ನಾಪತ್ತೆಯಾದ ‘ಫ್ರೀಡಂ 251’ ಫೋನ್

0
851

ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಕೇವಲ 250 ರೂಪಾಯಿಗಳಿಗೆ ಹಲವು ಫೀಚರ್ ಗಳನ್ನು ಒಳಗೊಂಡಿರುವ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿದಾಗ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿತ್ತು.

ಸ್ಮಾರ್ಟ್ ಫೋನ್ ಅನ್ನು ಕೇವಲ 251 ರೂಪಾಯಿಗಳಿಗೆ ನೀಡುವುದಾಗಿ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಹೇಳಿಕೊಂಡಾಗ ಅದೊಂದು ಬೋಗಸ್ ಕಂಪನಿ ಎಂದು ಹೀಗಳೆದವರೇ ಹೆಚ್ಚು. ಬೆಲೆಯ ಕಾರಣಕ್ಕಾಗಿ ವಿವಾದ ಹುಟ್ಟು ಹಾಕಿದ್ದ ಈ ಸ್ಮಾರ್ಟ್ ಫೋನ್, ಗ್ರಾಹಕರ ಕೈ ಸೇರುವ ಕಾಲ ಸನ್ನಿಹಿತವಾಗಿದೆ.

ಈಗಾಗಲೇ ಎರಡು ಬಾರಿ ಸ್ಮಾರ್ಟ್ ಫೋನ್ ಬಿಡುಗಡೆ ದಿನಾಂಕವನ್ನು ಮುಂದೆ ಹಾಕಿದ್ದ ರಿಂಗಿಂಗ್ ಬೆಲ್ಸ್ ಕಂಪನಿ ಅಂತಿಮವಾಗಿ ಜುಲೈ 7 ರಿಂದ ಗ್ರಾಹಕರಿಗೆ ವಿತರಿಸುವುದಾಗಿ ಪ್ರಕಟಿಸಿದೆ. ಕಂಪನಿ ಬಳಿ ಈಗ 2 ಲಕ್ಷ ಸ್ಮಾರ್ಟ್ ಫೋನ್ ಗಳ ಸ್ಟಾಕ್ ಇದ್ದು, ಲಾಟರಿ ಮೂಲಕ ಆಯ್ಕೆ ಮಾಡಿ ಗ್ರಾಹಕರಿಗೆ ನೀಡಲಾಗುತ್ತದೆ ಎನ್ನಲಾಗಿದೆ. ಅಲ್ಲದೇ ಪ್ರತಿ ರಾಜ್ಯಕ್ಕೂ 10 ಸಾವಿರ ಸ್ಮಾರ್ಟ್ ಫೋನ್ ಗಳನ್ನು ನೀಡಲು ಯೋಜಿಸಲಾಗಿದೆ ಎಂದು ಗ್ರಾಹಕರಿಗೆ ಮಾಧ್ಯಮಗಳಿಗೆ ತಿಳಿಸಿತ್ತು ಆದರೆ ಈ ಫೋನಿನ ಸುದ್ದಿ ಯಲ್ಲಿಯೂ ಇಲ್ಲದಂತೆ ನಾಪತ್ತೆಯಾಗಿದೆ.

251 ರೂ. ಬೆಲೆಯ ‘ಫ್ರೀಡಂ 251’ ಸ್ಮಾರ್ಟ್ ಫೋನ್ ಬುಕ್ ಮಾಡಲು ಗ್ರಾಹಕರು ಮುಗಿ ಬಿದ್ದ ಕಾರಣ ಕೆಲವೇ ಗಂಟೆಗಳಲ್ಲಿ ಕಂಪನಿಯ ವೆಬ್ ಸೈಟ್ ಸರ್ವರ್ ಜಾಮ್ ಆಗಿತ್ತು. ಆದಾದ ನಂತರ ಕಂಪನಿ ಸಾಕಷ್ಟು ಸಮಜಾಯಿಷಿ ನೀಡಿತ್ತಲ್ಲದೇ ತಾವು ನೀಡಿರುವ ವಾಗ್ದಾನದಂತೆ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಹೇಳಿಕೊಂಡಿತ್ತು.

‘ಫ್ರೀಡಂ 251’ ಸ್ಮಾರ್ಟ್ ಫೋನ್ ಬಿಡುಗಡೆ ಸಂದರ್ಭದಲ್ಲಿ ಮತ್ತೊಂದು ಕಂಪನಿಯ ಮೊಬೈಲ್ ಫೋನ್ ಮೇಲೆ ‘ಫ್ರೀಡಂ 251’ ಹೆಸರನ್ನು ನಮೂದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

251 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡಲು ಸಾಧ್ಯವೇ ಇಲ್ಲವೆಂದು ಹಲವು ಪರಿಣಿತರು ಹೇಳಿದ್ದರಲ್ಲದೇ ಇದು ಜನರನ್ನು ವಂಚಿಸುವ ಹೊಸ ವಿಧಾನವೆಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.

ಇದೀಗ ಆ ಅನುಮಾನಗಳು ನಿಜವಾಗುವಂತಿದೆ. ರಿಂಗಿಂಗ್ ಬೆಲ್ಸ್ ಕಂಪನಿ ಇದುವರೆಗೂ ಕೇವಲ 5 ಸಾವಿರ ಸ್ಮಾರ್ಟ್ ಫೋನ್ ಗಳನ್ನು ವಿತರಿಸಿದೆ ಎನ್ನಲಾಗುತ್ತಿದ್ದರೂ ಅದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗುತ್ತಿಲ್ಲ. ಆ ಸಂದರ್ಭದಲ್ಲಿ ಕೆಲ ದಿನಗಳಲ್ಲೇ ಇನ್ನೂ 65 ಸಾವಿರ ಸ್ಮಾರ್ಟ್ ಫೋನ್ ಗಳನ್ನು ಕ್ಯಾಶ್ ಆನ್ ಡಿಲೆವರಿ ಮೂಲಕ ವಿತರಿಸುವುದಾಗಿ ಹೇಳಿಕೊಂಡಿದ್ದ ಕಂಪನಿ ಈಗ ಆ ಬಗ್ಗೆ ಮಾತೇ ಆಡುತ್ತಿಲ್ಲ.