ಹಸಿ ಬಟಾಣಿ ಸಮೃದ್ಧ ಪೋಷಕಾಂಶಗಳ ಆಗರ

0
657

ಪುರಾತನ ಕಾಲದಿಂದಲೂ ವಿಶ್ವದಲ್ಲಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲೊಂದಾದ ಹಸಿ ಬಟಾಣಿ ಸಮೃದ್ಧ ಪೋಷಕಾಂಶಗಳನ್ನೊಳಗೊಂಡಿದ್ದು. ವಾಯುವ್ಯ ಭಾರತದ ಹಿಮಾಲಯ ತಪ್ಪಲು ಇದರ ಮೂಲವೆಂದು ನಂಬಲಾಗಿದೆ. ಅಷ್ಟೇ ಅಲ್ಲ ಬಹುಪಯೋಗಿ ‘ಹಸಿ ಬಟಾಣಿ’, ಆರೋಗ್ಯದ ಕೀಲಿಕೈ ಎಂದು ಹೇಳಿದರೆ ತಪ್ಪಾಗಲಾರದು.

ಹಸಿ ಬಟಾಣಿಯಿಂದ ದೊರೆಯುವ ಆರೋಗ್ಯಕರ ಲಾಭಗಳು.

 • ಹಸಿ ಬಟಾಣಿಯಲ್ಲಿ ಫ್ಲೇವನಾಯ್ಡುಗಳು, ಆಲ್ಫಾ ಕೆರೋಟಿನ್, ಬೀಟಾ ಕೆರೋಟಿನ್‪ಗಳು ಹೇರಳವಾಗಿವೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 • ಹಸಿ ಬಟಾಣಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ. ಇವು ಜೀರ್ಣಕ್ರಿಯೆಯನ್ನು ಸರಳಗೊಳಿಸಿ ತ್ಯಾಜ್ಯಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತವೆ. ಇದರಿಂದ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ.
 • ಅತ್ಯಂತ ಪೌಷ್ಟಿಕಾಂಶಭರಿತ ದ್ವಿದಳ ತರಕಾರಿಗಳಲ್ಲೊಂದಾಗಿರುವ ಹಸಿ ಬಟಾಣಿ ಆರೋಗ್ಯಕ್ಕೆ ಲಾಭಕಾರಿಯಾದ ಫೈಟೊ ನ್ಯೂಟ್ರಿಯಂಟ್‌ಗಳು, ಖನಿಜಗಳು, ವಿಟಾಮಿನ್ ಗಳು ಮತ್ತು ಆ್ಯಂಟಿ ಆಕ್ಸಿಡಂಟ್‌ಗಳನ್ನು ಹೇರಳವಾಗಿ ಹೊಂದಿದೆ.
 • ಸಂಧಿವಾತದ ಪರಿಣಾಮವಾಗಿ ಮೂಳೆಸಂದುಗಳಲ್ಲಿ ನೋವು ಅನುಭವಿಸುತ್ತಿರುವ ರೋಗಿಗಳಿಗೆ ಹಸಿ ಬಟಾಣಿ ಔಷಧಿಯಂತೆ ಕೆಲಸ ಮಾಡುತ್ತದೆ.
 • ಹಸಿ ಬಟಾಣಿಯಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಹಾಗೂ ವಿಶೇಷವಾಗಿ ರಕ್ತನಾಳಗಳನ್ನು ಬಲಗೊಳಿಸಿ ಇದರಿಂದ ಹೃದಯದ ಮೇಲೆ ಬೀಳುವ ಭಾರವನ್ನು ಕಡಿಮೆಗೊಳಿಸಿ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ.
 • ಹಸಿ ಬಟಾಣಿ ಬೀನ್ಸ್‌ಗೆ ಹೋಲಿಸಿದರೆ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಪ್ರತಿ 100 ಗ್ರಾಂ ಹಸಿ ಬಟಾಣಿ ಕೇವಲ 81 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಕೊಲೆಸ್ಟರಾಲ್ ಇದರಲ್ಲಿಲ್ಲ. ಜೊತೆಗೆ ಇದು ಪ್ರೋಟಿನ್, ವಿಟಾಮಿನ್ ಗಳು ಹಾಗೂ ಕರಗಬಲ್ಲ ಮತ್ತು ಕರಗದ ನಾರಿನಂಶಗಳ ಉತ್ತಮ ಮೂಲವಾಗಿದೆ.
 • 100 ಗ್ರಾಂ ಹಸಿ ಬಟಾಣಿ ನಮ್ಮ ಶರೀರದ ದೈನಂದಿನ ಅಗತ್ಯದ ಶೇ.16ರಷ್ಟು ಫೊಲೇಟ್‌ಗಳನ್ನು ಒದಗಿಸುತ್ತದೆ. ಫೊಲೇಟ್ ಶರೀರದೊಳಗೆ ಡಿಎನ್‌ಎ ಸಂಶ್ಲೇಷಣೆಗೆ ಅಗತ್ಯವಾಗಿರುವ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳಲ್ಲೊಂದಾಗಿದೆ.
 • ಸಾಕಷ್ಟು ಫೊಲೇಟ್‌ಗಳಿರುವ ಆಹಾರವನ್ನು ಗರ್ಭಿಣಿಯರು ಸೇವಿಸುತ್ತಿದ್ದರೆ ನವಜಾತ ಶಿಶುಗಳಲ್ಲಿ ನ್ಯೂರಲ್ ಟ್ಯೂಬ್‌ನ ದೋಷಗಳನ್ನು ತಡೆಯುವಲ್ಲಿ ನೆರವಾಗುತ್ತದೆ. ಅದು ಹಸಿ ಬಟಾಣಿಗಳಲ್ಲಿ ಹೇರಳವಾಗಿ ದೊರೆಯುತ್ತದೆ.
 • ವಿಟಾಮಿನ್ ಸಿ ಅನ್ನು ಒಳಗೊಂಡಿರುವ ತರಕಾರಿಗಳ ಸೇವನೆಯು ಸೋಂಕುಕಾರಕಗಳ ವಿರುದ್ಧ ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಶರೀರದಲ್ಲಿನ ಹಾನಿಕಾರಕ, ಉರಿಯೂತಕ್ಕೆ ಕಾರಣವಾಗುವ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸಲುನೆರವಾಗುತ್ತದೆ.
 • ಹಸಿ ಬಟಾಣಿಯಲ್ಲಿ ವಿಟಾಮಿನ್ ಕೆ ಕೂಡ ಉತ್ತಮ ಪ್ರಮಾಣದಲ್ಲಿದೆ. ಪ್ರತಿ ನೂರು ಗ್ರಾಂ ತಾಜಾ ಬೀಜಗಳು ನಮ್ಮ ದೈನಂದಿನ ಅಗತ್ಯದ ಶೇ.21ರಷ್ಟು ವಿಟಾಮಿನ್ ಕೆ-1 ಅನ್ನು ಒದಗಿಸುತ್ತವೆ. ವಿಟಾಮಿನ್ ಕೆ ಅಸ್ಥಿಮಜ್ಜೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
 • ಹಸಿ ಬಟಾಣಿಯಲ್ಲಿ ಕಾಣುವ ವಿಟಾಮಿನ್ ಎ ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತದೆ. ಜೊತೆಗೆ ಈ ಫ್ಲಾವನಾಯ್ಡಾಗಳು ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳ ವಿರುದ್ಧವೂ ರಕ್ಷಣೆ ನೀಡುತ್ತವೆ.

Related image85480 02512