ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದು ಏನು ಗೊತ್ತಾ??

0
248

ಪ್ರಧಾನಿ ನರೇಂದ್ರ ಮೋದಿಯವರು 6ನೇ ಭಾರಿಗೆ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಹಲವು ವಿಚಾರಗಳ ಕುರಿತು ದೇಶದ ಜನರ ಕುರಿತು ಮಾತನಾಡಿದ ಮೋದಿಯವರು, 2022 ರೊಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವ್ ಆಗಲು ಅಭಿಯಾನ ಆರಂಭವಾಗಬೇಕಿದೆ. ಭಾರತವನ್ನು ಶ್ರೇಷ್ಠತೆಗೆ ಕೊಂಡೊಯ್ಯಲು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಡ್ಡಾಯವಾಗಬೇಕಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರು ಪೂರೈಕೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹೌದು ದೇಶದ ಜನರು 2022ರ ಒಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಬೇಕಿದೆ. ಎಲ್ಲಿ ನೀವು ಪ್ರವಾಸಕ್ಕೆ ಹೋಗುತ್ತಿರೋ ಅಲ್ಲಿ ಹೊಸ ಜಗತ್ತು ನಿರ್ಮಿಸಬಹುದು. ಭಾರತೀಯರು ಹೋಗುವ ಸ್ಥಳಗಳಿಗೆ ವಿದೇಶಿಯರು ಕೂಡ ಬರುತ್ತಾರೆ. ಈ ಮೂಲಕ ನಮ್ಮ ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಮನವಿ ಮಾಡಿಕೊಂಡರು. ರೈತರಲ್ಲಿ ನನ್ನದೊಂದು ಮನವಿ ಇಡುತ್ತೇನೆ. ನಾವು ಈ ದೇಶವನ್ನು ತಾಯಿ ಎಂದುಕೊಳ್ಳುವವರು. ಆದರೆ ಭೂತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಹೊರತಾಗಿ ಹಾಳು ಮಾಡುತ್ತಿದ್ದೇವೆ. ಭಾರೀ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸುರಿಯುತ್ತಿದ್ದೇವೆ. ಹಂತ ಹಂತವಾಗಿ ರಾಸಾಯನಿಕಗಳಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಸಾಗಬೇಕಿದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಚಂದ್ರನ ಮೇಲೆ ತ್ರಿವರ್ಣ ಧ್ವಜ:

ದೇಶವು ಬಾಹ್ಯಾಕಾಶದಲ್ಲಿ ಹೊಸ ಮೈಲುಗಲ್ಲು ಇಟ್ಟಿದೆ. ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಶೀಘ್ರದಲ್ಲೇ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಇದು ನಮಗೆ ಹೆಮ್ಮೆ ತರುವ ವಿಚಾರವಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಚಾವಾಗಲು ಅಭಿಯಾನ:

ಪ್ಲಾಸ್ಟಿಕ್ ಚೀಲವನ್ನು ನಮ್ಮಿಂದ ನಿರೀಕ್ಷಿಸಬೇಡಿ ಎಂಬ ಬೋರ್ಡ್ ಪ್ರತಿ ಅಂಗಡಿಯಲ್ಲೂ ಇರಲಿ. ಪ್ಲಾಸ್ಟಿಕ್ ಬ್ಯಾಗ್ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾಗ್‍ಗಳನ್ನು ಬಳಕೆ ಮಾಡಬೇಕಿದೆ. ಸ್ವದೇಶಿಯ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಕೆ ಮಾಡಿ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸೋಣ. ದೇಶದಲ್ಲಿರುವ ಬಲಿಷ್ಠ ಸರ್ಕಾರವನ್ನು ಪ್ರಪಂಚವೇ ಗುರುತಿಸಿದೆ. ವಿದೇಶದಕ್ಕೆ ಪ್ರತಿ ಜಿಲ್ಲೆಯಿಂದಲೂ ಒಂದಲ್ಲ ಒಂದು ರೀತಿಯ ಉತ್ಪನ್ನಗಳು ರಫ್ತು ಮಾಡಬೇಕು. ದೇಶದ ಅಭಿವೃದ್ಧಿಗೆ ಶಾಂತಿ ಹಾಗೂ ಸುರಕ್ಷತೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಸೈನಿಕರಿಗೆ, ಭದ್ರತಾ ಪಡೆಗೆ ನಾನು ನಮಿಸುತ್ತೇನೆ. ನಮ್ಮ ನೆರೆಯ ದೇಶಗಳು ಭಯೋತ್ಪಾದನೆಗೆ ತತ್ತರಿಸಿ ಹೋಗಿವೆ. ಭಾರತೀಯ ರಕ್ಷಣಾ ಪಡೆಯು ದೇಶದ ಸಂರಕ್ಷಣೆಗಾಗಿ ಪ್ರಶಂಸನೀಯ ಕೆಲಸ ಮಾಡಿವೆ ಎಂದರು.

ಒಂದು ರಾಷ್ಟ್ರ, ಒಂದು ಚುನಾವಣೆ’ ಕಡ್ಡಾಯ:

ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಭಾರತ ಮಾತನಾಡುತ್ತಿದೆ. ಇದು ಉತ್ತಮ ಬೆಳವಣಿಗೆ, ಕಳೆದ ಆಗಸ್ಟ್‌ನಲ್ಲಿ ಕಾನೂನು ಆಯೋಗವು ಸಾರ್ವಜನಿಕರ ದುಡ್ಡನ್ನು ಉಳಿಸಲು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕು ಎಂದು ಶಿಫಾರಸು ಮಾಡಿತ್ತು. ಆಯೋಗದ ಡ್ರಾಫ್ಟ್‌ ಕಾನೂನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಆದರೆ ಪ್ರಸ್ತುತ ಅಸ್ತಿತ್ವದಲ್ಲಿರುವ ಸಂವಿಧಾನದ ಚೌಕಟ್ಟಿನೊಳಗೆ ಏಕಕಾಲಕ್ಕೆ ಎರಡೂ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ. ಕೆಲವು ಬದಲಾವಣೆ ನಂತರ ಇದು ಸಾಧ್ಯವೆಂದು ಹೇಳಿದ್ದಾರೆ.