ವಾಟಾಳ್ ನಾಗರಾಜ್ ವಿರುದ್ಧವೇ ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್ ಮೆಟ್ಟಿಲೇರಿದರು ಇವರು…

0
554

ಬೆಂಗಳೂರು: ಮಹದಾಯಿ ನೀರು ಹಂಚಿಕೆ ವಿವಾದ ಹಿನ್ನೆಲೆ ಇಂದು ಕರ್ನಾಟಕ ಸ್ತಬ್ಧಗೊಂಡಿದೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ರು. ಮಹದಾಯಿ ನೀರಿಗಾಗಿ ಪದೇ ಪದೇ ಬಂದ್ ಮಾಡುತ್ತಿರುವುದನ್ನು ವಿರೋಧಿಸಿ ವಾಟಾಳ್ ನಾಗರಾಜ್ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಹೈಕೋರ್ಟ್ ಗೆ ದೂರು ನೀಡಲಾಗಿದೆ.

ನಗರದ ರಾಜಾಜಿನಗರ ಶ್ರದ್ಧಾ ಪೋಷಕರ ಸಂಘ ವಾಟಾಳ್ ವಿರುದ್ಧ ಪಿಐಎಲ್ ಸಲ್ಲಿಸಿದೆ. ಮಹದಾಯಿಗಾಗಿ ಕೇವಲ 10 ದಿನಗಳ ಅಂತರದಲ್ಲಿ 2 ದಿನ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ವೇಳೆ ಹಿಂಸಾಚಾರ ನಡೆಯುತ್ತದೆ. ಕಲ್ಲು ತೂರಾಟ ಮಾಡಿ ಸಾರ್ವಜನಿಕ ವಸ್ತುಗಳಿಗೆ ಹಾನಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಜನ ಸಾಮಾನ್ಯರ ನಿತ್ಯದ ಬದುಕು ತೊಂದರೆಗೀಡಾಗುತ್ತದೆ. ಇದರಿಂದ ಜನರ ಮೂಲಭೂತ ಹಕ್ಕಿಗೆ ಧಕ್ಕೆ ಉಂಟಾಗಲಿದೆ ಎಂದು ಶ್ರದ್ಧಾ ಪೋಷಕರ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಇನ್ನು ಬಂದ್ ನಡೆಸುವುದು ಅಸಂವಿಧಾನಿಕ, ಕಾನೂನು ಬಾಹಿರ ಎಂದು ಘೋಷಿಸಬೇಕು. ಬಂದ್‍ನಿಂದ ಉಂಟಾಗಿರುವ ನಷ್ಟವನ್ನು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಪಾವತಿಸುವಂತೆ ನಿರ್ದೇಶಿಸಬೇಕು. ಜೊತೆಗೆ ಪದೇ ಪದೇ ಬಂದ್ ಕರೆ ನೀಡುತ್ತಿರುವ ವಾಟಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಂಘ ಪಿಐಎಲ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ.