ಪುರಾಣ ಪ್ರಸಿದ್ಧ ಕೋಲಾರದ ಅಂತರಗಂಗೆ ಬೆಟ್ಟದ ವಿಸ್ಮಯ ತಿಳಿದುಕೊಂಡ್ರೆ, ಈಗ್ಲೇ ಪ್ರವಾಸಕ್ಕೆ ಹೋಗೊಕ್ಕೆ ಪ್ಲ್ಯಾನ್ ಮಾಡ್ತೀರಾ..

0
2175

Kannada News | Karnataka Temple History

ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣಗಳಿವೆ. ಕೆಲವು ಪ್ರದೇಶಗಳಿಗೆ ಅದರ ವೈಶಿಷ್ಟ್ಯ ತೆಯಿಂದಾಗಿ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ. ಉದಾಹರಣೆಗೆ ಸರ್ಪವೊಂದು ತನ್ನ 5 ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುವ ಕುಮಾರ ಪರ್ವತವಿರುವ ಪ್ರದೇಶ ಇಂದು ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಅಂತೆಯೇ ವೈಶಿಷ್ಟ್ಯ ತೆಯಿಂದ ಕೂಡಿರುವಂತೆ ಮತ್ತೊಂದು ಅಚ್ಚರಿಯ ಪ್ರದೇಶ ಕೋಲಾರ ಜಿಲ್ಲೆಯಲ್ಲಿದೆ. ಅದುವೇ ಅಂತರಗಂಗೆ ಬೆಟ್ಟ.

ಈ ಬೆಟ್ಟದ ಸುತ್ತಲೂ ಹನಿ ನೀರಿಗೆ ಪರದಾಟವಿದೆ. ಅಲ್ಲಿ 1000 ಅಡಿಯಷ್ಟು ನೆಲವನ್ನು ಕೊರೆದರೆ ಅಲ್ಪ ನೀರು ಸಿಗುವುದಾದರೂ ಅದು ಫ್ಲೋರೈಡ್ ಮಿಶ್ರಿತವಾಗಿರುತ್ತದೆ. ಆದರೆ ಬೆಟ್ಟದ ತುದಿಯಲ್ಲೊಂದು ಒರತೆ ಇದ್ದು, ಬರುವ ನೀರು ಅತ್ಯಂತ ಪರಿಶುದ್ಧ ಮತ್ತು ಒಮ್ಮೊಯೂ ನಿಂತಿಲ್ಲ. ಕೋಲಾರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಒಂದಾದ ಅಂತರಗಂಗೆ ಬೆಟ್ಟ ಕೋಲಾರ ನಗರದಿಂದ ಕೇವಲ ನಾಲ್ಕು ಕಿಲೋಮೀಟರರ್ ದೂರದಲ್ಲಿದ್ದು, ಚಾರಣಿಗರನ್ನು, ಮತ್ತು ಆಸ್ತಿಕರನ್ನು ಕೈ ಬೀಸಿ ಕರೆಯುತ್ತದೆ.

ಕರ್ನಾಟಕದಲ್ಲಿ ಅಷ್ಟೇ ಅಲ್ಲ ಕೇರಳ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಪ್ರವಾಸಿಗರು ಕೂಡ ಇಲ್ಲಿಗೆ ಬರುತ್ತಾರೆ. ಅಂತರ್ಗಾಮಿ ಜಲ ಮೂಲವೊಂದು ಇಲ್ಲಿ ಇರುವುದರಿಂದ ಈ ಬೆಟ್ಟಕ್ಕೆ ಅಂತರಗಂಗೆ ಬೆಟ್ಟ ಎನ್ನುವ ಹೆಸರು ಬಂದಿದೆ. ಬೆಟ್ಟದ ಮೇಲೆ ಶಿವನ ದೇವಸ್ಥಾನ, ಅದರ ಪಕ್ಕದಲ್ಲೇ ಕಲ್ಯಾಣಿ, ಗಣೇಶನ ವಿಗ್ರಹ ಹಾಗೂ ಬಸವಣ್ಣನ ಮೂರ್ತಿಯ ಬಾಯಿಯಿಂದ ನಿರಂತರವಾಗಿ ಗಂಗೆ ಹರಿಯುವುದು ಇಲ್ಲಿನ ವಿಶೇಷ.

ಈ ಬೆಟ್ಟದ ಸುತ್ತ ವಾಸಿಸುತ್ತಿರುವ ನಿವಾಸಿಗಳ ಪ್ರಕಾರ, ಅಂತರಗಂಗೆ ವರ್ಷದ ಎಲ್ಲ ದಿನಗಳಲ್ಲಿಯೂ ಒಂದೇ ರೀತಿ ಹರಿಯುತ್ತದೆ. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಅಂತರಗಂಗೆ ಬೆಟ್ಟಕ್ಕೆ ತನ್ನದೇ ಆದ ಪುರಾತನ ಐತಿಹ್ಯ ಇದೆ. ಇಲ್ಲಿ ಭಗೀರಥನು ದೀರ್ಘ ಕಾಲ ತಪಸ್ಸು ಮಾಡಿ ಗಂಗೆಯನ್ನು ಒಲಿಸಿಕೊಂಡು, ಬಳಿಕ ಅದನ್ನು ಶಿವನ ಜಟೆಯ ಮೂಲಕ ಭೂಮಿಗೆ ಇಳಿಸಿಕೊಂಡ ಎಂಬ ಪ್ರತೀತಿ ಇದೆ. ಅಷ್ಟೇ ಅಲ್ಲ ಈ ಬೆಟ್ಟವು ಪರಶುರಾಮ ಹಾಗು ಜಮದಗ್ನಿಗೆ ಸಂಬಂಧಿಸಿದೆ ಎನ್ನುವ ದಂತ ಕಥೆ ಇದೆ.

ಹಿಂದೂ ಪುರಾಣದ ಪ್ರಕಾರ ಕರ್ತವೀರ್ಯಾರ್ಜುನನನ್ನು ಪರಶುರಾಮನು ಕೊಂದ ನಂತರ ಜಮದಗ್ನಿಯ ಸಾವು ಹಾಗು ರೇಣುಕಾ ಸ್ವಯಂ ಬಲಿ ಈ ಬೆಟ್ಟದ ಮೇಲೆ ನಡೆದಿದೆ ಎನ್ನಲಾಗಿದೆ. ಅದರ ಜೊತೆಗೆ ಪರಶುರಾಮನು ಕ್ಷತ್ರಿಯ ವರ್ಗದವರನ್ನು ಕೊಲ್ಲಲು ಈ ಬೆಟ್ಟದ ಮೇಲೆ ಶಪಥ ಮಾಡಲಾಗಿದೆ. ಮತ್ತು ಕಾಶಿ ವಿಶ್ವೇಶ್ವರ ದೇವಾಲಯದ ನೀರು ಬಸವನ ಬಾಯಿಂದ ಬರುವ ಅಂತರಗಂಗೆ ಎಂಬ ಜಲವೆಂದು ಭಕ್ತರ ಬಲವಾದ ನಂಬಿಕೆ ಇದೆ.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ವಿಜೃಂಭಣೆಯಿಂದ ಇಲ್ಲಿ ಜಾತ್ರೆ ನಡೆಯುತ್ತದೆ. ಕಲ್ಲು ಬಂಡೆಗಳಿಂದ ಕೂಡಿರುವ ಈ ಬೆಟ್ಟವನ್ನು ಏರುವುದು ಸ್ವಲ್ಪ ಕಠಿಣ ಸವಾಲಾದರೂ ಏರಿದ ಮೇಲೆ ಸಿಗುವ ಅನುಭವ ಮಾತ್ರ ಅವಿಸ್ಮರಣೀಯ.

Also Read: ಒತ್ತಡಗಳ ಮಧ್ಯೆ ನೆಮ್ಮದಿ ಅರಸುತ್ತಿದ್ದರೆ ಈ ವೀಕೆಂಡ್ ಬೆಂಗಳೂರಿನ ಹೊರವಲಯದಲ್ಲಿರುವ ನವಗ್ರಹಗಳ ಬನ ಶ್ರೀಧರ ಶ್ರೀಗುಡ್ಡಕ್ಕೆ ತಪ್ಪದೇ ಭೇಟಿ ಕೊಡಿ..