ಚಿಣ್ಣರೆದೆಯಲಿ ಅರಳಲಿ ದೇಶಪ್ರೇಮ!!!

0
1035

ಭಾರತ ಇಂದು ಜಗತ್ತಿನ ನಕಾಶೆಯಲ್ಲಿ ಪ್ರಮುಖ ರಾಷ್ಟ್ರ. ದಿನೇ ದಿನೇ ಅಭಿವೃದ್ಧಿಯ ಪಥದಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವ ದೇಶ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಗತ್ತಿನ ದೊಡ್ಡಣ್ಣ ಅಮೆರಿಕಾ, ಪ್ರಮುಖ ದೇಶಗಳಾದ ರಷ್ಯಾ, ಜಪಾನ್, ಜರ್ಮನಿ ಈಗ ಭಾರತದ ಸ್ನೇಹಕ್ಕಾಗಿ ಹಾತೊರೆಯುತ್ತಿವೆ. ಅನಕ್ಷರತೆ, ನಿರುದ್ಯೋಗ, ಬಡತನದಂತಹ ಹತ್ತಾರು ಸಮಸ್ಯೆಗಳ ಗೋಜಲಿನಲ್ಲಿ ಸಿಲುಕಿದ್ದ ಭಾರತ ಈ ಹಂತಕ್ಕೆ ಏರಿದ್ದು ನಿಜಕ್ಕೂ ದೊಡ್ಡ ಸಾಧನೆ.

ಬ್ರಿಟೀಷರ ಕಪಿಮುಷ್ಟಿಯಿಂದ ಭಾರತಾಂಬೆಯನ್ನು ಬಂಧಮುಕ್ತಗೊಳಿಸಿ ಸ್ವಾತಂತ್ರ್ಯ ತಂದುಕೊಟ್ಟ ತರುವಾಯ ಹೆಜ್ಜೆಹೆಜ್ಜೆಗೂ ಎದುರಾದ ಸಮಸ್ಯೆಗಳು-ಸವಾಲುಗಳು ಅನೇಕ. ಅವೆಲ್ಲವನ್ನೂ ದಾಟಿ ಅಭಿವೃದ್ಧಿಯ ಹೆದ್ದಾರಿಯಲ್ಲಿ ಭಾರತ ಸಾಗಿದ್ದು ಅನ್ಯ ರಾಷ್ಟ್ರಗಳಿಗೆ ಸೋಜಿಗವೆನಿಸದೇ ಇರದು. ಭಾರತ ಈ ಪ್ರಗತಿಯ ಸಾಧನೆಯ ಗುರಿ ಮುಟ್ಟುವ ಹಿಂದೆ ಸಾವಿರಾರು ಮಂದಿ ಸಾಧಕರ ಶ್ರಮವಿದೆ, ದೇಶಪ್ರೇಮಿಗಳ ನಿಸ್ವಾರ್ಥ ಸೇವೆಯಿದೆ, ತ್ಯಾಗ ಬಲಿದಾನದ ದೊಡ್ಡ ಸಾಲೇ ಇದೆ.

ದೇಶಾದ್ಯಂತ ಮೂಲೆಮೂಲೆಗಳಲ್ಲಿ ಶಾಲೆ-ಕಾಲೇಜುಗಳನ್ನು ತೆರೆದು ಶಿಕ್ಷಣದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಕೈಗೊಂಡ ಅಕ್ಷರಕ್ರಾಂತಿ, ದೇಶದ ಉದ್ದಗಲಕ್ಕೂ ಕೈಗಾರಿಕೆಗಳ ಸ್ಥಾಪನೆ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು ನಡೆಸಿದ ಹಸಿರು ಕ್ರಾಂತಿ ಎಲ್ಲವೂ ದೇಶದ ಪ್ರಗತಿಗೆ ಕೊಟ್ಟ ಕೊಡುಗೆ ಅಪಾರ. ವ್ಯಯಕ್ತಿಕ ಲಾಭ, ಕೌಟುಂಬಿಕ ಹಿತ-ಸುಖಗಳನ್ನು ಬದಿಗೊತ್ತಿ ಅಧಿಕಾರಿ ಮತ್ತು ಆಡಳಿತ ವರ್ಗ ಪರಸ್ಪರ ಕೈಜೋಡಿಸಿ ಕಾರ್ಯನಿರ್ವಹಿಸಿದ್ದರ ಫಲವಿದು.

ಇನ್ನು ದೇಶಕ್ಕೆ ವ್ಯಾಪಾರಕ್ಕೆಂದು ಬಂದ ಆಂಗ್ಲರು ಕ್ರಮೇಣ ಇಡೀ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾರತದ ಲಕ್ಷಾಂತರ ಜನರು ಪಾಲ್ಗೊಂಡು ಹೋರಾಡಿದರು. ಮನೆ-ಮಠಗಳನ್ನು ತೊರೆದು ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದು ಈಗ ಇತಿಹಾಸ. ಭಾರತದ ಪಿತಾಮಹ ಮಹಾತ್ಮಾಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್‍ಸಿಂಗ್, ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್.

Image result for freedom fighters

ಒಂದೇ ಎರಡೇ ಸಾವಿರಾರು ಮಂದಿ, ಲಕ್ಷಾಂತರ ಕಾರ್ಯಕರ್ತರ ತ್ಯಾಗ-ಬಲಿದಾನದ ಪ್ರತೀಕ ಸ್ವತಂತ್ರ ಭಾರತ. ಈ ಬಲಿದಾನದ ಮೂಲಸೆಲೆ ದೇಶಪ್ರೇಮ. `ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಸಂಸ್ಕøತ ಶ್ಲೋಕದಂತೆ ಜನ್ಮ ಕೊಟ್ಟ ತಾಯಿ ಮತ್ತು ಜನಿಸಿದ ನೆಲ ಎರಡೂ ಸ್ವರ್ಗಕ್ಕೆ ಸಮಾನ. ಅವೆರಡರ ಬಗೆಗಿನ ಪ್ರೀತಿ-ಮಮಕಾರ ಪ್ರತಿ ಮಗುವಿನಲ್ಲೂ ಜನ್ಮತಃ ಇರತಕ್ಕ ಗುಣ. ದೇಶಪ್ರೇಮವಿಲ್ಲದ ಮನುಷ್ಯ `ನೀಚ’ನಂತೆ. ಅಮ್ಮನನ್ನು ನಿರ್ಲಕ್ಷಿಸಿದವ `ಕಟುಕ’.

ಮರೆಯಾದ ಮಮತೆ ಬದಲಾವಣೆ ಜಗದ ನಿಯಮ ಎಂಬಂತೆ ಕಾಲದ ಚಕ್ರದ ಸುಳಿಗೆ ಸಿಲುಕಿ ಬದುಕು ಮತ್ತು ಜಗತ್ತು ನಿತ್ಯ ಬದಲಾಗುತ್ತಲೇ ಇರುತ್ತದೆ. ಅಂತೆಯೇ ಆಧುನೀಕರಣದ ಈ ಯುಗದಲ್ಲಿ ಮನುಷ್ಯನ ಮನಸ್ಥಿತಿಯೂ ಬದಲಾಗಿಬಿಟ್ಟಿದೆ. ಮಾತೃಪ್ರೇಮ, ದೇಶಪ್ರೇಮಗಳು ಮರೆಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ನಮ್ಮ ಬದುಕನ್ನು ರೂಪಿಸುವ ನಾಡು, ನುಡಿ, ನೆಲ, ಜಲದ ಬಗ್ಗೆ ಮಮತೆ ಹೊಂದುವುದು, ಪ್ರೀತಿಸುವುದು ಪ್ರತಿಯೊಬ್ಬರ ಕರ್ತವ್ಯ.

ದೇಶಕ್ಕೆ ಕಿಂಚಿತ್ತು ತೊಂದರೆಯಾದರೂ ಪಾರು ಮಾಡುವುದು, ದೇಶಕ್ಕಾಗಿ ದುಡಿಯುವುದು ನಾವೆಲ್ಲರೂ ನಿರ್ವಹಿಸಬೇಕಾದ ಜವಾಬ್ದಾರಿ. ಈ ಹೊಣೆಗಾರಿಕೆಯ ಸಮರ್ಥ ನಿರ್ವಹಣೆಯಾಗಬೇಕಾದರೆ ಬಾಲ್ಯದಲ್ಲೇ ಮಕ್ಕಳ ಮನದಲ್ಲಿ ದೇಶಪ್ರೇಮದ ಬೀಜ ಬಿತ್ತಬೇಕು. ಚಿಣ್ಣರೆದೆಯೆಲ್ಲಿ ನಾಡಿನ ಬಗ್ಗೆ ಅಭಿಮಾನ ಮೂಡಿಸಬೇಕು.ದೇಶದ ಇತಿಹಾಸದ ಪರಿಚಯವನ್ನು ಮಕ್ಕಳಿಗೆ ಮಾಡಿಕೊಟ್ಟಾಗ ಮಾತ್ರ ಮಕ್ಕಳಿಗೆ ಭಾರತದ ಸ್ವರೂಪ, ಹಿನ್ನೆಲೆ, ಸಂಸ್ಕøತಿಗಳ ಬಗೆಗೆ ಅರಿವುಂಟಾಗಲು ಸಾಧ್ಯ.

ಆ ದೆಸೆಯಲ್ಲಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ಹಲವು ಮಹನೀಯರ ಬದುಕು-ಸಾಧನೆಯ ಕುರಿತ ಪಠ್ಯಗಳಿವೆಯಾದರೂ ಅದರಾಚೆಗೂ ಇರುವ ಅನೇಕ ಹುತಾತ್ಮರ ಜೀವನದ ಕಥೆಗಳನ್ನು ಮಕ್ಕಳಿಗೆ ಹೇಳಬೇಕು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಮದಕರಿನಾಯಕ, ಶ್ರೀಕೃಷ್ಣದೇವರಾಯ, ಇಮ್ಮಡಿಪುಲಕೇಶಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದ ಮಹನೀಯರು ನಾಡಿಗೆ ಕೊಟ್ಟ ಕಾಣಿಕೆಗಳೇನು? ನಾಡಿಗಾಗಿ ಅವರು ಮಾಡಿದ ತ್ಯಾಗಗಳೇನು? ವಯಕ್ತಿಕ ಜೀವನದ ಸುಖಗಳನ್ನು ಬದಿಗೊತ್ತಿ ಕಷ್ಟಗಳನ್ನು ಆಹ್ವಾನಿಸಿಕೊಂಡು ಅನುಭವಿಸಿದ ಯಾತನೆಗಳೇನು? ಎಂಬೆಲ್ಲಾ ವಿಷಯಗಳನ್ನು ವಿವರವಾಗಿ ಮಕ್ಕಳಿಗೆ ಕಥನ ರೂಪದಲ್ಲಿ ತಿಳಿಸಬೇಕು.

Image result for patriotism children india

ದೇಶಪ್ರೇಮ ಎಷ್ಟು ಅವಶ್ಯಕ? ದೇಶಪ್ರೇಮವಿರದಿದ್ದರೆ ಪರಕೀಯರು ನಮ್ಮನ್ನು ಆಳುವಂತಾಗಬಹುದು ಅಥವಾ ನಾವು ನಮ್ಮ ನಾಡಿನಲ್ಲೇ ಪರಕೀಯರಂತೆ ಬದುಕುವಂತಾಗಬಹುದೆಂಬುದನ್ನು ಅರ್ಥ ಮಾಡಿಸಬೇಕು.ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು ಎಂಬಂತೆ ಅಮ್ಮಂದಿರು ಮಕ್ಕಳಿಗೆ ಆಧುನಿಕ ಆಟ-ತಂತ್ರಜ್ಞಾನಗಳನ್ನು ಪರಿಚಯಿಸುವುದರ ಬದಲು ದೇಶದ ಇತಿಹಾಸ, ಸಾಧಕರ ಬದುಕು, ತ್ಯಾಗಿಗಳ ಜೀವನಚರಿತ್ರೆಯನ್ನು ಬಿಡುವಿನ ಸಮಯದಲ್ಲಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡಲೇಬೇಕು.

ಈ ಕೆಲಸ ಅಮ್ಮನಿಂದ ಆರಂಭವಾಗಿ ಶಾಲಾ ಶಿಕ್ಷಕರು ಪಠ್ಯೇತರ ಸಮಯದಲ್ಲಿ ಮಕ್ಕಳಲ್ಲಿ ಆದರ್ಶ, ಮೌಲ್ಯಗಳನ್ನು ಬಿತ್ತುವಂತಹ ವಿಷಯಗಳನ್ನು ತಿಳಿಸಬೇಕು. ಈ ಕಾರ್ಯವಾಗಬೇಕಾದಲ್ಲಿ ಆಧುನಿಕ ಯುಗದ ಪೋಷಕರು ಮೊದಲು ತಾವು ಅಪ್ಪಟ ದೇಶಭಕ್ತರಾಗಬೇಕು. ನಾಡಿನ ಇತಿಹಾಸದ ತಿಳಿವು ಹೊಂದಿರಬೇಕು. ಮಾಹಿತಿಯ ಕೊರತೆಯಿದ್ದಲ್ಲಿ, ಮಹನೀಯರ ಬಗ್ಗೆ ಅಜ್ಞಾನವಿದ್ದಲ್ಲಿ ಆಧುನಿಕ ತಂತ್ರಜ್ಞಾನದ ನೆರವು ಪಡೆದು ಬೆರಳ ತುದಿಯಲ್ಲೇ ಮಾಹಿತಿ ಸಿಗುವ ಅವಕಾಶವನ್ನು ಬಳಸಿಕೊಂಡು ಮಾಹಿತಿತಜ್ಞರಾಗಬೇಕು.

Image result for school independence day

ಆನಂತರ ತಮ್ಮದೇ ಸರಳ ಭಾಷೆಯಲ್ಲಿ, ಹಿತವಾಗುವ ಬಗೆಯಲ್ಲಿ, ಮನರಂಜಕವೆನಿಸುವಂತೆ ಮಕ್ಕಳಿಗೆ ಪ್ರತಿಯೊಂದನ್ನು ಮುಟ್ಟಿಸಬೇಕು. ಮಕ್ಕಳು ಸಹ ಹೆಚ್ಚು ಮಾತನಾಡುವ ಬದಲು ಹೆಚ್ಚು ಕೇಳಿಸಿಕೊಳ್ಳುವತ್ತ ಗಮನ ಹರಿಸಬೇಕು. ಹಿರಿಯರು, ಪೋಷಕರು ಮತ್ತು ಶಿಕ್ಷಕರು ಹೇಳುವ ಒಳ್ಳೆಯ ವಿಷಯಗಳೆಡೆಗೆ ಪೂರ್ಣ ಗಮನಹರಿಸಿ ಅರ್ಥವಾಗದಿದ್ದರೆ ಮತ್ತೊಮ್ಮೆ ಮಗದೊಮ್ಮೆ ಕೇಳಿ ಮಾಹಿತಿ ಪಡೆದು ನಾಡು, ನುಡಿಯ ಕುರಿತು ಪ್ರಾಥಮಿಕ ತಿಳಿವಳಿಕೆಯನ್ನು ಮೂಡಿಸಿಕೊಳ್ಳಬೇಕು. ದೇಶದ ಭವಿಷ್ಯದ ಪ್ರಜೆU ಪ್ರಜೆಗಳಾದ ಮಕ್ಕಳು ದೇಶಪ್ರೇಮಿಗಳಾದರೆ ಮಾತೃಭೂಮಿಗೆ ಎಂದಿಗೂ ಯಾವುದೇ ಅಪಾಯ ಎದುರಾಗದು. ಆ ದೆಸೆಯಲ್ಲಿ ಮಕ್ಕಳು, ಪೋಷಕರು ಚಿತ್ತ ಹರಿಸಿದರೆ ದೇಶವೂ ಉಳಿದೀತು, ದೇಶವಾಸಿಗಳೂ ಸಹ.