ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆಯಲ್ಲಿ ಅಡಗಿರುವ ಶಕ್ತಿ ಎಂತಹದು ಎಂದು ತಿಳಿದುಕೊಳ್ಳಲು ಈ ಕತೆಯನ್ನು ಓದಿ…

0
2532

“ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಎನ್ನುವ ಪದ ಪ್ರತಿಯೊಬ್ಬರ ನಾಲಿಗೆಯ ಮೇಲೆ ನೆಲೆದಾಡುವಂತಹ ದಾಸರ ಪದ. ಗುರುಗಳ ಸಂಪೂರ್ಣ ಅನುಗ್ರಹವಾದನಂತರವೇ  ಜನರಿಗೆ ಸಂಪೂರ್ಣ ಜ್ಞಾನ ಪರಿಪೂರ್ಣವಾದ ಪರಿಜ್ಞಾನ, ಅರಿವು, ಮಾರ್ಗದರ್ಶನ ಸಿಗುವುದು. ಅಂತಹ ಗುರುಗಳಲ್ಲಿ  ಅಗ್ರಗಣ್ಯರು ಶ್ರೀ ಗುರು ರಾಘವೇಂದ್ರರು. ದೇವಲೋಕದಲ್ಲಿ ದೇವತೆಗಳಿಗೆ ದೇವೆಂದ್ರನು ಹೇಗೆಯೋ ಹಾಗೇ ಯತಿ ಪರಂಪರೆಗೆ ಹಿರಿಯರು ಶ್ರೀ ಗುರುರಾಘವೇಂದ್ರ ಸ್ವಾಮಿಗಳು.

ಯೋಗ ಸಿದ್ದಿಗಳಲ್ಲಿ ದತ್ತಾತ್ರೇಯನು ಹೇಗೆ ಶ್ರೇಷ್ಟನೋ ಎಲ್ಲಾ ಕಡಲುಗಳಿಗಿಂತ ಕ್ಷೀರ ಸಾಗರವು ಹೇಗೆ ಶ್ರೇಷ್ಟವೋ ಹಾಗೇ ಯತಿ ಪರಂಪರೆಯಲ್ಲಿ ಸರ್ವ ಶ್ರೇಷ್ಟರು, ಸರ್ವೋತ್ತಮರು ಶ್ರೀ ರಾಘವೇಂದ್ರರು. ದೇವರೆಂದರೆ ತಿರುಪತಿ ತಿಮ್ಮಪ್ಪನೇ, ಗುರುಗಳೆಂದರೆ ಮಂಚಾಲೆಯ ರಾಘಪ್ಪನೆ ಎಂಬ ನಾಣ್ನುಡಿ  ನಮ್ಮೆಲ್ಲರಿಗೂ ಗೊತ್ತಿರುವುದೇ. ಅಂತಹ ದಿವ್ಯ ಪುರುಷರ ಮಹಿಮೆಯನ್ನು ಕೊಂಡಾಡುವುದು ನಮ್ಮೆಲ್ಲರ ಭಕ್ತಿ ಹಾಗು ಶ್ರದ್ದೆಗಳಿಗೆ ಹಿಡಿದ ಕನ್ನಡಿ.  ರಾಘವೇಂದ್ರರು ದೈವಜ್ಞರರು, ಪವಾಡ ಪುರುಷರು. ಅವರ ಮಹಿಮೆಗಳು ಅಪಾರ. ಅದರಲ್ಲಿ ಒಂದು ಮಹಿಮೆಯನ್ನು ನಿಮ್ಮೊಂದಿಗೆ ನಾವು ಹಂಚಿಕೊಳ್ಳುತ್ತಿದ್ದೇವೆ.

ಶ್ರೀ ರಾಘವೇಂದ್ರ ಸ್ವಾಮಿಗಳ ಬಳಿ ಅನೇಕ ವಿದ್ಯಾರ್ಥಿಗಳು  ವೇದ ವ್ಯಾಸಂಗವನ್ನು ಮಾಡುತ್ತಿದ್ದರು. ಅವರಲ್ಲಿ ಒಬ್ಬನಾದ ಬಡ ವಿದ್ಯಾರ್ಥಿ  ತನ್ನ ವಿದ್ಯಾಭ್ಯಾಸ  ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು  ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನಂತೆ. ಸ್ನಾನ ಸಮಯದಲ್ಲಿ ಇದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವಲ್ಲಾ ಎಂದರಂತೆ. ಆಗ  ತಾವು ಏನು ಕೊಟ್ಟರು ಅದು ಮಹಾಪ್ರಸಾದವೆಂದು ಸ್ವೀಕರಿಸುತ್ತೇನೆಂದು ಹೇಳಿದನಂತೆ ಆ ಬಡ ವಿಧ್ಯಾರ್ಥಿ.

ಆಗ ರಾಯರು ಒಂದು ಹಿಡಿ ಮಂತ್ರಾಕ್ಷತೆಯನ್ನು ವಿಧ್ಯಾರ್ಥಿಯ ಕೈಯಲ್ಲಿ ಕೊಟ್ಟರಂತೆ. ಭಕ್ತಿಯಿಂದ ಆ ಮಂತ್ರಾಕ್ಷತೆಯನ್ನು ಮಹಾಪ್ರಸಾದವೆಂದು ಪಡೆದುಕೊಂಡು ವಿಧ್ಯಾರ್ಥಿ ತನ್ನ ಊರಿನ ಕಡೆಗೆ ಹೊರಟನಂತೆ. ದಾರಿಯಲ್ಲಿ ಕತ್ತಲಾಗಿದ್ದ ಕಾರಣ ಒಂದು ಮನೆಯ ಜಗಲಿಯ ಮೇಲೆ ಮನೆ ಮಾಲಿಕರಲ್ಲಿ ಅಪ್ಪಣೆಯನ್ನು ಪಡೆದು ಮಲಗಿದನಂತೆ. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮದ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿ ಬಂದಿತಂತೆ. ಆದರೆ ಜಗಲಿಯಲ್ಲಿ ಮಲಗಿದ್ದ ಆ ಬಡ ವಿದ್ಯಾರ್ಥಿ ಬಳಿಯಲ್ಲಿರುವ ಮಂತ್ರಾಕ್ಷತೆ  ದಾಟಲು ಪ್ರಯತ್ನಿಸಿದಾಗ  ಮಂತ್ರಾಕ್ಷತೆಯು ಬೆಂಕಿಯಂತೆ ಪಿಶಾಚಿಯನ್ನು ತಡೆಯಿತಂತೆ. ಇದರಿಂದ ಗಾಬರಿಗೊಂಡ  ಪಿಶಾಚಿಯು ಭಕ್ತನನ್ನು ನೋಡಿ  ಮಂತ್ರಾಕ್ಷತೆಯನ್ನು ದೂರ ಎಸೆಯಲು ಹೇಳಿತಂತೆ.  ಪಿಶಾಚಿಯನ್ನು ನೋಡಿದ ಭಕ್ತ ಹೆದರಿ  ಪಿಶಾಚಿಯ ಮೇಲೆ  ಮಂತ್ರಾಕ್ಷತೆಯನ್ನು ಎಸೆದನಂತೆ. ಮಂತ್ರಾಕ್ಷತೆಯ  ಪ್ರಭಾವದಿಂದ ಪಿಶಾಚಿಯು ಸುಟ್ಟು ಭಸ್ಮವಾಯಿತಂತೆ. ಪಿಶಾಚಿಯ ಚೀರಾಟವನ್ನು  ಕೇಳಿದ ಮನೆಯವರು ಮನೆಯಿಂದ ಹೊರಬಂದು ನೋಡಿ ಬೆರಗಾದರು. ಅಷ್ಟರಲ್ಲಿ ಆರೋಗ್ಯಕರವಾದ ಮಗು ಜನಿಸಿದ ಸಂತೋಷಕರ ಸುದ್ದಿ  ಕೇಳಿಬರುತ್ತದೆ. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು. ಹೀಗೆ ಶ್ರೀ ರಾಘವೇಂದ್ರ ಸ್ವಾಮಿಯು ದುಷ್ಟ ಶಿಕ್ಷಕ ಮತ್ತು ಶಿಷ್ಟ ರಕ್ಷಕರಾಗಿ ಅನೇಕ ಮಹಿಮೆಗಳನ್ನು ತೋರಿಸಿಕೊಡುತ್ತ ಬೃಂದಾವನದಲ್ಲಿ ಐಕ್ಯರಾಗಿದ್ದಾರೆ.

ಮಂತ್ರಾಲಯ ವಾಸಿಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಸಾಕಷ್ಟು ಜನ ತಮ್ಮ ತನು ಮನದಿಂದ ಆ ರಾಯರನ್ನ ಆರಾಧಿಸಿ ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಾರೆ ಅವರು ನೀಡಿದ ಮಂತ್ರಾಕ್ಷತೆಯಲ್ಲಿ  ಅಷ್ಟು ಮಹಿಮೆ ಇರಬೇಕಾದರೆ ಅವರ ಕೃಪಾ ಕಟಾಕ್ಷವನ್ನು ಹೊಂದಿದವರು ಸಕಲ ಇಷ್ಟಾರ್ಥಗಳನ್ನು ಹೊಂದುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.