ಡೋಂಗಿ ಬಾಬಾ ರಾಮ್ ರಹೀಂ ಸಿಂಗ್ ಜೈಲು ಸೇರಲು ಕರ್ನಾಟಕದ ಅಧಿಕಾರಿ ಪಾತ್ರ ದೊಡ್ಡದು..!

0
540

ಹೌದು,ಡೇರಾ ಸಚ್ಚಾ ಸೌದಾ ಧರ್ಮಗುರು ರಾಮ್ ರಹೀಂ ಸಿಂಗ್ ಅತ್ಯಾಚಾರ ಕೇಸನ್ನು ಭೇದಿಸಿದ್ದು ಬೇರಾರೂ ಅಲ್ಲ. ಕನ್ನಡಿಗ ಸಿಬಿಐ ಅಧಿಕಾರಿ ಈಗ ನಿವೃತ್ತ ಮುಳಿಂಜ ನಾರಾಯಣ.

ಕೇರಳದ ಕನ್ನಡ ಭಾಷಿಕ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರದವರಾದ ನಾರಾಯಣ ಸಿಬಿಐ ಜಂಟಿ ನಿರ್ದೇಶಕರಾಗಿದ್ದರು. ಅವರು 2007 ಲ್ಲಿ ಹರ್ಯಾಣಾ ಮತ್ತು ಪಂಜಾಬ್ ಹೈಕೋರ್ಟ್ ಆದೇಶದ ಅನುಸಾರ ಬಾಬಾ ಕೇಸನ್ನು ಕೈಗೆತ್ತಿಕೊಂಡರು.

2002ರಲ್ಲೇ ಕೇಸು ದಾಖಲಾದರೂ ತನಿಖೆ ನಿಂತು ಹೋಗಿತ್ತು. ನನಗೆ ಕೇಸು ಹಸ್ತಾಂತರವಾದ ನಂತರ, ಪ್ರಕರಣ ಹಸ್ತಾಂತರಿಸಿದ ಸಿಬಿಐ ಅಧಿಕಾರಿಯೇ ನನಗೆ ‘ಕೇಸ್ ಕ್ಲೋಸ್ ಮಾಡು’ ಎಂದರು. ಬಳಿಕ ಅನೇಕ ರಾಜಕಾರಣಿಗಳು, ಸಂಸದ-ಶಾಸಕ, ಸಚಿವರು, ಡೇರಾ ಬೆಂಬಲಿಗರು ‘ತನಿಖೆ ನಿಲ್ಲಿಸಿ’ ಎಂದು ಬೆದರಿಸಿದರು. ಆದರೆ ಹೈಕೋರ್ಟು ನನ್ನ ಪರ ಇದ್ದ ಕಾರಣ ನಾನು ತನಿಖೆ ನಿಲ್ಲಿಸಲಿಲ್ಲ’ ಎಂದರು.

2009ರಲ್ಲಿ ಅತೀವ ಶ್ರಮದೊಂದಿಗೆ ಸಂತ್ರಸ್ತರನ್ನು ಹುಡುಕಿ ಹೇಳಿಕೆ ದಾಖಲಿಸಿಕೊಂಡೆವು. ನನ್ನ ಮುಂದೆ ವಿಚಾರಣೆಗೆ ಹಾಜರಾಗಿದ್ದ ರಾಮ್ ರಹೀಂ ಹೆದರಿ ಹೋಗಿದ್ದ. ಹಾರಿಕೆ ಉತ್ತರ ನೀಡುತ್ತಿದ್ದ. ಏನೂ ಆಗಿಲ್ಲವೆಂಬಂತೆ ಸ್ವಾಮೀಜಿ ಥರಾ ಪೋಸು ಕೊಡುತ್ತಿದ್ದ’ ಎಂದು ಮುಳಿಂಜ ಹೇಳಿದರು. ‘ಅನೇಕ ಅಡೆತಡೆ ನಡುವೆಯೂ ಕೇಸು ಈಗ ತಾರ್ಕಿಕ ಅಂತ್ಯ ಕಂಡಿದ್ದು ಖುಷಿ ನೀಡಿದೆ’ ಎಂದು ಹೇಳಿಕೊಂಡಿದ್ದಾರೆ.