ಪೆಟ್ರೋಲ್ ಹಾಗೂ ಡೀಸೆಲ್ ಮನೆ ಮನೆಗೆ ಬರಲಿದೆ!

0
636

ನವದೆಹಲಿ: ಕೇಂದ್ರ ಸರ್ಕಾರ ಜನರ ಬೇಡಿಕೆ ಈಡೇರಿಸಲು ಮುಂದಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮನೆ ಮನೆಗೆ ತಲುಪಿಸಲಿದೆ. ಪೆಟ್ರೋಲಿಯಂ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಆನ್‍ ಲೈನಲ್ಲಿ ಇನ್ನು ಮುಂದೆ ಪೆಟ್ರೋಲ್, ಡೀಸೆಲ್ ಬುಕ್ ಮಾಡಿ ಮನೆಯಲ್ಲೇ ತೈಲವನ್ನು ತಮ್ಮ ವಾಹನಗಳಿಗೆ ತುಂಬಿಸಬಹುದು.

ಹೌದು. ಪೆಟ್ರೋಲ್ ಪಂಪ್ ಗಳಲ್ಲಿ ಕಾದು ನಿಲ್ಲುವ ಗ್ರಾಹಕರ ಕ್ಯೂ ತಪ್ಪಿಸುವ ನಿಟ್ಟಿನಲ್ಲಿ ಪೆಟ್ರೋಲಿಯಂ ಸಚಿವಾಲಯ ಹೊಸ ಯೋಜನೆ ರೂಪಿಸುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಮನೆಗೇ ತಲುಪಿಸಲಿದೆ.

ಮುಂಗಡವಾಗಿ ಬುಕ್ಕಿಂಗ್ ಮಾಡುವ ಗ್ರಾಹಕರ ವಿಳಾಸಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ತಲುಪಿಸುವ ನೂತನ ಕ್ರಮವನ್ನು ಕಂಡುಕೊಂಡಿರುವುದಾಗಿ ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.

ನಿತ್ಯ ತೈಲ ವಿತರಣಾ ಕೇಂದ್ರಗಳಿಗೆ 35 ಕೋಟಿ ಜನರು ಭೇಟಿ ನೀಡುತ್ತಿದ್ದು, ವಾರ್ಷಿಕ ₹2500 ಕೋಟಿ ಮೊತ್ತದ ವಹಿವಾಟು ನಡೆಯುತ್ತಿದೆ ಎಂದು ಪ್ರಕಟಿಸಿದೆ.

ಜಾಗತಿಕ ಮಟ್ಟದಲ್ಲಿ 3ನೇ ಅತಿ ಹೆಚ್ಚು ತೈಲ ಬಳಸುವ ದೇಶವಾಗಿರುವ ಭಾರತದಲ್ಲಿ ನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ನಡೆಯಲಿದ್ದು, ಮೇ 1ರಿಂದ ಐದು ನಗರಗಳಲ್ಲಿ ಪಾಂಡಿಚೇರಿ, ಆಂಧ್ರಪ್ರದೇಶದ ವೈಜಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್ ನ ಜಮ್ಶೆಡ್ಪುರ ಮತ್ತು ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಪೆಟ್ರೋಲಿಯಂ ಉತ್ಪನ್ನಗಳನ್ನು ಗ್ರಾಹಕರ ವಿಳಾಸಕ್ಕೆ ತಲುಪಿಸುವ ಮೂಲಕ ಪೆಟ್ರೋಲ್ ಪಂಪ್ ಗಳಲ್ಲಿ ಕಾಯುವುದು ತಪ್ಪಲಿದೆ ಎಂದು ಕೇಂದ್ರ ತೈಲ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಪೆಟ್ರೋಲಿಯಂ ಉತ್ಪನ್ನದಲ್ಲಿ ಈವರೆಗೆ ಕೇವಲ ಅಡುಗೆ ಅನಿಲವನ್ನು ಮಾತ್ರ ಮನೆಗೆ ಡಿಲಿವರಿ ಮಾಡಲಾಗ್ತಾ ಇತ್ತು. ಪೆಟ್ರೋಲ್, ಡೀಸೆಲ್ ಗೆ ಬಂಕ್ ಬಳಿಯೇ ಹೋಗಬೇಕಾಗಿತ್ತು. ಇದಕ್ಕಿಂತ ಮೊದಲೇ ಇನ್ನೊಂದು ಮಹತ್ವದ ನಿರ್ಧಾರವನ್ನು ಪೆಟ್ರೋಲಿಯಂ ಸಚಿವಾಲಯ ತೆಗೆದುಕೊಂಡಿದೆ. ಮೇ 1 ರಿಂದ ದೇಶದ 5 ನಗರಗಳಲ್ಲಿ ಪ್ರತಿದಿನ ಪೆಟ್ರೋಲ್ ಬೆಲೆ ಬದಲಾಗಲಿದೆ.