ರೆಡ್ಡಿ ಮಗಳ ಮದುವೆಗೆ ಕಪ್ಪು ಹಣ ಬಿಳಿ ಮಾಡಿದ್ರು

0
530

ಅಧಿಕಾರಿಯ ಭ್ರಷ್ಟಾಚಾರದ ಬಗ್ಗೆ 11 ಪುಟಗಳ ಡೆತ್‍ನೋಟ್ ಬರೆದು ಚಾಲಕ ಆತ್ಮಹತ್ಯೆ. ರೆಡ್ಡಿ, ರಾಮುಲು, ಭೀಮಾನಾಯಕ್ ಹೆಸರು ಬಿಚ್ಚಿಟ್ಟ ಡ್ರೈವರ್ ಡೆತ್‍ನೋಟ್ ಆಧರಿಸಿ ಶುರು ಐಟಿ ತನಿಖೆ.

ramesh

ಗಾಲಿ ಜನಾರ್ದನ ರೆಡ್ಡಿ ಮಗಳ ಮದುವೆಗಾಗಿ ಕಪ್ಪು ಹಣವನ್ನ ಬಿಳಿ ಮಾಡಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯಲ್ಲಿ ವಾಹನ ಚಾಲಕರಾಗಿದ್ದ ವ್ಯಕ್ತಿಯೊಬ್ಬರು ತನ್ನ ಮೇಲಾಧಿಕಾರಿಯ ಭ್ರಷ್ಟಾಚಾರವನ್ನ ಎಳೆಎಳೆಯಾಗಿ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೆ ರಾಜಕಾರಣಿಗಳಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮೇಲೂ ಡೆತ್‍ನೋಟ್‍ನಲ್ಲಿ ಆರೋಪ ಮಾಡಿದ್ದಾರೆ.

ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಕೆ.ಸಿ. ರಮೇಶ್ ಬೆಂಗಳೂರಿನ ವಿಶೇಷ ಭೂಸ್ವಾಧಿನ ಅಧಿಕಾರಿ ಕಚೇರಿಯಲ್ಲಿ ವಾಹನ ಚಾಲಕರಾಗಿದ್ರು. ಮದ್ದೂರಿನ ಸಮೃದ್ಧ್ ಲಾಡ್ಜ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋ ರಮೇಶ್, ಆತ್ಮಹತ್ಯೆಗೂ ಮುನ್ನ ಸುಮಾರು 11 ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತಮ್ಮ ಮೇಲಾಧಿಕಾರಿಯ ಮೇಲೆ ವ್ಯಾಪಕ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ ಭೀಮಾನಾಯಕ್, ತಮ್ಮ ಅಕ್ರಮದಿಂದ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ತಮ್ಮ ಮೇಲಿನ ಇಲಾಖಾ ತನಿಖೆಯಿಂದ ತಪ್ಪಿಸಿಕೊಳ್ಳಲು ಈ ಹಿಂದಿನ ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ನಾಗರಾಜು ಅವರಿಗೆ 25 ಲಕ್ಷ ರೂ. ಲಂಚ ನೀಡಿದ್ದಾರೆ. ನ್ಯಾಯಾಧೀಶರನ್ನ ಭೇಟಿಯಾಗಿ ತಮ್ಮ ಮೇಲಿನ ಪ್ರಕರಣವನ್ನ ಮುಚ್ಚಿಹಾಕಲು ಅವರಿಗೂ ಲಂಚ ಕೊಟ್ಟಿದ್ದರು ಅಂತಾ ಡೆತ್‍ನೋಟ್‍ನಲ್ಲಿ ರಮೇಶ್ ಆರೋಪಿಸಿದ್ದಾರೆ.

bhima-naik

ರೆಡ್ಡಿ ಮಗಳ ಮದುವೆಗೆ ಕಪ್ಪು ಹಣ ವೈಟ್ ಮಾಡಿಕೊಟ್ಟಿದ್ದು ಕೆಎಎಸ್ ಅಧಿಕಾರಿ?: 15-11-16 ರಂದು ತಾಜ್ ಹೋಟೆಲ್‍ಗೆ ಭೇಟಿಕೊಟ್ಟು ಜನಾರ್ದನ ರೆಡ್ಡಿ ಮಗಳ ಮದುವೆಗೆ 25 ಕೋಟಿ ರೂ. ವೈಟ್ ಮನಿ ಕೊಟ್ಟಿದ್ದೇನೆ ಎಂದು ಭೀಮಾನಾಯಕ್ ನನ್ನ ಜೊತೆ ಹೇಳಿದ್ದಾರೆ. ಶ್ರೀರಾಮುಲು ಅವರ ವುಡ್‍ಲ್ಯಾಂಡ್ ಹೋಟೆಲ್‍ಗೆ ಕೆಎ-05 ಎಂಟಿ- 4449 ಕಾರಿನಲ್ಲಿ ನಿರಂತರವಾಗಿ ಹೋಗುತ್ತಿದ್ರು. ಕೆಲವೊಮ್ಮೆ ಕೆಎ-03 ಎಂಯು 8964 ಕಾರನ್ನೂ ಬಳಸಿದ್ದರು. ರೆಡ್ಡಿ ಬಳಿಯಿದ್ದ ಹಳೆಯ 1000 ಹಾಗೂ 500 ರೂಪಾಯಿ ನೋಟುಗಳನ್ನು 20 ಪರ್ಸೆಂಟ್ ಕಮಿಷನ್ ಆಸೆಗೆ 100 ಕೋಟಿ ರೂ. ಬದಲಾಯಿಸಿ ಹೊಸ ಕರೆನ್ಸಿ ಕೊಡಿಸಿದ್ದಾರೆ ಅಂತ ರಮೇಶ್ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.

ರೆಡ್ಡಿ, ರಾಮುಲುಗೆ ಲಂಚ ಕೊಟ್ಟಿದ್ದ ಭೀಮಾನಾಯಕ?: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಅಧಿಕಾರಿ ಭೀಮಾನಾಯಕ್, ಸಂಸದ ಶ್ರೀರಾಮುಲು ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನ ಭೇಟಿ ಮಾಡಿ ಹಣ ನೀಡಿದ್ದಾರೆ ಎಂದು ರಮೇಶ್ ಡೆತ್‍ನೋಟ್‍ನಲ್ಲಿ ಆರೋಪಿಸಿದ್ದಾರೆ. 28-10-16 ರಂದು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನ ಪಾರಿಜಾತಾ ಗೆಸ್ಟ್ ಹೌಸ್‍ನಲ್ಲಿ ಭೇಟಿ ಮಾಡಿ 2018ರ ಚುನಾವಣೆಗೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಎಲೆಕ್ಷನ್‍ಗೆ ನಿಲ್ಲಲು ಮಾತುಕತೆ ನಡೆಸಲಾಗಿತ್ತು. ಟಿಕೆಟ್‍ಗಾಗಿ 25 ಕೋಟಿ ರೂಪಾಯಿ ಕೊಡಲು ಒಪ್ಪಿಕೊಂಡಿದ್ದರು ಎಂದು ರಮೇಶ್ ಉಲ್ಲೇಖಿಸಿದ್ದಾರೆ.

deathnote

ನ್ಯಾಯಾಧೀಶರಿಗೆ ಲಂಚ?: ಭೀಮಾನಾಯಕ್ ಮೇಲೆ ಕರ್ನಾಟಕ ಗೃಹ ಮಂಡಳಿಯಲ್ಲಿ ಲೋಕಾಯುಕ್ತ ರೇಡ್ ಆಗಿತ್ತು. ಈ ಕೇಸ್‍ನಿಂದ ಆಚೆ ಬರಲು ಸುಪ್ರಿಂಕೋರ್ಟ್‍ನ ಮುಖ್ಯ ನ್ಯಾಯಾಧೀಶರಾಗಿದ್ದ ದತ್ತು ಸರ್ ಮ್ಯಾನೇಜರ್ ಎನ್ನಲಾದ ಶ್ರೀ ಕೇಶವ ಎಂಬವರ ಮೂಲಕ ಡೀಲ್ ಮಾಡಿದ್ರು. ನ್ಯಾ. ಮಂಜುನಾಥ್ ನಾಯಕ್ ಸರ್‍ಗೆ ಹಣ ಕೊಟ್ಟು ಕೇಸ್ ಮುಚ್ಚಿಹಾಕಲು ಯತ್ನಿಸಿದ್ರು. ಈ ವೇಳೆ ಇನ್ನೊಬ್ಬ ನ್ಯಾಯಾಧೀಶರಾದ ಬನ್ನಿ ಕಟ್ಟಿ ಹನುಮಂತಪ್ಪ ( ಮೆಯೋಹಾಲ್ ಕೋರ್ಟ್)ರ ಮುಖಾಂತರ ದಿನಾಂಕ 06-06-16ರಂದು ಕೋರ್ಟ್ ಹಾಲ್ ನಂ, 21 ರಲ್ಲಿ ಭೀಮಾನಾಯಕ್‍ರವರು 25 ಲಕ್ಷ ರೂಪಾಯಿಗಳನ್ನ ಕೊಟ್ಟಿದ್ದಾರೆ. ನನ್ನ 3 ತಿಂಗಳ ಸಂಬಳವನ್ನ 5 ದಿನಗಳ ಹಿಂದೆ ತಡೆ ಹಿಡಿದಿದ್ದಾರೆ ಅಂತ ರಮೇಶ್ ಡೆತ್‍ನೋಟ್‍ನಲ್ಲಿ ಹೇಳಿದ್ದಾರೆ.

deathnote-1

ಐಟಿ ತನಿಖೆ: ಭ್ರಷ್ಟಾಚಾರದ ಬಗ್ಗೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಕೆಎಎಸ್ ಅಧಿಕಾರಿ ಭೀಮಾನಾಯಕ್ ಮೇಲೆ ಆದಾಯ ತೆರಿಗೆ ಇಲಾಖೆ ಕೆಂಗಣ್ಣು ಬೀರಿದೆ. ಡೆತ್ ನೋಟ್ ಆಧರಿಸಿ ಐಟಿ ವಿಚಾರಣೆ ನಡೆಸಲಿದ್ದು, ಸ್ಥಳೀಯ ಪೊಲೀಸರಿಂದ ಐಟಿ ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ.