ಸಾಮಾನ್ಯ ಪ್ರಜೆಯಂತೆ ಸಾಲಿನಲ್ಲಿ ನಿಂತು ಹಣ ಬದಲಿಸಿಕೊಂಡ ಪ್ರಧಾನಿ ಮೋದಿ ತಾಯಿ

0
680

ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ತಾಯಿ ಹೀರಾಬೆನ್ ಮೋದಿಯವರು ಬೆಂಬಲವನ್ನು ವ್ಯಕ್ತಪಡಿಸಿದ್ದು, ಜನರೊಂದಿಗೆ ಸಾಲಿನಲ್ಲಿ ನಿಂತು ಮಂಗಳವಾರ ಬ್ಯಾಂಕೊಂದರಲ್ಲಿ ನೋಟನ್ನು ಬದಲಾಯಿಸಿಕೊಂಡಿದ್ದಾರೆ.

ಮಗ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ 94 ವರ್ಷ ಹೀರಾಬೇನ್ ತೀರಾ ಸಾಮಾನ್ಯ ಪ್ರಜೆಯಂತೆ ಸಾಲಿನಲ್ಲಿ ನಿಂತು ಹಣ ಪಡೆದು ರಾಷ್ಟ್ರಗಮನ ಸೆಳೆದಿದ್ದಾರೆ. ಗುಜರಾತ್‍ನ ಗಾಂಧಿನಗರದ ರಾಷ್ಟ್ರೀಯ ಬ್ಯಾಂಕ್ ಕಚೇರಿ ಮುಂದೆ ಬೆಳಿಗ್ಗೆಯೇ ಅನೇಕ ಜನರು ಹಣ ಪಡೆಯಲು ಸಾಲಾಗಿ ನಿಂತಿದ್ದರು.

ಪ್ರಧಾನಿ ಅವರ ತಾಯಿ ಹೀರಾಬೇನ್ ತಮ್ಮ ಸಹಾಯಕನ ನೆರವಿನಿಂದ ಅಲ್ಲಿಗೆ ಬಂದು ಸರತಿ ಸಾಲಿನಲ್ಲಿ ನಿಂತರು. ನಂತರ ತಮ್ಮ ಸರತಿ ಬಂದ ನಂತರ ತಮ್ಮ ಬಳಿ ಇದ್ದ 500 ರೂ.ಗಳು ಮತ್ತು 1,000 ರೂ.ಗಳನ್ನು ಕೌಂಟರ್‍ನಲ್ಲಿ ನೀಡಿ ನಿಯಮಗಳ ಪ್ರಕಾರ 4,500 ರೂ.ಗಳ ಹೊಸ ಕರೆನ್ಸಿಗಳನ್ನು ವಿನಿಮಯ ಮಾಡಿಕೊಂಡರು. ಈ ವಯೋವೃದ್ಧರು ಪ್ರಧಾನಿಯವರ ತಾಯಿ ಎಂದು ತಿಳಿದು ಬ್ಯಾಂಕ್ ಸಿಬ್ಬಂದಿ ನೆರವಿಗೆ ಬಂದರು ಆದರೆ ಸ್ವಾಭಿಮಾನಿಯಾದ ಹೀರಾಬೇನ್ ಸೌಜನ್ಯದಿಂದ ನಿರಾಕರಿಸಿ ಸಾಮಾನ್ಯ ಗ್ರಾಹಕರಂತೆ ನೋಟುಗಳನ್ನು ವಿನಿಮಯ ಮಾಡಿಕೊಂಡರು.