ATM ಮುಂದೆ ನಿಂತಿರುವ ಸಾಮಾನ್ಯರಿಂದ ಮೋದಿಗೆ ಈ ಪ್ರಶ್ನೆಗಳು!!!

0
1741

ತಾವು ಬೆವರು ಹರಿಸಿ ಗಳಿಸಿದ ಹಣವನ್ನು ಪಡೆದುಕೊಳ್ಳಲು ಕೋಟ್ಯಾನುಕೋಟಿ ಜನರನ್ನು ವಾರಗಟ್ಟಲೆ ಕ್ಯೂನಲ್ಲಿ ನಿಲ್ಲಿಸಿದ ಜಗತ್ತಿನ ಏಕೈಕ ನಾಯಕ ಮಾನ್ಯ ನರೇಂದ್ರ ಮೋದಿಯವರೇ….
ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯ/ ಪ್ರಾಮಾಣಿಕತೆ ತೋರುವಿರಾ?!

ಜನಸಾಮಾನ್ಯರನ್ನು ಅಪರಾಧಿಗಳಂತೆ ತುಚ್ಛವಾಗಿ ಕಂಡು, ಕಪ್ಪು ಹಣವನ್ನು ನಿಯಂತ್ರಣ ಮಾಡುತ್ತೇನೆಂದು ಭಾಷಣ ಬಿಗಿಯುತ್ತಿರುವ ತಮಗೆ ಪ್ರಾಮಾಣಿಕತೆ ಎಂಬುದಿದ್ದರೆ ಎಲ್ಲ ಪಕ್ಷಗಳ ಸಂಸದ / ಶಾಸಕರುಗಳ ಐಷಾರಾಮಕ್ಕೆ ಕತ್ತರಿಹಾಕುವ ಕ್ರಮ ಕೈಗೊಳ್ಳುವಿರಾ??
ತಮ್ಮ ಆಸ್ತಿ ಪಾಸ್ತಿ, ಆದಾಯ ಪ್ರಮಾಣಪತ್ರ ಸಲ್ಲಿಸದ ನಿಮ್ಮ ಸಂಸದರೂ, ಮಂತ್ರಿಗಳ ವಿರುದ್ಧ ಕನಿಷ್ಠ ಕ್ರಮ ಕೈಗೊಳ್ಳುವಿರಾ??
ಸಂಸದರ ವೇತನ , ಭತ್ಯೆ, ಪಿಂಚಣಿ ಎಲ್ಲವನ್ನೂ ಯದ್ವಾತದ್ವಾ ಏರಿಸಿರುವ ನೀವು ಅವುಗಳನ್ನು ಕಡಿತಗೊಳಿಸಿ, ನಿವೃತ್ತ ಸೈನಿಕರ ಪಿಂಚಣಿಯನ್ನು ಏರಿಕೆ ಮಾಡುವಿರಾ??

ಎಲ್ಲಕ್ಕಿಂತ ಮೊದಲು ಸಹಾರಾ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಕಂಪನಿಗಳಿಂದ ಕೋಟ್ಯಾನುಕೋಟಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಸ್ವಯಂ ನೀವು ಕಳಂಕ ಮುಕ್ತರಾಗಲು ನ್ಯಾಯಾಂಗ ತನಿಖೆಗೆ ಆದೇಶಿಸುವಿರಾ??

ನಿಮ್ಮದೇ ಪಕ್ಷದ ಕಪ್ಪುಕುಳಗಳಾದ ಬಳ್ಳಾರಿ ಗಣಿ ರೆಡ್ಡಿಗಳು, ಕೇಂದ್ರ ಸಚಿವ ನಿತಿನ್ ಗಡ್ಕರಿ ಯಂತಹವರು ತಮ್ಮ ಅಕ್ರಮ ಗಳಿಕೆಯ ಮದದಲ್ಲಿ ತಮ್ಮ ಮಕ್ಕಳ ಮದುವೆಗೆ ನೂರಾರು ಕೋಟಿಗಳ ಹಡಬಿಟ್ಟಿ ಹಣ ಸುರಿದು ಪ್ರಜಾಪ್ರಭುತ್ವವನ್ನೇ ಅಣಕಿಸುತ್ತಿದ್ದಾರೆ. ತಮ್ಮ 56 ಇಂಚಿನ ಎದೆಯಲ್ಲಿ ಕನಿಷ್ಠ ಪ್ರಾಮಾಣಿಕತೆ ಇದ್ದರೆ ನಿಮ್ಮದೇ ಪಕ್ಷದಲ್ಲಿರುವ ಇಂಥ ನೂರಾರು ಖದೀಮರ ವಿರುದ್ಧ ಬಾಯಿಬಿಚ್ಚುವಿರಾ?!

ಸಾರ್ವಜನಿಕ ಬ್ಯಾಂಕುಗಳ ಸುಮಾರು 13 ಲಕ್ಷ ಕೋಟಿಗಳನ್ನು ಗುಳುಂ ಮಾಡಿ ಮೆರೆಯುತ್ತಿರುವ ನಿಮ್ಮ ಅಂತರಂಗದ ಬಂಧುಗಳಾದ ಅಂಬಾನಿ, ಅದಾನಿ, ಎಸ್ಸಾರ್, ವೇದಾಂತ, ಬಿರ್ಲಾ, ಸಿಂಘಾಲ್ ಮುಂತಾದ ಕಂಪನಿ ಒಡೆಯರಿಂದ ಬಡಬೋರೇಗೌಡರಿಗೆ ಸೇರಬೇಕಾದ ಸಂಪತ್ತನ್ನು ವಸೂಲಿ ಮಾಡುವ ಕ್ರಮ ಕೈಗೊಳ್ಳಲು “ದೃಢವಾದ ಹೆಜ್ಜೆ” ಇಡಬಲ್ಲಿರಾ??

ಹೋಗಲಿ, ಬರಲಿರುವ ಉತ್ತರಪ್ರದೇಶ, ಪಂಜಾಬ್ ಮುಂತಾದ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಮತದಾರರ ಜೊತೆ ಅಥವಾ ಇತರೆ ಚುನಾವಣಾ ವೆಚ್ಚಗಳಲ್ಲಿ ನಗದುರಹಿತ ಡಿಜಿಟಲ್ ವ್ಯವಹಾರ ಮಾಡುತ್ತದೆಂದು ಘೋಷಿಸುವಿರಾ?

ಇದುವರೆಗೂ ಎಲ್ಲ ಭ್ರಷ್ಟ ರಾಜಕೀಯ ಪಕ್ಷಗಳಂತೆಯೇ ನಿಮ್ಮ ಪಕ್ಷ ಸ್ವೀಕರಿಸಿರುವ ಸಾವಿರಾರು ಕೋಟಿ ಅನುಮಾನಾಸ್ಪದ/ ಬೇನಾಮಿ (ಕಪ್ಪುಹಣದ) ದೇಣಿಗೆಗಳಿಗೆ ಇತಿಶ್ರೀ ಹಾಡಿ ಇನ್ನುಮುಂದೆ ನಿಮ್ಮ ಪಕ್ಷದ ಎಲ್ಲಾ ದೇಣಿಗೆಗಳನ್ನು ಡಿಜಿಟಲ್ ರೂಪದಲ್ಲಿ / ಚೆಕ್ ಮೂಲಕ ಸಂಪೂರ್ಣ ಬಿಳಿಬಣ್ಣದಲ್ಲಿ ಮಾತ್ರವೇ ಸ್ವೀಕರಿಸಲಾಗುವುದು ಎಂದು ಘೋಷಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳುವಿರಾ?

ಕೊನೆಯದಾಗಿ ಮತ್ತೊಂದು ತೀರಾ ವೈಯುಕ್ತಿಕ ಪ್ರಶ್ನೆ.
ತೊಟ್ಟಬಾಣವನ್ನು ಮತ್ತೆ ತೊಡುವುದಿಲ್ಲವೆಂದು ಶಪಥ ಮಾಡಿದ್ದ ಮಹಾಭಾರತದ ಕರ್ಣನಂತೆ ಕಲಿಯುಗದಲ್ಲಿ ಕಂಗೊಳಿಸುತ್ತಿರುವ ನೀವು ಒಮ್ಮೆ ತೊಟ್ಟ ದಿರಿಸನ್ನು ಮತ್ತೊಮ್ಮೆ ತೊಡುತ್ತಿಲ್ಲ!! ಅದೂ ಎಂತೆಂಥಾ ಡ್ರೆಸ್ಸುಗಳು! ಪ್ರತಿಯೊಂದೂ ಲಕ್ಷಾಂತರ ಬೆಲೆಬಾಳುತ್ತವೆ! ನಿಮ್ಮ ಬರೀ ಡ್ರೆಸ್ಸುಗಳ ಲೆಕ್ಕ ಪರಿಶೋಧನೆ ಮಾಡಿದರೂ ಹತ್ತಾರು ಕೋಟಿಗಳು ವೆಚ್ಚವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ತುಂಡುಬಟ್ಟೆಗೆ ಗತಿಯಿಲ್ಲದ ಕೋಟ್ಯಾನುಕೋಟಿ ಬಡಬಗ್ಗರು ಬೀದಿಯಲ್ಲಿರುವ ಈ ದೇಶದಲ್ಲಿ ನಿಮ್ಮ ಐಷಾರಾಮಿ ವೇಷಗಳನ್ನು ಸ್ವಲ್ಪ ಸರಳಗೊಳಿಸಿಕೊಂಡರೆ ಸಾವಿರಾರು ಬಡಬಗ್ಗರಿಗೆ ವಸ್ತ್ರದಾನ ಮಾಡಬಹುದಿತ್ತು! ಹೋಗಲಿ, ನಿಮಗೆ ಬರುವ ಸಂಬಳ ನಿಮ್ಮ ಶೂ ಕೊಂಡುಕೊಳ್ಳಲೂ ಎಟುಕುವುದಿಲ್ಲ, ಹೀಗಿರುವಾಗ ಕಣ್ಣುಕೋರೈಸುವ ನಿಮ್ಮ “Seven Star” ಜೀವನಶೈಲಿಯ ವೈಭೋಗಕ್ಕೆ ಹಣ ಎಲ್ಲಿಂದ ಬರುತ್ತದೆ ಸ್ವಾಮಿ??
ನಿಮ್ಮ ಅಭಿಮಾನಿಗಳಿಂದ ಬರುತ್ತದೆ ಎಂದು ನಿಮ್ಮ ಭಕ್ತಮಂಡಳಿ ಬಾಯಿ ಬಡಿದುಕೊಳ್ಳುತ್ತದೆ ಎಂಬುದು ಗೊತ್ತು. ನಿಮಗೆ ಇಂಥಾ ಐಷಾರಾಮಿ ಜೀವನವನ್ನು ದಯಪಾಲಿಸಿರುವ ಆ ಅಭಿಮಾನಿಗಳ ಪಟ್ಟಿಯನ್ನೂ ಮತ್ತು ತಮಗೂ ಅವರಿಗೂ ಇರುವ ಸಂಬಂಧ ಎಂತಹದ್ದು ಎಂಬ ರಹಸ್ಯವನ್ನು ದೇಶದ ಜನರ ಮುಂದೆ ಪ್ರಾಮಾಣಿಕವಾಗಿ ಬಿಚ್ಚಿಡುತ್ತೀರಾ??

ನಿಮ್ಮ “ಮನ್ ಕಿ ಬಾತ್” ಕೇಳುವ ನಿರೀಕ್ಷೆಯಲ್ಲಿ

ಇಂತಿ ಬಡ ಭಾರತೀಯ