ವಿರೋಧ ಪಕ್ಷಗಳು ಪಾಕಿಸ್ತಾನದ ರೀತಿ ಮಾತನಾಡುತ್ತಿವೆ; ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿದ ಪಕ್ಷಗಳಿಗೆ ಮೋದಿ ಚಾಟಿ.!

0
200

370ನೇ ವಿಧಿಯನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಇದರಿಂದ ನೆರೆಯ ದೇಶಗಳಿಂದ ಭಾರತಕ್ಕೆ ವಲಸಿಗರಾಗಿ ಬರಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಾಯಂ ಪೌರತ್ವ ನೀಡಲಿದೆ. ಆದರೆ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಕೆಲವು ವಿರೋಧ ಪಕ್ಷಗಳು ಪಾಕಿಸ್ತಾನದ ರೀತಿಯಲ್ಲೇ ಮಾತನಾಡುತ್ತಿವೆ. ಆದರೆ ಇದು ಐತಿಹಾಸಿಕ ನಿರ್ಧಾರವಾಗಿದ್ದು, ಪೌರತ್ವ ತಿದ್ದುಪಡಿ ಮಸೂದೆ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ಹೌದು ಧಾರ್ಮಿಕ ಕಿರುಕುಳ ಅನುಭವಿಸುತ್ತಿರುವವರಿಗೆ ಈ ಮಸೂದೆಯಿಂದ ಶಾಶ್ವತ ಪರಿಹಾರ ಸಿಗಲಿದೆ. ಆದರೆ ಈ ವಿಚಾರವಾಗಿ ಕೆಲ ವಿರೋಧ ಪಕ್ಷಗಳು ಸುಖಾಸುಮ್ಮನೆ ಗದ್ದಲ ಎಬ್ಬಿಸುವ ಮೂಲಕ ಪಾಕಿಸ್ತಾನ ರೀತಿಯಲ್ಲಿ ಮಾತನಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ಡಿಸೆಂಬರ್ 9 ರಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದು, 311 ಮತಗಳಿಂದ ಪಾಸ್ ಸಹ ಆಗಿದೆ. ಆದರೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸಿದ್ದವು. ಈ ವೇಳೆ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದಿನ್ ಓವೈಸಿ ಮಸೂದೆಯ ಪ್ರತಿಯನ್ನೇ ಹರಿದು ಹಾಕುವ ಮೂಲಕ ತೀವ್ರ ಚರ್ಚೆಗೆ ಕಾರಣರಾಗಿದ್ದರು.

ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ, ಇದು ಅಲ್ಪಸಂಖ್ಯಾತ ವಿರೋಧಿ ಎಂದು ಕರೆದರು. ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯು ಶೇ.0.001 ರಷ್ಟು ಕೂಡ ದೇಶದ ಅಲ್ಪಸಂಖ್ಯಾತ ಸಮುದಾಯದ ವಿರುದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆರು ದಶಕಗಳ ಹಳೆಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ತಿದ್ದುಪಡಿಯ ಉದ್ದೇಶವಾಗಿದೆ.

ಅಲ್ಲದೇ ಮುಂಬರುವ ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ರೈತರು, ಬಡವರ ಹಾಗೂ ಕೈಗಾರಿಕೋದ್ಯಮಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದವರ ಸಲಹೆಯನ್ನು
ಸಂಗ್ರಹಿಸಿ ವಿತ್ತ ಸಚಿವರ ಜತೆ ಹಂಚಿಕೊಳ್ಳುವಂತೆ ಸಂಸದರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿಕೊಂಡರು. ವಿಪಕ್ಷಗಳ ಆರೋಪಗಳಿಗೆ ಅಮಿತ್ ಶಾ ಉತ್ತರಿಸಲು ಆರಂಭಿಸಿ, ಈ ಮಸೂದೆ ಯಾವುದೇ ರೀತಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧವಲ್ಲ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸದಿದ್ದರೆ, ಪೌರತ್ವ ಮಸೂದೆಯನ್ನು ತರುವ ಅಗತ್ಯವೇ ಇರಲಿಲ್ಲ. ಸಮಾನತೆಯ ಕಾನೂನು ಇದ್ದರೆ ಅಲ್ಪಸಂಖ್ಯಾತರಿಗೆ ಹೇಗೆ ಸವಲತ್ತುಗಳು ಸಿಗುತ್ತವೆ? ಸಂವಿಧಾನದ 14ನೇ ವಿಧಿ ಶಿಕ್ಷಣ ಮತ್ತು ಇತರ ವಿಷಯಗಳಲ್ಲಿ ಉಲ್ಲಂಘನೆಯಾಗಿಲ್ಲವೇ? ಎಲ್ಲ ಉಲ್ಲಂಘನೆಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ ಮಸೂದೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

Also read: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ದೇಶಾದ್ಯಂತ ಭಾರಿ ಹೋರಾಟ; ಇಷ್ಟೊಂದು ವಿವಾದ ಹುಟ್ಟುಹಾಕಿದ್ದು ಸರಿನಾ??