ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ದೇಶಾದ್ಯಂತ ಭಾರಿ ಹೋರಾಟ; ಇಷ್ಟೊಂದು ವಿವಾದ ಹುಟ್ಟುಹಾಕಿದ್ದು ಸರಿನಾ??

0
212

ದೇಶಾದ್ಯಂತ ಸದ್ದು ಮಾಡುತ್ತಿರುವುದು ಪೌರತ್ವ(ತಿದ್ದುಪಡಿ) ಮಸೂದೆಗೆ ಈಶಾನ್ಯ ಭಾರತದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಈ ವಿವಾದಿತ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಸೋಮವಾರ ಲೋಕಸಭೆಯಲ್ಲಿ ಮಂಡಿಸಿ ಅದಕ್ಕೆ ಬಹುಮತ ಸಿಕ್ಕಿ ಅನುಮೋದನೆಗೊಂಡು ಇದೀಗ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ಈ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬುದು ವಿರೋಧಿಸುತ್ತಿರುವವರ ಅಸ್ಸಾಂ, ತ್ರಿಪುರಾ, ಮಣಿಪುರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈಶಾನ್ಯ ಭಾರತದ ಹಲವು ಕಡೆ ಕಲ್ಲುತೂರಾಟ ನಡೆದಿರುವ ಘಟನೆಗಳು ವರದಿಯಾಗಿವೆ.

ಹೌದು ದೇಶದ ತುಂಬೆಲ್ಲ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದು, ಪ್ರತಿಭಟನಾಕಾರರ ಆಕ್ರೋಶಕ್ಕೆ ವಾಹನಗಳು ಬೆಂಕಿಗೆ ಆಹುತಿಯಾಗಿವೆ.​​ತ್ರಿಪುರಾದಲ್ಲಿ ಬುಡಕಟ್ಟು ರಾಜಕೀಯ ಪಕ್ಷಗಳು ಹಾಗೂ ‘ಆಲ್‌ ಮೊರಾನ್‌ ಸ್ಟೂಡೆಂಟ್ಸ್‌ ಯೂನಿಯನ್‌’ ಸೇರಿದಂತೆ ಅನೇಕ ವಿದ್ಯಾರ್ಥಿ ಸಂಘಟನೆಗಳು 11 ಗಂಟೆಗಳ ಬಂದ್‌ಗೆ ಕರೆ ನೀಡಿದ್ದರಿಂದ ದಾಲಾಯಿ, ಪಶ್ಚಿಮ ತ್ರಿಪುರಾರ, ಕೊವಾಯಿ ಜಿಲ್ಲೆಗಳಲ್ಲಿ ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿತ್ತು. ಶಾಲಾ, ಕಾಲೇಜುಗಳು, ಬ್ಯಾಂಕ್‌ಗಳು ಬಂದ್‌ ಆಗಿದ್ದವು. ಅಂಗಡಿಗಳು ಮುಚ್ಚಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪ್ರತಿಭಟನೆಯ ಕಾವಿನಿಂದ ಅಸ್ಸಾಂ, ಮಣಪುರದಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು. ಮುಂಜಾಗ್ರತಾ ಕ್ರಮವಾಗಿ ತ್ರಿಪುರಾದಲ್ಲಿ 48 ಗಂಟೆಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ಅಸ್ಸಾಂನ ಗುವಾಹಟಿಯಲ್ಲಿ ಪ್ರತಿಭಟನಾಕಾರರು ವಿಧಾನಸಭೆ ಕಟ್ಟಡಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರಿಂದ ಪೊಲೀಸರು ಹಾಗೂ ಆಕ್ರೋಶಿತರ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಈ ಮಧ್ಯೆ ಪ್ರತಿಭಟನಾಕಾರರು ರೈಲು ತಡೆ ನಡೆಸಿದ್ದರಿಂದ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು ಎಂದು ರೈಲ್ವೆ ಇಲಾಖೆ ಹೇಳಿದೆ. ಅಷ್ಟೇ ಅಲ್ಲದೆ ಮಸೂದೆ ವಿಧೇಯಕಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂವಿಧಾನದ ಆಶಯಗಳನ್ನೇ ಇದು ಬುಡಮೇಲು ಮಾಡಿದೆ ಎಂದು ವಾಗ್ದಾಳಿ ನಡೆಸಿದೆ. ಈ ಮಧ್ಯೆ ವಿಧೇಯಕ ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲ ರಾಜ್ಯ ಘಟಕಗಳಿಗೆ ಆದೇಶಿಸಿದೆ. ಈ ಮಧ್ಯೆ ರಾಹುಲ್‌ ಗಾಂಧಿ, ”ಇದು ಸಂವಿಧಾನದ ಮೇಲಿನ ದಾಳಿಯಾಗಿದೆ,” ಎಂದು ಕಿಡಿಕಾರಿದ್ದಾರೆ.

ಏನಿದು ಮಸೂದೆ?

ಪೌರತ್ವ (ತಿದ್ದುಪಡಿ) ಮಸೂದೆ 2019, 1955ರಲ್ಲಿ ಜಾರಿಗೆ ತರಲಾಗಿದ್ದ ನಾಗರಿಕ ಕಾಯ್ದೆಗೆ ತಿದ್ದುಪಡಿಯಾಗಿದೆ. ಮುಸ್ಲಿಂ ಧರ್ಮೀಯರು ಬಹುಸಂಖ್ಯೆಯಲ್ಲಿರುವ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಂಯೇತರ ನಿರಾಶ್ರಿತರಿಗೆ, ಅಲ್ಲಿ ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಕಂಡುಕೊಂಡು ಬಂದಿರುವ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಮಸೂದೆಯಾಗಿದೆ. ಒಂದು ಬಾರಿ ಈ ತಿದ್ದುಪಡಿ ವಿದೇಯಕ ಜಾರಿಗೆ ಬಂದರೆ ಈ ಮೂರೂ ದೇಶಗಳ ಹಿಂದೂ, ಸಿಖ್, ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯದ ವಲಸಿಗರಿಗೆ ಭಾರತದ ಪೌರತ್ವ ಸಿಗುತ್ತದೆ. ಅವರು ಅಕ್ರಮ ವಲಸಿಗರು ಎಂದು ನಂತರ ಪರಿಗಣಿಸಲಾಗುವುದಿಲ್ಲ.

ಈ ತಿದ್ದುಪಡಿ ಮಸೂದೆ ವಿವಾದ ಹುಟ್ಟುಹಾಕಿದ್ದು ಏಕೆ?

ತಿದ್ದುಪಡಿ ಮಸೂದೆಯನ್ನು ವಿರೋಧಿಸುವವರು ಹೇಳುವ ಪ್ರಕಾರ ಇದು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ, ಭಾರತ ಸಂವಿಧಾನದ ಜಾತ್ಯತೀತತೆಯ ಮೂಲ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನದ 14ನೇ ವಿಧಿಯನ್ನು ಈ ಮಸೂದೆ ಉಲ್ಲಂಘಿಸುತ್ತದೆ ಎಂಬುದು ಕೆಲವು ಸಂವಿಧಾನ ತಜ್ಞರ ವಾದಗಿದೆ.

Also read: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್; ಅಮಿತ್ ಶಾ ಸೇರಿ ಪ್ರಮುಖ ನಾಯಕರ ಮೇಲೆ ನಿರ್ಬಂಧ ವಿಧಿಸಲು ಅಮೆರಿಕದಲ್ಲಿ ಒತ್ತಾಯ.!