ಜೀವ ಜಗತ್ತಿಗೆ ಮಾರಕವಾಗಿರುವ ಪ್ಲಾಸ್ಟಿಕ್ ನಮಗೆ ಬೇಕಾ..??

0
706

ನಮ್ಮೆಲ್ಲ ಕಸದ ರಾಶಿಗಳಲ್ಲಿ ಪ್ರಮುಖವಾಗಿ ಕಾಣುವ ವಸ್ತುವೆಂದರೆ ಪ್ಲಾಸ್ಟಿಕ್; ಅದರಲ್ಲೂ ತೆಳ್ಳಗಿನ, ಹೆಚ್ಚು ವಿಷಮಯವಾದ ಪ್ಲಾಸ್ಟಿಕ್ ಚೀಲಗಳು. 40 ಮೈಕ್ರಾನ್‍ಗಿಂತಲೂ ತೆಳುವಾದ ಪ್ಲಾಸ್ಟಿಕ್ ಚೀಲವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ಕರ್ನಾಟಕದಲ್ಲಿಯೂ ಸಹ ನಿಷೇಧಿಸಲಾಗಿದೆ. ಅದನ್ನು ತಯಾರಿಸುವುದು, ಮಾರುವುದು, ಇತರರಿಗೆ ನೀಡುವುದು ಹಾಗೂ ಸ್ವತಃ ಬಳಸುವುದು – ಇವೆಲ್ಲ ಪರಿಸರ ಸಂರಕ್ಷಣಾ ಕಾನೂನಿನ ಅಡಿ ದಂಡಾರ್ಹ ಅಪರಾಧ. ಹಾಗಿದ್ದರೂ ಎಲ್ಲೆಡೆ ಅದರ ಬಳಕೆ ಅವ್ಯಾಹತವಾಗಿ ಮುಂದುವರಿದಿದೆ.

ಕೇವಲ 15-20 ವರ್ಷಗಳ ಹಿಂದೆ ಸಾಮಾನು ತರಲು ಹೋಗುವ ಜನರೆಲ್ಲ ಮನೆಯಿಂದ ನಾನಾ ರೀತಿಯ ವಿನ್ಯಾಸದ ಬಟ್ಟೆಯ ಬ್ಯಾಗುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅದರಲ್ಲಿ ತರಕಾರಿ, ಅಂಗಡಿಯ ಸಾಮಾನುಗಳನ್ನು ಹಾಕಿಸಿಕೊಂಡು ಮನೆಗೆ ತರುತ್ತಿದ್ದರು. ಶಾಪಿಂಗ್ ಮಾಲ್ ಸಂಸ್ಕೃತಿ ಬಂದಮೇಲೆ ಈಗ ಹಳ್ಳಿಗಳಲ್ಲೂ ಬ್ಯಾಗು ತೆಗೆದುಕೊಂಡು ಹೋಗುವ ಅಭ್ಯಾಸ ಮರೆತುಹೋಗಿದೆ, `ಪ್ಲಾಸ್ಟಿಕ್ ಚೀಲಕ್ಕೆ ಹಾಕಿಕೊಡು’ ಎಂದು ಅಂಗಡಿಯವರನ್ನು ಒತ್ತಾಯಿಸುವ ಪರಿಪಾಠ ಬೆಳೆದಿದೆ! ಈಗ ನಮ್ಮ ನದಿಗಳ ಸ್ನಾನಘಟ್ಟಗಳೆಲ್ಲ ಪ್ಲಾಸ್ಟಿಕ್‍ಮಯವಾಗಿವೆ.

ಚೀಲಗಳ ಜೊತೆಗೆ ನೀರಿನ ಬಾಟಲ್‍ಗಳೂ ಸೇರಿಕೊಂಡು ಇನ್ನೂ ದೊಡ್ಡ ಸಮಸ್ಯೆ ಸೃಷ್ಟಿಯಾಗಿದೆ. ದಿನವೂ ಕೋಟಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸೇರಿಸುತ್ತಿದ್ದೇವೆ. ಒಂದು ಸರಳ ಉದಾಹರಣೆ ನೋಡೋಣ. ಭಾರತೀಯ ರೈಲ್ವೆ ಪ್ರತಿದಿನ 11,000 ಟ್ರೇನ್‍ಗಳನ್ನು ನಡೆಸುತ್ತದೆ. ಈ ಪೈಕಿ ಸುಮಾರು 7000ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಾಡಿಗಳು. ಅವುಗಳಲ್ಲಿ ಪ್ರತಿದಿನ ಸುಮಾರು 3 ಕೋಟಿಯಷ್ಟು ಜನರು ಪ್ರಯಾಣಿಸುತ್ತಾರೆ. ಸುಮಾರು ಅಷ್ಟೇ ಸಂಖ್ಯೆಯಷ್ಟು ನೀರಿನ ಪ್ಲಾಸ್ಟಿಕ್ ಬಾಟಲ್‍ಗಳು ಹಾಗೂ ಪ್ಲಾಸ್ಟಿಕ್ ಚೀಲಗಳು ಎಸೆಯಲ್ಪಡುತ್ತವೆ. ಈ ಪೈಕಿ ನಿಗದಿತ ಕಸದ ಬುಟ್ಟಿಯೊಳಗೆ ಎಸೆಯುವವರು ಶೇ. 20ಕ್ಕೂ ಕಡಿಮೆ ಎಂದು ಸಮೀಕ್ಷೆಗಳು ಹೇಳುತ್ತವೆ. ಉಳಿದ ತ್ಯಾಜ್ಯ ರೈಲ್ವೆ ಕಂಬಿಗಳ ಪಕ್ಕ, ದಾರಿಯುದ್ಧ್ದಕ್ಕೂ ಬೀಳುತ್ತದೆ!

ಪ್ಲಾಸ್ಟಿಕ್ ಒಳ್ಳೆಯದಲ್ಲ ಎಂದು ಗೊತ್ತಿರುವಾಗ ಅದರ ತಯಾರಿಕೆಯನ್ನೇ ಸಂಪೂರ್ಣವಾಗಿ ನಿಲ್ಲಿಸುವುದು ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವಲ್ಲವೇ ಎಂದರೆ ಅದೂ ಅಷ್ಟಾಗಿ ನಡೆಯುವುದಿಲ್ಲ. ಏಕೆಂದರೆ ಅದು ಬಹಳ ಉಪಯುಕ್ತವಾದ ಪದಾರ್ಥ. ತುಂಬ ತೆಳುವಾದ, ನಿರುಪಯುಕ್ತ ಹಾಗೂ ಮಾಲಿನ್ಯಕಾರಿ ಪ್ಲಾಸ್ಟಿಕ್ ಅನ್ನು ನಿಷೇಧಿಸಬಹುದು. ಆ ಕೆಲಸವನ್ನು ನಮ್ಮ ಕಾನೂನು ಈಗಾಗಲೇ ಮಾಡಿದೆ. ಉಳಿದಂತೆ, ಇಡೀ ಪ್ಲಾಸ್ಟಿಕ್ ಸಂತಾನವನ್ನೇ ಹರಣಮಾಡುವುದು ಅಸಾಧ್ಯ.

ಪ್ಲಾಸ್ಟಿಕ್‍ಗೆ ಬದಲು ಕಾಗದ ಬಳಸುವುದೇನೋ ಸರಿಯಾದ ಕ್ರಮ, ಆದರೆ ಪ್ರಾಕ್ಟಿಕಲ್ ಕ್ರಮವಲ್ಲ. ಈಗ ಪ್ರತಿದಿನ ಕೋಟಿಗಟ್ಟಲೆ ಪ್ಲಾಸ್ಟಿಕ್ ಚೀಲಗಳ, ಬಾಟಲ್‍ಗಳ ಬಳಕೆಯಾಗುತ್ತಿದೆ. ಅದನ್ನು ಕಾಗದಕ್ಕೆ ಬದಲಾಯಿಸುವುದು ಸುಲಭಸಾಧ್ಯವಲ್ಲ. ಎಸೆಯುವುದಕ್ಕಾಗಿಯೇ ಅಷ್ಟು ಕಾಗದ ಉತ್ಪಾದಿಸುವುದು ಪರಿಸರಕ್ಕೆ ಇನ್ನೂ ಹಾನಿಕಾರಕ.

ಕಾಗದದ ಹಾಗೆ ಬೇಗ ಕೊಳೆತು ನಾಶವಾಗಿ ಪ್ರಕೃತಿಯಲ್ಲಿ ವಿಲೀನವಾಗುವ ಹೊಸ ಪ್ಲಾಸ್ಟಿಕ್ ಬರುವತನಕ ಹಳೆಯ ಪ್ಲಾಸ್ಟಿಕ್ ಚಿರಂಜೀವಿಯೇ. ಆದರೆ ಲೋಕಕಂಟಕ ಚಿರಂಜೀವಿ.