ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿರುವ 255 ರಾಜಕೀಯ ಪಕ್ಷಗಳು!

0
622

ನೋಟ್‍ ಬ್ಯಾನ್ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಹಳೇ ನೋಟುಗಳಲ್ಲಿ ಖಾತೆಗಳಿಗೆ ಹಣ ಜಮೆ ಮಾಡಬಹುದು. ಇದಕ್ಕಾಗಿ ಲೆಕ್ಕ ಕೊಡಬೇಕಿಲ್ಲ ಎಂದು ಕೇಂದ್ರ ಸರಕಾರ ಸೂಚನೆ ಹೊರಡಿಸಿದ ಬೆನ್ನಲ್ಲೇ ಚುರುಕಾಗಿರುವ ಚುನಾವಣಾ ಆಯೋಗ, ದೇಶದಲ್ಲಿ ಸುಮಾರು 255 ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲೇ ಇಲ್ಲ. ಅವು ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪತ್ರ ಬರೆದಿದೆ.

2005ರಿಂದೀಚೆಗೆ ಈ 255 ರಾಜಕೀಯ ಪಕ್ಷಗಳು ಕೇವಲ ನೋಂದಣಿ ಮಾಡಿಕೊಂಡಿವೆ ಹೊರತು ಯಾವುದೇ ಲೋಕಸಭೆ, ವಿಧಾನಸಭೆ ಅಥವಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೂಡ ಸ್ಪರ್ಧಿಗಳನ್ನು ಕಣಕ್ಕಿಳಿಸಿಲ್ಲ. ಈ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಆಯೋಗ ಒತ್ತಾಯಿಸಿದೆ.

ಚುನಾವಣಾ ಆಯೋಗಕ್ಕೆ ಯಾವುದೇ ರಾಜಕೀಯ ಪಕ್ಷದ ನೋಂದಣಿಯನ್ನು ರದ್ದುಪಡಿಸುವ ಅಧಿಕಾರ ಇಲ್ಲ. 1951 ಕಾಯ್ದೆಯ 29ಎ ನಿಯಮದ ಅನ್ವಯ ಆ ಪಕ್ಷಕ್ಕೆ ನೀಡಿದ್ದ ಚಿಹ್ನೆಯನ್ನು ವಾಪಸ್ ಪಡೆಯಲು ಮಾತ್ರ ಅಧಿಕಾರವಿದೆ.

ವಿಶೇಷ ಅಂದರೆ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ ಪಕ್ಷಗಳಲ್ಲಿ ಕೆಲವು ಪಕ್ಷಗಳ ವಿಳಾಸ ಕೇಂದ್ರ ಗೃಹ ಸಚಿವರ ಹಾಲಿ ಮನೆ, ಲಾಯರ್ ಚೇಂಬರ್ಸ್ ಮತ್ತು ಪಟಿಯಾಲ ಹೌಸ್‍ ಕೋರ್ಟ್ಸ್‍ ವಿಳಾಸ ಹೊಂದಿವೆ.

ಅಖಿಲ ಭಾರತ ಪ್ರಗತಿಪರ ಜನತಾ ಎಂಬ ಹೆಸರಿನ ಪಕ್ಷ ನೀಡಿರುವ ವಿಳಾಸ 17, ಅಕ್ಬರ್‍ ರಸ್ತೆ ಎಂದು ನೀಡಿದೆ. ಆದರೆ ಇದು ಪ್ರಸ್ತುತ ಕೇಂದ್ರದಲ್ಲಿ ಗೃಹ ಸಚಿವರಾಗಿರುವ ಬಿಜೆಪಿ ಮುಖಂಡ ರಾಜನಾಥ್‍ ಸಿಂಗ್‍ ಅವರದ್ದು.

ಮತ್ತೊಂದು ಪಕ್ಷದ ಹೆಸರು ಹಿಂದೂಸ್ತಾನ್‍ ಕಾಜಂಗಮ್‍ ಎಂದಾಗಿದ್ದು, ಇದರ ವಿಳಾಸ ಜಮ್ಮು-ಕಾಶ್ಮೀರದ ಸಿಐಡಿ ಕಚೇರಿಯದ್ದಾಗಿದೆ. ಅಖಿಲ ಭಾರತೀಯ ದಸ್ತಕರ್‍ ಮೋರ್ಚಾ ಮತ್ತು ರಾಷ್ಟ್ರೀಯ ಯುವ ಲೋಕತಾಂತ್ರಿಕ ಪಾರ್ಟಿ ನೀಡಿದ ವಿಳಾಸವು ಪಟಿಯಾಲ ಹೌಸ್‍ ಕೋರ್ಟ್‍ಗೆ ಸೇರಿದ್ದಾಗಿದೆ.