಗದಗ ಮಾರ್ಗವಾಗಿ ವಿಜಯಪುರ ಮುಂತಾದ ಕಡೆ ಸಂಚರಿಸಲು ಸೂಚಿಸಲಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ನಿಪ್ಪಾಣಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 4 ಬಿರುಕು ಬಿಟ್ಟಕಾರಣ ಪುಣೆ-ಬೆಂಗಳೂರು ಮಾರ್ಗದ ವಾಹನಗಳ ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ. ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಇಡೀ ದಿನ ತುಂತುರು ಮಳೆ ಸುರಿಯಿತು.

ಇತ್ತ ಘಟಪ್ರಭಾ ನದಿಯಿಂದ ಉಂಟಾದ ಪ್ರವಾಹದಿಂದಾಗಿ ಮಾರಾಪೂರ ಗ್ರಾಮದ 20 ಮನೆಗಳು ಮುಳುಗಡೆಯಾಗಿವೆ. ನೆರೆ ಪೀಡಿತರಿಗೆ ಊಟದ ಕೇಂದ್ರ ಆರಂಭಿಸಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗುತ್ತಿದೆ. ಡವಳೇಶ್ವರ ಗ್ರಾಮ ಜಲಾವೃತವಾಗುವ ಭೀತಿಯಿದ್ದು, ಗ್ರಾಮಕ್ಕೆ ಶಾಸಕ ಸಿದ್ದು ಸವದಿ ಭೇಟಿ ನೀಡಿದ್ದಾರೆ.