ಟೊಮೆಟೊ ರೈಸ್ ಬಾತ್ ಮಾಡುವ ವಿಧಾನ

0
8854

ಬೇಕಾಗುವ ಸಾಮಗ್ರಿಗಳು

  • ಒಂದು ಲೋಟ ಅಕ್ಕಿ
  • ನಾಲ್ಕು ಟೊಮೆಟೊ
  • ಸ್ವಲ್ಪ ಹುಣಸೆಹಣ್ಣು
  • ಕೊತ್ತಂಬರಿ ಸೊಪ್ಪು
  • ಕರಿಬೇವಿನ ಸೊಪ್ಪು
  • ಮೂರು ಹಸಿಮೆಣಸು
  • ಒಗ್ಗರಣೆಗೆ ಸಾಸಿವೆ
  • ಎರಡು ಈರುಳ್ಳಿ
  • ಬೆಳ್ಳುಳ್ಳಿ (ಬೇಕಾಗಿದ್ದರೆ)
  • ಚಕ್ಕೆ
  • 2 ಮರಾಠ್ ಮೊಗ್ಗು
  • 2 ಲವಂಗ
  • ಕೊತ್ತಂಬರಿ ಕಾಳು 20 ಗ್ರಾಂ ನಷ್ಟು
  • ಐದು ಗ್ರಾಂನಷ್ಟು ಜೀರಿಗೆ
  • ಎಂಟು ಒಣಮೆಣಸು
  • ಕಾಲು ತೆಂಗಿನಕಾಯಿ (ಬೇಕಾದವರು ಬಳಸಬಹುದು)

ಮಾಡುವ ವಿಧಾನ 

ಮೊದಲು ಅನ್ನವನ್ನು ಮಾಡಿಟ್ಟುಕೊಳ್ಳಿ. ಆದಷ್ಟು ಉದುರು ಉದುರಾಗಿರಲಿ.

ಲವಂಗ, ಮರಾಠ್ ಮೊಗ್ಗು, ಚಕ್ಕೆ, ಕೊತ್ತಂಬರಿ ಕಾಳು, ಜೀರಿಗೆಯನ್ನು ಹುರಿದಿಟ್ಟುಕೊಳ್ಳಿ. ಚೆನ್ನಾಗಿ ಬಿಸಿಯಾಗುವಂತೆ, ಅದರ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಒಣಮೆಣಸು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿಯಿರಿ. ಎಲ್ಲವನ್ನೂ ಸ್ವಲ್ಪ ತಣ್ಣಗಾಗಲು ಬಿಡಿ.

ನಾಲ್ಕು ಟೊಮೆಟೊನಲ್ಲಿ ಒಂದೆರಡನ್ನು ಸ್ವಲ್ಪ ಸಣ್ಣ ಹೋಳುಗಳನ್ನಾಗಿ, ಇನ್ನೆರಡನ್ನು ಉದ್ದುದ್ದ ಸೀಳನ್ನಾಗಿ ಮಾಡಿಟ್ಟುಕೊಳ್ಳಿ. ಉದ್ದುದ್ದ ಸೀಳಿದ್ದದ್ದನ್ನು, ಆ ಒಣಮೆಣಸು ಹುರಿದು ಉಳಿದಿದ್ದ ಎಣ್ಣೆಯಲ್ಲಿ ಹಾಫ್ ಫ್ರೈ ಮಾಡಿ. ನಂತರ ಅದನ್ನು ತೆಂಗಿನಕಾಯಿ ಮತ್ತು ಮಸಾಲೆಯೊಂದಿಗೆ ಸೇರಿಸಿ ಅರೆಯಿರಿ. (ಬೇಕಾದವರು ಬೆಳ್ಳುಳ್ಳಿ ಬಳಸಬಹುದು)

ಈರುಳ್ಳಿಯನ್ನು ತೆಳುವಾಗಿ, ಉದ್ದುದ್ದ ಸೀಳಿಕೊಳ್ಳಿ. ಅನ್ನದ ಪಾತ್ರೆಯನ್ನು ತೆಗೆದು, ಅಗಲವಾದ ತಟ್ಟೆಗೆ ಅನ್ನವನ್ನು ಹರಡಿಸಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆಯನ್ನು ಹಾಕಿ ಕಾಯಿಸಿರಿ. ಆಮೇಲೆ ಹತ್ತು ಕಾಳು ಜೀರಿಗೆ ಹಾಕಿ, ನಂತರ ಕರಿಬೇವು ಹಾಕಿ, ಸಣ್ಣಗೆ ಮಾಡಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನೀರು ಬಳಸಬೇಡಿ. ಈರುಳ್ಳಿ ಸ್ವಲ್ಪ ಕೆಂಪಗಾಗುತ್ತಿದ್ದಂತೆ ಟೊಮೆಟೋ ಹಾಕಿ. ಚೆನ್ನಾಗಿ ಹುರಿಯಿರಿ. ನೆನಸಿಟ್ಟ ಹುಣಸೆಹಣ್ಣನು ಹಿಂಡಿ ರಸ ತೆಗೆದು, ಅದನ್ನು ಬಾಣಲೆಗೆ ಹಾಕಿ. ಒಂದು ಚಮಚದಷ್ಟು ಸಕ್ಕರೆ, ಅಗತ್ಯದಷ್ಟು ಉಪ್ಪು ಹಾಕಿ. ಟೊಮೆಟೊ ಕರಗಿದಂತೆ ಕಂಡುಬಂದು, ರಸ ಬಿಡತೊಡಗುತ್ತದೆ. ಆಗ ಅರೆದ ಮಸಾಲೆ ಹಾಕಿ ಮಿಕ್ಸ್ ಮಾಡಿ. ನಂತರ ಅನ್ನವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಮತ್ತೆ ಬಾಣಲಿಯಿಟ್ಟು, ಹಸಿಮೆಣಸನ್ನು ಸ್ವಲ್ಪ ಸಣ್ಣ ಸಣ್ಣ ಹೋಳು ಮಾಡಿ, ಸೀಳಿಕೊಂಡು, ಅದನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಬಳಿಕ ಅದನ್ನು ಈ ಅನ್ನದೊಂದಿಗೆ ಮಿಕ್ಸ್ ಮಾಡಿ. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಇದರ ಮೇಲೆ ಹರಡಿ ಅಲಂಕಾರ ಮಾಡಿ. ನಂತರ ಟೊಮೆಟೊ ರೈಸ್ ಬಾತ್ ಸವಿಯಲು ಸಿದ್ದ.