ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರಕ್ಕೆ ಪ್ರಶ್ನೆಗಳ ಸಮರ ಸಾರಿದ ಮೈಸೂರಿನ ಸಂಸದ ಪ್ರತಾಪ್ ಸಿಂಹ!!

0
330

ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಮೆರವಣಿಗೆ ವೇಳೆ ಸಂಸದ ಪ್ರತಾಪ್ ಸಿಂಹ ಬ್ಯಾರಿಕೇಡ್ ಮೇಲೆ ವಾಹನ ನಡೆಸಿ ಕಾನೂನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಆದ್ರೆ ಪ್ರತಾಪ್ ಸಿಂಹ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆ ಕೇಳುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ, ಸಚಿವ ವಿನಯ್ ಕುಲರ್ಣಿ ಹಾಗೂ ಮೈಸೂರು ಎಸ್ಪಿ ರವಿ ಡಿ.ಚನ್ನಣ್ಣವರ್ ವಿರುದ್ಧ ಹಲವು ಪೋಸ್ಟ್ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಪ್ರತಾಪ್ ಸಿಂಹ ಚುನಾವಣೆಗೆ ಮುನ್ನ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಕಾಂಗ್ರೆಸ್ ದೂರಿದೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಕಪಾಳಕ್ಕೆ ಹೊಡೆದ ಪುಂಡ ಯಾರು? ಬಳ್ಳಾರಿ ನಗರ ಪಾಲಿಕೆ ಅಧಿಕಾರಿಯ ಕಪಾಳಕ್ಕೆ ಹೊಡೆದವರ ವಿರುದ್ಧ ಕೇಸು ದಾಖಲಾಗಿದೇಯೋ ಇಲ್ವೋ? ಓಬವ್ವನಿಗೆ ಹಿಂದಿನಿಂದ ಚೂರಿ ಹಾಕಿದವನ ಜಯಂತಿ ಆರಂಭಿಸಿದ ಸರ್ಕಾರ ಯಾವುದು? ಮೈಸೂರಿನ ಕೆ.ಆರ್.ನಗರದಲ್ಲಿ ಅಂಟಿಸಿರುವ ಪೋಸ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಇಲ್ಲವೆ? ಎಂಬ ಪ್ರಶ್ನೆಗಳನ್ನು ಟ್ಟಿಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಕೇಳಿದ್ದಾರೆ.

ಮೈಸೂರು ಎಸ್ಪಿ ರವಿ ಡಿ ಚನ್ನಣ್ಣನವರ್‌ ಅವರು ಆಳುವ ಪಕ್ಷದ ಆಳು ಎಂಬುದನ್ನು ಒಪ್ಪಿಕೊಳ್ಳಲಿ. ಡಿವೈಎಸ್‌ಪಿ ಅಣ್ಣಾ ಮಲೈ, ಡಿಐಜಿ ರೂಪಾ ಐಎಎಸ್‌ ಅಧಿಕಾರಿ ರಶ್ಮಿ ಅವರನ್ನು ನೋಡಿ ಕಲಿಯಲಿ ಎಂದು ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದಾರೆ.

ಇದಲ್ಲದೆ ಕಳೆದ 13 ತಿಂಗಳಿಂದ ಪಿರಿಯಾಪಟ್ಟಣದ ರವಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗದ ನೀವು, 2 ವರ್ಷಗಳಿಂದ ಹುಣಸೂರಿನಲ್ಲಿ ಹನುಮ ಜಯಂತಿ ನಡೆಯುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೀರಿ. ನಿಮ್ಮ ಹಿಂದಿನ ಅವಧಿಯಲ್ಲಿ ಜಿಲ್ಲಾ ಎಸ್ಪಿ ಅಭಿನವ್‌ ಖರೆ ಅವರು 2015ರವರೆಗೆ ಹೇಗೆ ಮೆರವಣಿಗೆ ನಡೆಸಲು ಅವಕಾಶ ನೀಡಿದ್ದರು ಎಂಬುದನ್ನು ಕೇಳಿ ತಿಳಿದುಕೊಳ್ಳಿ ಎಂದು ರವಿ ಡಿ. ಚನ್ನಣ್ಣನವರ್‌ ಅವರನ್ನು ಪ್ರತಾಪ್‌ ಸಿಂಹ ಟೀಕಿಸಿದ ಬೆನ್ನಿಗೇ ಎಸ್ಪಿ ಅವರ ಪರವಿದ್ದವರೂ ಟ್ವೀಟ್‌ನಲ್ಲಿ ಉತ್ತರ ನೀಡಿದ್ದಾರೆ.

ಪ್ರತಾಪ್‌ ನಿಮ್ಮನ್ನು ನೀವು ಏನು ಅಂದ್ಕೊಂಡಿದಿರಾ? ಖಡಕ್‌ ಅಧಿಕಾರಿಗಳ ಬಗ್ಗೆ ಬುದ್ಧಿ ಉಪಯೋಗಿಸಿ ಮಾತನಾಡಿ ಎಂದು ಒಬ್ಬರು ಹೇಳಿದರೆ, ನಿಮಗೆ ಬುದ್ಧಿ ಇಲ್ಲ ಅಂತಾ ತೋರಿಸಿಕೊಟ್ಟುಬಿಟ್ರಿ ಪ್ರತಾಪ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಬಳಕೆದಾರರು ತಮಗೆ ತೊಚಿದಂತೆ ಉತ್ತರಗಳನ್ನು ನೀಡುತ್ತಿದ್ದಾರೆ.

ಹುಣಸೂರಿನಲ್ಲಿ ಭಾನುವಾರ ಹನುಮ ಜಯಂತಿ ಸಂದರ್ಭ ನಡೆದ ವಿದ್ಯಮಾನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ನೀಡಿದ ಸೂಚನೆಗೂ ಸಂಬಂಧ ಇದೆಯೇ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.