ವಿಶ್ವದ ದುಬಾರಿ ರೋಲ್ಸ್ ರಾಯ್ಸ್ ಸೆಡಾನ್ ಕಾರು ಖರೀದಿಸಿದವರು ಮತಗಳನ್ನು ಖರೀದಿಸಲು ಸಾಧ್ಯವಿಲ್ಲ; ಸಾಕ್ಷಿ ಎಂ.ಟಿ.ಬಿ ನಾಗರಾಜ್.!

0
261

ಶ್ರೀ ಮಂತ ರಾಜಕಾರಣಿಗಳ ಪಟ್ಟಿಗೆ ಸೇರಿದ ಎಂಟಿಬಿ ನಾಗರಾಜ್ ಹೊಸಕೋಟೆ ಉಪಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಸೋಲು ಕಂಡಿದ್ದು, ಬಿಜೆಪಿಯ ಎಂಟಿಬಿ ನಾಗರಾಜ್ ಅವರನ್ನು 11 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಜಯಗೊಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಎಂಟಿಬಿ 7,597 ಮತಗಳ ಅಂತರದಿಂದ ಬಿಜೆಪಿಯ ಶರತ್ ಬಚ್ಚೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ ಶರತ್ ಬಚ್ಚೇಗೌಡರ ಸೀಟಿ ಕುಕ್ಕರ್ ಹೊಡೆತ್ತಕ್ಕೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಮಾಲೀಕ ಎಂಟಿಬಿ ನೆಲಕಚ್ಚಿದ್ದಾರೆ.

ಹೌದು ಎಂಟಿಬಿ ನಾಗರಾಜ್ ಅವರು ವಿಶ್ವದ ದುಬಾರಿ ರೋಲ್ಸ್ ರಾಯ್ಸ್ ಸೆಡಾನ್ ಕಾರು ಖರೀದಿಸಿ ಭಾರಿ ಸುದ್ದಿಯಲ್ಲಿದ್ದರು, ಆದರೆ ದುಬಾರಿ ಕಾರು ಖರೀದಿ ಮಾಡಿದಂತೆ ಜನರ ಮತವನ್ನು ಖರೀದಿ ಮಾಡುತ್ತೇನೆ ಎನ್ನುವ ಭ್ರಮೆಯಲ್ಲಿದ್ದ ಎಂಟಿಬಿಗೆ ಪ್ರಜೆಗಳ ಶಕ್ತಿ ತಿಳಿದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಕಾಂಗ್ರೆಸ್ ಪಕ್ಷದಲಿ ಮಂತ್ರಿಯಾಗಿದ್ದ ಎಂಟಿಬಿ ಕಾಂಗ್ರೆಸ್ ಪಕ್ಷದಿಂದ ಬಂಡಾಯ ಎದ್ದು ಕೊನೆಗೂ ಬಿಜೆಪಿ ಟಿಕೆಟ್ ಪಡೆದು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಆದರೆ ಕಳೆದ ಬಾರಿ ಏಳು ಸಾವಿರ ಮತಗಳಿಂದ ಸೋತಿದ್ದ ಬಿಜೆಪಿಯ ಶರತ್ ಬಚ್ಚೇಗೌಡ ಪಕ್ಷದ ಹೈಕಮಾಂಡ್ ಮನವಿಗೂ ಜಗ್ಗದೇ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು. ಈ ಬಗ್ಗೆ ಸಿಎಂ ಯಡಿಯೂರಪ್ಪ ಕೂಡಾ ಶರತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಟಿಬಿ ನನ್ನ ಸೋಲಿಗೆ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡರ ಬೆಂಬಲವಿತ್ತು. ನೇರವಾಗಿ ಪುತ್ರನ ಪರವಾಗಿ ಪ್ರಚಾರ ನಡೆಸದೇ ಇದ್ದರೂ ಪರೋಕ್ಷವಾಗಿ ಗೆಲುವಿಗೆ ಏನೆಲ್ಲಾ ತಂತ್ರಗಾರಿಕೆಗಳನ್ನು ನಡೆಸಬೇಕೋ ಅದನ್ನು ಮಾಡಿದರು. ಸ್ಥಳೀಯ ಬಿಜೆಪಿ ಮುಖಂಡರಿಗೆ, ಬೆಂಬಲಿಗರಿಗೆ ಚುನಾವಣೆಯಲ್ಲಿ ಏನೆಲ್ಲಾ ತಂತ್ರಗಳನ್ನು ಅನುಸರಿಸಬೇಕು ಎಂಬುವುದನ್ನು ದೂರದಲ್ಲಿದ್ದೇ ಸೂಚನೆ ನೀಡುತ್ತಿದ್ದರು. ಅಪ್ಪ-ಮಗನ ತಂತ್ರಗಾರಿಕೆಯಿಂದ ನನ್ನ ಸೋಲಿಗೆ ಕಾರಣರಾಗಿದ್ದಾರೆ. ಇವರ ವಿರುದ್ಧ ಹೈ ಕಮಾಂಡ್ ಕೂಡಲೇ ಸರಿಯಾದ ಕ್ರಮ ತೆಗೆದುಕೊಂಡು ನ್ಯಾಯ ಒದಗಿಸಬೇಕೆಂದು ಎಂಟಿಬಿ ಅಳಲು ತೋಡಿಕೊಂಡಿದ್ದಾರೆ.

ಸುಮಲತಾ ಕ್ರಮದಲ್ಲಿ ಗೆಲುವು?

ಲೋಕಸಭಾ ಉಪಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಸ್ವಾಭಿಮಾನವನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದರು. ಸ್ವಾಭಿಮಾನದ ಹೆಸರಿನಲ್ಲಿ ನಡೆದ ಈ ಕ್ಯಾಂಪೇನ್ ಸಕ್ಸಸ್ ಆಗಿತ್ತು. ಜನರು ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿ ಸಂಸದೆಯನ್ನಾಗಿ ಆಯ್ಕೆ ಮಾಡಿದರು. ಇದೇ ತಂತ್ರವನ್ನು ಹೊಸಕೋಟೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ ಶರತ್ ಬಚ್ಚೇಗೌಡ ಅನುಸರಿಸಿದರು. ಕ್ಷೇತ್ರದಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಮತದಾರರ ಮುಂದೆ ಹೋದರು. ಕೊನೆಗೂ ಈ ಸ್ವಾಭಿಮಾನದ ತಂತ್ರ ಶರತ್ ಬಚ್ಚೇಗೌಡರನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದೆ.

Also read: ಸಿಎಲ್‍ಪಿ, ಕೆಪಿಸಿಸಿ ಸ್ಥಾನಕ್ಕೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ; ಮುಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜನಾರ್ದನ ಪೂಜಾರಿ ಹೇಳಿಕೆ.!