ಗೌರವ ಡಾಕ್ಟರೇಟ್ ನಿರಾಕರಿಸಿದ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್‌ ದ್ರಾವಿಡ್

0
699

ಕ್ರೀಡಾ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ ಎಂದು ಅನೇಕ ಪತ್ರಿಕೆಗಳಲ್ಲಿ ವರದಿಯಾಗಿತ್ತು ಆದರೆ ಬೆಂಗಳೂರು ವಿಶ್ವವಿದ್ಯಾಲಯದ 2017ನೇ ಸಾಲಿನ ಗೌರವ ಡಾಕ್ಟರೇಟ್‌ ನ್ನು ಸೌಜನ್ಯದಿಂದ ತಿರಸ್ಕರಿಸಿದ್ದಾರೆ.

ಗೌರವ ಡಾಕ್ಟರೇಟ್ ಅನ್ನು ಬೇಕಾಬಿಟ್ಟಿಯಾಗಿ ಪ್ರದಾನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಒಟ್ಟಾರೆ 8 ಅಂಶಗಳಿರುವ ನೂತನ ಮಾನದಂಡ ಪಟ್ಟಿ ಪ್ರಕಟ ಮಾಡಿದ್ದಾರೆ. ಹೊಸ ಪರಿಶೀಲನಾ ಸಮಿತಿಯೊಂದು ವಿವಿ ಶಿಫಾರಸು ಮಾಡಿದ ವ್ಯಕ್ತಿಗಳ ಸಾಧನೆಗಳನ್ನು ಪರಿಶೀಲಿಸಿ ಅಂತಿಮವಾಗಿ ವ್ಯಕ್ತಿಯನ್ನು ಆಯ್ಕೆ ಮಾಡಲಿದೆ ಎಂದು ರಾಜ್ಯಪಾಲರು ಕುಲಪತಿಗಳಿಗೆ ಮಂಗಳವಾರ ತಿಳಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿನ ವಿಶೇಷ ಸಾಧನೆಯನ್ನು ಗಮನಿಸಿ ಮಂಗಳವಾರವಷ್ಟೆ ದ್ರಾವಿಡ್ ಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.

ಈ ಕುರಿತು ಉಪ ಕುಲಪತಿ ತಿಮ್ಮೇಗೌಡರಿಗೆ ರಾಹುಲ್ ದ್ರಾವಿಡ್ ಈ-ಮೇಲ್ ಮಾಡಿ ಗೌರವ ಡಾಕ್ಟರೇಟ್ ತಿರಸ್ಕರಿಸುತ್ತಿರುವುದಾಗಿ ಹೇಳಿದ್ದಾರೆ. ಗೌರವ ಡಾಕ್ಟರೇಟ್ ಪದವಿ ಪಡೆಯುವ ಬದಲು ಕ್ರೀಡಾರಂಗದಲ್ಲಿ ಶೈಕ್ಷಣಿಕವಾಗಿ ಸಂಶೋಧನೆ ಮಾಡುವ ಮೂಲಕ ಗೌರವ ಡಾಕ್ಟರೇಟ್ ಗಳಿಸಲು ಪ್ರಯತ್ನಿಸುವುದಾಗಿ ತಿಳಿಸಿರುತ್ತಾರೆ.

ಸುದೀರ್ಘ ಕಾಲ ಕ್ರಿಕೆಟ್‍ನ ಘನತೆ ಹೆಚ್ಚಿಸಿದ, ಭಾರತ ತಂಡಕ್ಕೆ ಆಪತ್ಭಾಂಧವನಾಗಿ ಕೆಚ್ಚೆದೆಯ ಹೋರಾಟ ಸಂಘಟಿಸಿ, ಹಲವಾರು ಸೋಲುಗಳನ್ನು ತಪ್ಪಿಸಿ, ಬಹಳಷ್ಟು ಗೆಲುವನ್ನು ಸಮರ್ಪಿಸಿದ ಅಪ್ರತಿಮ ನಿಷ್ಠಾವಂತ ಕ್ರಿಕೆಟಿಗ ರಾಹುಲ್ ದ್ರಾವಿಡ್‍.

ದ್ರಾವಿಡ್ ರವರ ಕ್ರಿಕೆಟ್ ಸಾಧನೆಯನ್ನು ಇಲ್ಲಿ ಸ್ಮರಿಸಬಹುದು:

1996ರ ಜೂನ್ ನಲ್ಲಿ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ದ್ರಾವಿಡ್ 2012ರಲ್ಲಿ ಅಡಿಲೆಡ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಅದೇ ವರ್ಷ ಮಾರ್ಚಿ 9 ರಂದು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು.

1996 ಏಪ್ರಿಲ್‍ನಲ್ಲಿ ಶ್ರೀಲಂಕಾ ವಿರುದ್ಧ ಸಿಂಗಾಪುರದಲ್ಲಿ ನಡೆದ ಪಂದ್ಯದಲ್ಲಿ ಏಕದಿನ ಪಂದ್ಯಕ್ಕೆ ಎಂಟ್ರಿಕೊಟ್ಟ ದ್ರಾವಿಡ್ ಇಂಗ್ಲೆಂಡ್ ವಿರುದ್ಧದ ಕಾರ್ಡಿಫ್ ನಲ್ಲಿ ಕೊನೆಯ ಪಂದ್ಯ ಆಡಿದ್ದರು.

ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ “ದ ವಾಲ್” (ಗೋಡೆ) ಎಂದು ಹೆಸರು ನೀಡಲಾಗಿದೆ.

344 ಏಕದಿನ ಪಂದ್ಯವನ್ನು ಆಡಿರುವ ದ್ರಾವಿಡ್ 39.36 ಸರಾಸರಿಯೊಂದಿಗೆ 10889 ರನ್ ಹೊಡೆದಿದ್ದಾರೆ. 164 ಟೆಸ್ಟ್ ನಲ್ಲಿ 52.31 ಸರಾಸರಿಯೊಂದಿಗೆ 13,288 ರನ್ ಬಾರಿಸಿದ್ದಾರೆ. ಪ್ರಸ್ತುತ ದ್ರಾವಿಡ್ ಕಿರಿಯರ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.