ಉತ್ತರಾಣಿಯಲ್ಲಿ ಅಡಗಿದೆ ಹಲವು ಖಾಯಿಲೆಗಳಿಗೆ ರಾಮಬಾಣ…

0
5429

ಬಿಳಿ ಉತ್ತರಾಣಿ ಕೆಂಪು ಉತ್ತರಹಳ್ಳಿ ಎಂದು ಎರಡು ಜಾತಿಗಲುಂಟು. ಬಿಳಿ ಉತ್ತರಾಣಿಯೇ ಗುಣದಲ್ಲಿ ಉತ್ತಮವಾದುದಾಗಿದೆ. ಇಡೀ ಗಿಡವು ಔಷಧದಲ್ಲಿ ಉಪಯುಕ್ತವಾಗಿದೆ.

ಯಕೃತ್, ಪ್ಲೀಹವೃದ್ಧಿ, ಶೋಥ, ಪಿತ್ತಾಶ್ಮರಿ, ಉರಿಮೂತ್ರ ನಿವಾರಣೆಗೆ:
ಇಡೀ ಗಿಡವನ್ನು ಜಜ್ಜಿ ಒಂದು ಹಿಡಿಸೊಪ್ಪಿಗೆ ನಾಲ್ಕು ಲೋಟ ನೀರಿನಲ್ಲಿ ಕಷಾಯ ಕಾಯಿಸಿ ಕಾಲುಭಾಗಕ್ಕೆ ಇಳಿಸಿಕೊಂಡು ದಿನದಲ್ಲಿ ಮೂರು ಬಾರಿ ಕುಡಿಯಬೇಕು.

ಅರಿಶಿನ ಮುಂಡಿಗೆ, ಜಾಂಡೀಸ್ ನಿವಾರಣೆಗೆ:
೧೦ ಗ್ರಾಂ ಉತ್ತರಣೆ ಬೀಜಗಳನ್ನು ರಾತ್ರಿ ನೆನೆಹಾಕಿ ಬೆಳೆಗ್ಗೆ ಚೆನ್ನಾಗಿ ರುಬ್ಬಿ, ಮಜ್ಜಿಗೆಯೊಂದಿಗೆ ಸೇವಿಸಬೇಕು. (ಒಂದು ವಾರ) ಪಥ್ಯ: ತಿಳಿಸಾರು, ಅನ್ನ, ಎಣ್ಣೆ ಸೇವಿಸಕೂಡದು.

ಸರ್ಪ ವಿಷ ನಿವಾರಣೆಗೆ:
ಉತ್ತರಣೆಯ ಬೇರು, ಕರಿಮೆಣಸು, ಎರಡನ್ನು ಸಮ ಪ್ರಮಾಣದಲ್ಲಿ ಚೂರ್ಣಿಸಿಕೊಂಡು, ಒಂದು ಚಮಚದಷ್ಟು ನುಣ್ಣನೆಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಸಬೇಕು. ವಿಷವು ನಿವಾರಣೆಯಾಗುವವರೆಗೂ ಆಗಾಗ ಕುಡಿಸುತ್ತಿರಬೇಕು. ಎಂದು ಭಾವಮಿಶ್ರನೆಂಬ ಪ್ರಾಚೀನ ಋಷಿಯು ಹೇಳಿರುತ್ತಾನೆ.

ಚೇಳು, ಝರಿ, ಇಲಿ, ನಾಯಿ, ಕಣಜ, ಜೇನುನೊಣ, ಮುಂತಾದ ಕ್ರಿಮಿ, ಕೀಟಗಳ ವಿಷ ನಿವಾರಣೆಗೆ:
ಉತ್ತರಣೆಯ ಬೇರನ್ನು ನಿಂಬೆಹಣ್ಣಿನ ರಸದಲ್ಲಿ ಇಲ್ಲವೆ ನೀರಿನಲ್ಲಿ ತೇಯಿದು ಗಂಧವನ್ನು ವಿಷ ಜಂತುಗಳು ಕಚ್ಚಿದ ಜಾಗಕ್ಕೆ ಲೇಪನ ಮಾಡಬೇಕು. ಮತ್ತು ಒಂದು ಕಡಲೆಕಾಳಿನ ಗಂಧವನ್ನು ನೆಕ್ಕಿಸಬೇಕು. ಇದರಿಂದ ವಿಷಭಾದೆಯು ನಿವಾರಣೆಯಾಗುವುದು.

ತಾಯಂದಿರ ಎದೆ ಹಾಲು ಹೆಚ್ಚಲು:
ಬಿಳಿ ಉತ್ತರಾಣಿ ಗಿಡದ ಹಸಿ ಬೇರನ್ನು ತಂದು ಚೆನ್ನಾಗಿ ತೊಳೆದು, ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಸ್ತನಗಳ ಮೇಲೆ (ಸ್ತನದ ತೊಟ್ಟು ಬಿಟ್ಟು) ಲೇಪಿಸುವುದು.

ಬಂಜೆತನದಲ್ಲಿ:
ಉತ್ತರಾಣಿ ಗಿಡದ ಹೂಗೊಂಚಲುಗಳನ್ನು ತಂದು ಎಮ್ಮೆ ಹಾಲಿನಲ್ಲಿ ನಯವಾಗಿ ಅರೆದು ಬಟ್ಟೆಯಲ್ಲಿ ಶೋಧಿಸುವುದು. ದಿವಸಕ್ಕೆ 10 ಗ್ರಾಂನಷ್ಟು ಹಾಲನ್ನು ಹೊರಗಾಗಿರುವಾಗ ಐದು ದಿವಸ ಸೇವಿಸುವುದು. ಹಾಲು ಅನ್ನ ಪಥ್ಯ, ಶಾಂತಚಿತ್ತರಾಗಿರುವುದು ಭಗವಂತನ ಕೃಪೆಯಿಂದ ಗರ್ಭವತಿಯಾಗುವರು. ಹೀಗೆ ಕ್ರಮವಾಗಿ ಮೂರು ಮುಟ್ಟಿನಲ್ಲಿ ಮಾಡಬೇಕು.

ಹಲ್ಲುನೋವು, ಒಸಡಿನಿಂದ ರಕ್ತ ಕೀವು ಸುರಿಯವುದು ಮತ್ತು ಬಾಯಿ ದುರ್ಗಂಧ ನಿವಾರಣೆಗೆ:
ನಮ್ಮ ಹಳ್ಳಿಗಾಡಿನ ಜನರು ಹಿಂದಿನ ಕಾಲದಿಂದಲೂ ಉತ್ತರಾಣಿ ಬೇರಿನಿಂದ ಹಲ್ಲುಜ್ಜುವ ಪದ್ದತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಮುಪ್ಪಿನಲ್ಲೂ ಕಡಲೆಕಾಳು ಅಗಿಯುವಷ್ಟು ಗಟ್ಟಿ ದಂತ ಶಕ್ತಿ ಉಳಿಸಿಕೊಂಡಿದ್ದಾರೆ. 10ಗ್ರಾಂ ಬಿಳಿ ಉತ್ತರಾಣಿ ಬೇರು ಮತ್ತು ಕಾಚು 10 ಗ್ರಾಂ ಚೆನ್ನಾಗಿ ಕುಟ್ಟಿ ಶುದ್ಧವಾದ ನೀರಿನಲ್ಲಿ ಅರ್ಧ ದಿವಸ ನೆನೆ ಹಾಕುವುದು. ಅನಂತರ ಚೆನ್ನಾಗಿ ಕಿವುಚಿ ಬಟ್ಟೆಯಲ್ಲಿ ಶೋಧಿಸಿ ಆಗಾಗ ಬಾಯಿ ಮುಕ್ಕಳಿಸುವುದು.

ಸಕಲ ನೇತ್ರ ವಿಕಾರಗಳಲ್ಲಿ:
ಒಂದು ತಾಮ್ರದ ತಟ್ಟೆಯಲ್ಲಿ ಸ್ವಲ್ಪ ಸೈಂಧವ ಲವಣ ಮತ್ತು ಮೊಸರಿನ ಮೇಲಿನ ತಿಳಿನೀರು ಹಾಕಿ ಇದರಲ್ಲಿ ಬಿಳೀ ಉತ್ತರಾಣಿ ಗಿಡದ ಬೇರನ್ನು ತೇದು ಗಂಧವನ್ನು ಕಣ್ಣುಗಳಿಗೆ ಅಂಜನವಿಕ್ಕುವುದು.

ಇಸಬಿಗೆ:
ಕೆಂಪು ಉತ್ತರಾಣಿ ಗಿಡವನ್ನು ಬೇರು ಸಹಿತ ತಂದು, ಸುಟ್ಟು ಬೂದಿ ಮಾಡುವುದು. 20 ಗ್ರಾಂ ಈ ಬೂದಿಗೆ 5 ಗ್ರಾಂ ವೀಳೆದೆಲೆಗೆ ಹಾಕುವ ಸುಣ್ಣ ಮತ್ತು 5 ಗ್ರಾಂ ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಶೋಧಿಸಿದ ಗೋಮೂತ್ರದಲ್ಲಿ ಅರೆದು ಹಚ್ಚುವುದು.

ಪೆಟ್ಟು ತಾಗಿ, ರಕ್ತ ಸೋರುತ್ತಿದ್ದರೆ:
ಕೆಂಪು ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಗಾಯದ ಮೇಲೆ ಹಿಂಡುವುದು. ತಕ್ಷಣ ರಕ್ತಸ್ರಾವ ನಿಲ್ಲುವುದು ಮತ್ತು ಗಾಯವು ಕ್ರಮೇಣ ವಾಸಿಯಾಗುವುದು.

ಮೂತ್ರದಲ್ಲಿ , ರಕ್ತ ಬೀಳುತ್ತಿದ್ದರೆ:
ಒಂದು ಟೀ ಚಮಚ ಕೆಂಪು ಉತ್ತರಾಣಿ ಗಿಡದ ರಸಕ್ಕೆ ಒಂದು ಟೀ ಚಮಚ ಮೆಣಸಿನ ಕಾಳಿನ ಪುಡಿ ಸೇರಿಸಿ ನೆಕ್ಕಿಸುವುದು.