ರಾಜಕೀಯ ಪಕ್ಷಗಳು ಹಳೇ ನೋಟು ಎಷ್ಟು ಬೇಕಾದರೂ ಕೊಡಬಹುದು, ತೆರಿಗೆನೂ ಇಲ್ಲ, ದಂಡವೂ ಇಲ್ಲ!

0
597

ರಾಜಕೀಯ ಪಕ್ಷಗಳು ನಿಷೇಧವಾಗಿರುವ 500 ಮತ್ತು 1000 ನೋಟುಗಳಲ್ಲಿ ಎಷ್ಟು ಮೊತ್ತವನ್ನಾದರೂ ಬ್ಯಾಂಕ್‍ಗಳಲ್ಲಿ ಜಮೆ ಮಾಡಬಹುದು. ಇದಕ್ಕಾಗಿ ತೆರಿಗೆ ಅಥವಾ ದಂಡ ಪಾವತಿಸಬೇಕಾಗಿಲ್ಲ! ಬಹುಶ ಈ ವಿಷಯ ಮೊದಲೇ ಪ್ರಕಟಿಸಿದ್ದರೆ ಲೋಕಸಭೆಯ ಉಭಯ ಸದನಗಳ ಕಲಾಪ ಸುಗಮವಾಗಿ ನಡೆಯುತಿತ್ತು .

ಹಣಕಾಸು ಸಚಿವ ಅರುಣ್‍ ಜೇಟ್ಲಿ ಈ ವಿಷಯವನ್ನು ತಿಳಿಸಿದ್ದು, ದಶಕಗಳ ಹಿಂದಿನ ನಿಯಮಗಳು ಈ ಅವಕಾಶ ಕಲ್ಪಿಸಿದೆ. ಸ್ವಯಂಪ್ರೇರಿತವಾಗಿ ಅಥವಾ ಕಾರ್ಯಕರ್ತರಿಂದ ರಾಜಕೀಯ ಪಕ್ಷಗಳು ಹಣವನ್ನು ಪಡೆಯಬಹುದಾಗಿದ್ದು, ಇದಕ್ಕಾಗಿ ಲೆಕ್ಕ ನೀಡಬೇಕಾಗಿಲ್ಲ ಎಂದರು.

ರಾಜಕೀಯ ಪಕ್ಷಗಳಲ್ಲೇ ಅತೀ ಹೆಚ್ಚು ಕಪ್ಪುಹಣ ಇದೆ. ಚುನಾವಣೆ ಮುಂತಾದ ಸಂದರ್ಭಗಳಲ್ಲಿ ಬಳಸಲು ಉದ್ಯಮಿಗಳು ಸೇರಿದಂತೆ ಹಲವಾರು ಮಂದಿ ಭಾರೀ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳಿಗೆ ಹಣ ನೀಡುತ್ತಿದ್ದಾರೆ, ಇದನ್ನು ತಡೆಯಲು ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕಾದರೆ ರಾಜಕೀಯ ಪಕ್ಷಗಳಿಗೆ ಹರಿದು ಬರುವ ಹಣದ ಲೆಕ್ಕ ಅಗತ್ಯ ಎಂದು ಚುನಾವಣಾಧಿಕಾರಿಗಳು ಸಾಕಷ್ಟು ಬಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪಕ್ಷಗಳು ತಮ್ಮ ಖಾತೆಗಳಲ್ಲಿ ಹಳೆ ನೋಟುಗಳನ್ನು ಡಿಸೆಂಬರ್‍ 30ರವರೆಗೆ ಜಮೆ ಮಾಡಬಹುದು. ಇದು ತೆರಿಗೆ ವ್ಯಾಪ್ತಿಯಿಂದ ಹೊರಗುಳಿಯಲಿದೆ. ಆದರೆ ರಾಜಕೀಯ ಪಕ್ಷದ ಯಾವುದೇ ವ್ಯಕ್ತಿ ವೈಯಕ್ತಿಕ ಖಾತೆಗಳಲ್ಲಿ ಜಮೆ ಮಾಡಿದರೆ ಅದರ ಮಾಹಿತಿ ನಮಗೆ ಲಭ್ಯವಾಗಲಿದ್ದು, ಆ ಮೊತ್ತದ ಮೇಲೆ ತೆರಿಗೆ ಸೇರಿದಂತೆ ಇತರ ಕ್ರಮಗಳನ್ನು ಜರುಗಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದರು.

ರಾಜಕೀಯ ಪಕ್ಷಗಳು ತಮಗೆ ಬಂದ ಹಣದ ಮೂಲವನ್ನು ಬಹಿರಂಗಪಡಿಸಬಹುದು. ಅಲ್ಲದೇ ಅದರ ವಿವರವನ್ನು ಹೊಂದಿರುವುದು ಅವಶ್ಯಕ. ಅಗತ್ಯಬಿದ್ದಾಗ ವಿವರ ನೀಡಬೇಕಾಗುತ್ತದೆ ಎಂದು ರೆವಿನ್ಯು ಇಲಾಖೆ ಕಾರ್ಯ‍ದರ್ಶಿ ಹಸ್ ಮುಖ್‍ ಅಡಿಯಾ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಇತರರಿಗೆ ನೀಡಿದ ಕೊನೆಯ ಅವಕಾಶದಂತೆ ಡಿಸೆಂಬರ್‍ 30ರೊಳಗೆ ಕಪ್ಪುಹಣ ಘೋಷಿಸಿಕೊಳ್ಳಬಹುದು. ಇದಕ್ಕಾಗಿ ಶೇ.77ರಷ್ಟು ಮಾತ್ರ ತೆರಿಗೆ ವಿಧಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.