ಸಿಎಂ ಆಪ್ತ ಅಧಿಕಾರಿ ಮತ್ತು ಸಚಿವ ಮಹದೇವಪ್ಪ ಮನೆಯಲ್ಲಿ 2000 ರೂ. ನೋಟಿನ 6 ಕೋಟಿಯ ನೋಟು ಪತ್ತೆ!

0
1307

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಅಧಿಕಾರಿ ಚಿಕ್ಕರಾಯಪ್ಪ ನಿವಾಸದ ಮೇಲೆ ಬುಧವಾರ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಗುರುವಾರ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಆಪ್ತ ಅಧಿಕಾರಿ ಜಯಚಂದ್ರ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಈ ಇಬ್ಬರೂ ಅಧಿಕಾರಿಗಳ ನಿವಾಸದ ಮೇಲೆ ದಾಳಿಯ ವೇಳೆ ಒಟ್ಟು ಆರು ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಿಗ್ಭ್ರಮೆ ಹುಟ್ಟಿಸುವ ಸಂಗತಿಯೆಂದರೆ, ಈ ಇಬ್ಬರೂ ಅಧಿಕಾರಿಗಳ ಬಳಿ ದೊರಕಿರುವ ನಗದು ಪೈಕಿ 4.7 ಕೋ. ರೂ.ನಷ್ಟು ಮೊತ್ತ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 2,000 ರೂ. ನೋಟುಗಳ ರೂಪದಲ್ಲಿದೆ.

ಅಂದರೆ, ಎರಡು ಸಾವಿರ ರೂ.ಗಳ 25 ಕಂತೆಗಳಷ್ಟು ನೋಟುಗಳು ಪತ್ತೆಯಾಗಿವೆ. ಅಲ್ಲದೆ, ಚಲಾವಣೆ ಕಳೆದುಕೊಂಡಿರುವ 500 ಹಾಗೂ 1000 ರೂ.ಗಳ ನೂರಾರು ಕಂತೆ ನೋಟುಗಳು, ಜತೆಗೆ ಚಿನ್ನದ ಬಿಸ್ಕೆಟ್ ಮತ್ತು ಚಿನ್ನಾಭರಣಗಳು ಸೇರಿದಂತೆ ಏಳು ಕೆ.ಜಿ. ಚಿನ್ನ, ಏಳು ಕೆ.ಜಿ. ಬೆಳ್ಳಿ ಹಾಗೂ ಅಪಾರ ಮೌಲ್ಯದ ಚರಾಸ್ತಿಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರೂ ಅಧಿಕಾರಿಗಳ ಆಸ್ತಿ ಪರಿಶೀಲನೆ ಗುರುವಾರ ತಡರಾತ್ರಿಯವರೆಗೂ ಮುಂದುವರಿದಿತ್ತು.

ಈ ಅಧಿಕಾರಿಗಳ ಬಳಿ ಇಷ್ಟು ಕಡಿಮೆ ಅವಧಿಯಲ್ಲಿ 2,000 ರೂ. ಮೌಲ್ಯದ ರಾಶಿ ರಾಶಿ ಹೊಸ ನೋಟುಗಳು ಹೇಗೆ ಲಭ್ಯವಾದವು ಎಂಬುದು ದಾಳಿ ನಡೆಸಿದ ಅಧಿಕಾರಿಗಳಿಗೂ ಯಕ್ಷಪ್ರಶ್ನೆಯಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ರಾಜ್ಯದ ಅಧಿಕಾರಸ್ಥರ ಪರಮಾಪ್ತ ಅಧಿಕಾರಿಗಳ ಬಳಿ ಈ ಪ್ರಮಾಣದಲ್ಲಿ ಹೊಸ ಕರೆನ್ಸಿ ದೊರಕಿರುವುದು ರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ.

ಸಿಎಂ ಆಪ್ತರಾಗಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಅವರ ಬಾಣಸವಾಡಿ ನಿವಾಸದ ಮೇಲೆ ದಾಳಿ ನಡೆದಿದ್ದರೆ, ಸಚಿವ ಮಹದೇವಪ್ಪ ಆಪ್ತರಾದ ರಾಜ್ಯ ರಸ್ತೆ ಅಭಿವೃದ್ಧಿ ಯೋಜನಾಧಿಕಾರಿ ಜಯಚಂದ್ರ ಅವರ ಸಂಜಯ ನಗರದಲ್ಲಿನ ನಿವಾಸದ ಮೇಲೆ ಗುರುವಾರ ದಾಳಿ ಆರಂಭಗೊಂಡಿದೆ.

ಕಾರು ಖರೀದಿಸಿ ಸಿಕ್ಕ ಬಿದ್ದರು?: ಆದಾಯ ಇಲಾಖೆ ಅಧಿಕಾರಿಗಳ ಈ ದಾಳಿಗೆ ಪ್ರೇರಣೆಯಾಗಿದ್ದು ಜಯಚಂದ್ರ ಅವರ ಪುತ್ರ ತ್ರಿಜೇಶ್ ಇತ್ತೀಚೆಗೆ ಲ್ಯಾಂಬರ್ಗಿನಿ ಕಾರನ್ನು ಸಂಪೂರ್ಣ 8 ಕೋಟಿ ರೂ. ನಗದು ನೀಡಿ ಖರೀದಿಸಿದ್ದು ಕಾರಣವಾಗಿದೆ ಎನ್ನುತ್ತವೆ ಮೂಲಗಳು.

ಈ ದುಬಾರಿ ಐಷಾರಾಮಿ ಕಾರನ್ನು ಖರೀದಿಸಿದ ಅನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಂಪೂರ್ಣ ಸಿದ್ಧತೆ ನಡೆಸಿ ಈ ದಾಳಿಯನ್ನು ಸಂಘಟಿಸಿದರು ಎನ್ನುತ್ತವೆ ಮೂಲಗಳು. ಈ ದಾಳಿಯ ವೇಳೆ ಎಂಟು ಕೋಟಿ ರೂ. ಮೌಲ್ಯದ ಲ್ಯಾಂಬರ್ಗಿನಿ ಕಾರಿನ ಜತೆಗೆ ತ್ರಿಜೇಶ್ ಹೆಸರಿನಲ್ಲೇ ಇರುವ 12 ಕೋಟಿ ರೂ. ಮೌಲ್ಯದ ಪೋರ್ಷ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಎರಡು ಕಾರುಗಳನ್ನು ಹಳೆ ನೋಟುಗಳನ್ನು ಇತ್ತೀಚೆಗೆ ನೀಡಿ ಖರೀದಿ ಮಾಡಲಾಗಿತ್ತು ಎನ್ನಲಾಗುತ್ತಿದೆ.

ಐಟಿ ಇಲಾಖೆ ಹೇಳಿಕೆ: ಕರ್ನಾಟಕ ಮತ್ತು ಗೋವಾ ಐಟಿ ಇಲಾಖೆ ಕರ್ನಾಟಕ ಸರ್ಕಾರದ ಇಬ್ಬರು ಎಂಜಿನಿಯರ್‍ಗಳು ಹಾಗೂ ಇಬ್ಬರು ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ 6 ಕೋಟಿ ರೂ. ನಗದು, 7 ಕೆಜಿ ಚಿನ್ನಾಭರಣ ಪತ್ತೆಯಾಗಿವೆ. ಲಭಿಸಿರುವ ಹಣದಲ್ಲಿ 4.7 ಕೋಟಿ ರೂ. ಹೊಸ 2000 ರೂಪಾಯಿಯ ನೋಟುಗಳು. ಇದೇ ದಾಳಿ ವೇಳೆ ಹಲವು ಪ್ರಾಪರ್ಟಿಗಳ ದಾಖಲೆಗಳು ಸಿಕ್ಕಿದ್ದು ಇದನ್ನು ವಶಪಡಿಸಿಕೊಂಡಿದ್ದೇವೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ದಾಳಿ ಮುಂದುವರೆದಿದೆ ಎಂದು ಆದಾಯ ತೆರಿಗೆ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.