ಮತ್ತೆ ಜಲ ಪ್ರಳಯದ ಭೀತಿಯಲ್ಲಿರುವ ಕೊಡಗೂ, ಮಡಿಕೇರಿಯ ಜನ; ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ..

0
193

ಕೊಡಗೂ, ಮಡಿಕೇರಿಯಲ್ಲಿ ಮತ್ತೆ ಮಳೆ ಅರ್ಭಟ ಶುರುವಾಗಿದ್ದು, ಶುಕ್ರವಾರದಿಂದ ಮಳೆ ವಾತಾವರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯೂ ಎಚ್ಚರಿಸಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುತ್ತಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ.

ಕೊಡಗಿನಲ್ಲಿ ಮತ್ತೆ ಪ್ರಳಯದ ಭೀತಿ?

ಹೌದು ಕಳೆದ ವರ್ಷ ಕೊಡಗಿನಲ್ಲಿ ಆಗಿರುವ ಜಲ ಪ್ರಳಯ ಇಡಿ ದೇಶವನ್ನೇ ಆತಂಕದಲ್ಲಿ ಮುಳುಗಿಸಿತ್ತು, ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿತ್ತು, ಹೊಲ ಗದ್ದೆ, ತೋಟ, ಮನೆ ಸೇರಿದಂತೆ ಸಾಕು ಪ್ರಾಣಿಗಳನ್ನು ಕೂಡ ಬಲಿ ತೆಗೆದುಕೊಂಡಿತ್ತು. ಈಗ ಮತ್ತೆ ಅದೇ ರೀತಿಯ ವಾತಾವರಣ ಕಂಡು ಬರುತ್ತಿದ್ದು, ಮಡಿಕೇರಿಯ ಸುತ್ತಮುತಲಿನ ಜನ ಆತಂಕದಲ್ಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಜುಲೈ 20 ರಿಂದ 23 ರವರೆಗೆ 204 ಮಿ.ಮೀ ಗಿಂತ ಹೆಚ್ಚು (ರೆಡ್ ಅಲರ್ಟ್) ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.

ಎಲ್ಲಾ ಇಲಾಖೆಯ ಅಧಿಕಾರಿಗಳು ಎನ್‍ಡಿಆರ್‍ಎಫ್ ತಂಡದ ಸಹಕಾರದೊಂದಿಗೆ ಮಳೆಯ ಸಂದರ್ಭ ಸಾರ್ವಜನಿಕರ ನೆರವಿಗೆ ಧಾವಿಸಬೇಕು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಈಗಾಗಲೇ ಸೂಚನೆ ನೀಡಿದ್ದಾರೆ. ಈ ಹಿಂದೆ ಜು.18 ರಿಂದಲೇ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತಾದರೂ ಸಾಧಾರಣ ಮಳೆಯಷ್ಟೇ ಸುರಿದಿದೆ. ಗುರುವಾರ ರಾತ್ರಿ ಮಡಿಕೇರಿಗೆ ಒಂದೂವರೆ ಇಂಚಿನಷ್ಟು ಮಳೆಯಾಗಿದೆ. ಕೊಡಗು-ಕೇರಳ ಗಡಿಭಾಗದ ಕರಿಕೆ ಗ್ರಾಮದಲ್ಲಿ ಗಾಳಿ ಮಳೆಯಾಗಿದ್ದು, ಕೆಲವು ಮರಗಳು ಧರೆಗುರುಳಿ ಹಾನಿಯಾದ ಘಟನೆ ನಡೆದಿದೆ. ಆದರೆ ಜಿಲ್ಲೆಯ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗಿದ್ದು, ಶುಕ್ರವಾರ ಬೆಳಗ್ಗಿನಿಂದಲೇ ತುಂತುರು ಮಳೆಯಾಗುತ್ತಿದ್ದು, ಚಳಿಯ ವಾತಾವರಣವಿದೆ.

ಅದರಂತೆ ಕರಾವಳಿ ಭಾಗದಲ್ಲಿ ಈಗಾಗಲೇ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೆಲವು ಗಂಟೆ ತಡವಾಗಿಯಾದರೂ ಕೊಡಗಿಗೆ ಭಾರೀ ಮಳೆಯ ಪ್ರವೇಶವಾಗಲಿದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದಲೂ ಮಳೆಯಾಗುತ್ತಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 16.22 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 38.04 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 734.33 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2274.87 ಮಿ.ಮೀ ಮಳೆಯಾಗಿ ಜನರನ್ನು ಬೀದಿಗೆ ತಂದಿತ್ತು.