ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಮತ್ತು ಪೌಷ್ಟಿಕಾಂಶಭರಿತ ಆಹಾರವಾದ ರಾಜಗಿರಿ ಅರಳಿನ ಲಾಡು ಮಾಡುವ ವಿಧಾನ..!!

0
1144

ರಾಜಗಿರಿ (ದಂಟಿನ ಬೀಜ) ಇದರ ಬೀಜಗಳು ಪೌಷ್ಟಿಕಾಂಶಭರಿತ ಆಹಾರ. ವೃದ್ಧರು ಹಾಗೂ ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ತಿನಿಸುಗಳಲ್ಲಿ ಇದರ ಬಳಕೆ ಹೆಚ್ಚು. ಸೈನಿಕರು ಯುದ್ಧಕ್ಕೆ ಹೋಗುವಾಗ, ಜೋಳದ ಜತೆಗೆ ಈ ಧಾನ್ಯ ಬೆರೆಸಿ ತಯಾರಿಸಿದ ಆಹಾರವನ್ನು ಕಳುಹಿಸಿಕೊಡುತ್ತಿದ್ದರಂತೆ. ಶ್ರೀಲಂಕಾದಲ್ಲಿ ಈಗಲೂ ಇದರ ಬಳಕೆಯಿದೆ. ಬೀಜಗಳನ್ನು ಹುರಿದು ಉಂಡೆ ಕಟ್ಟುವುದಲ್ಲದೇ, ಪುಡಿ ಮಾಡಿ ಮಾಲ್ಟ್‌ ಹಾಗೂ ಚಪಾತಿ ಮಾಡಲು ಉಪಯೋಗಿಸುತ್ತಾರೆ.

ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ರಾಜಗಿರಿ ಅರಳಿನ ಲಾಡು ಮಾಡುವ ವಿಧಾನವನ್ನು ತಿಳಿಯೋಣ:

ಬೇಕಾಗುವ ಸಾಮಗ್ರಿ :

  • ರಾಜಗಿರಿ (ದಂಟಿನ ಬೀಜ)-2 ಕಪ್,
  • ಹುರಿದ ಕಡಲೆಕಾಯಿ ಬೀಜ-1 ಕಪ್,
  • ಹುರಿದ ಒಣಕೊಬ್ಬರಿ ತುರಿ-3/4 ಕಪ್,
  • ಬೆಲ್ಲದ ತುರಿ-1 ಕಪ್,
  • ತುಪ್ಪ-1 ಕಪ್,
  • ಏಲಕ್ಕಿ ಪುಡಿ-1/2 ಟೀ ಚಮಚ,
  • ಜಾಕಾಯಿ ಪುಡಿ-1/4 ಟೀ.

ಮಾಡುವ ವಿಧಾನ:

ರಾಜಗಿರಿ ಅರಳನ್ನು ಸ್ವಲ್ಪಸ್ವಲ್ಪವಾಗಿ ಹುರಿದು, ಜರಡಿ ಹಿಡಿದಿರಿಸಿ. ಕಡಲೆಕಾಯಿ ಬೀಜವನ್ನು ಪುಡಿ ಮಾಡಿರಿಸಿ.

ಬಾಣಲೆಯಲ್ಲಿ, ತುಪ್ಪ ಕಾಯಲಿರಿಸಿ, ಬೆಲ್ಲ ಕರಗಿಸಿ. ಬೆಲ್ಲ ಕರಗಿದ ತಕ್ಷಣ, ರಾಜಗಿರಿ ಅರಳು, ಕಡಲೆಕಾಯಿಬೀಜದ ಪುಡಿ, ಒಣಕೊಬ್ಬರಿ ತುರಿ, ಏಲಕ್ಕಿ ಪುಡಿ, ಜಾಕಾಯಿ ಪುಡಿ ಸೇರಿಸಿ, ಚನ್ನಾಗಿ ಕಲಕಿ ಒಲೆಯಿಂದ ಕೆಳಗಿರಿಸಿ.

ಕೈಗೆ ನೀರು ಸವರಿಕೊಂಡು, ಬಿಸಿಯಿರುವಾಗಲೇ ಬೇಕಾದ ಗಾತ್ರದಲ್ಲಿ ಕಟ್ಟಿ.

ರುಚಿಯಾದ ರಾಜಗಿರಿ ಅರಳಿನ ಉಂಡೆ ಸವಿಯಲು ಸಿದ್ಧ.