ಈ ಕೆಂಪು ಚಂದನಕ್ಕೆ ಚಿನ್ನದಷ್ಟೇ ಬೆಲೆಯಿದೆ !!!

0
1523

ಅಪರೂಪದ ಸಸ್ಯವೆನಿಸಿರುವ ರಕ್ತಚಂದನ ಮರ ಕಂಡವರು ವಿರಳ. ಚೆನ್ನಾಗಿ ಬಲಿತ ಮರದ ಕೊರಡನ್ನು ತೇದರೆ ರಕ್ತದಂತೆ ಕೆಂಪಾದ ಗಂಧ ಬರುವುದು ಇದರ ವಿಶೇಷತೆ.ವೈಜ್ಞಾನಿಕವಾಗಿ ಟೆರೋಕಾರ್ಪಸ್ ಸನ್‍ಥಾಲಿನಸ್ ವರ್ಗಕ್ಕೆ ಸೇರಿದ ಈ ಚಂದನ, ದಕ್ಷಿಣ ಭಾರತದ ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ಸಿಗುತ್ತದೆ.

b1

ಭಾರತೀಯ ಮೂಲದ ಈ ಮರ ತನ್ನ ಉಡಿಯಲ್ಲಿ ಔಷಧಿಯುಕ್ತ ಅಂಶವನ್ನು ಇಟ್ಟುಕೊಂಡಿದೆ. ಈ ಮರದ ತೊಗಟೆಯನ್ನು ಸ್ವಲ್ಪ ಗೀರಿದರೆ ಕೆಂಪು ದ್ರವ ಬರುತ್ತದೆ. ಕ್ಷಣಾರ್ಧದಲ್ಲಿಯೇ ಆ ಭಾಗವೆಲ್ಲಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಇದಕ್ಕೆ ರಕ್ತಚಂದನ ಅಥವಾ ಕೆಂಪುಚಂದನ ಎಂಬ ಹೆಸರು ಬಂದಿದೆ.

ಔಷಧ ಗುಣ

ಕೆಂಪುಚಂದನದಲ್ಲಿ ಔಷಧಿ ಅಂಶ ಇರುವುದರಿಂದ ಮುಖದ ಮೊಡವೆ ನಿವಾರವಣೆಗೆ ಹಾಗೂ ಕಾಂತಿವರ್ಧಕವಾಗಿಯೂ ಬಳಸಲಾಗುತ್ತದೆ. ಮರದ ಚಕ್ಕೆಯನ್ನು ನುಣ್ಣಗೆ ಅರೆದು ಪುಡಿಯನ್ನು ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಮುಖ ಕಾಂತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೆ ಗಿಡದ ಭಾಗಗಳನ್ನು ಔಷಧ ರೂಪದಲ್ಲಿ ಸೇವಿಸುವುದರಿಂದ ಒಳ್ಳೆಯದೆಂಬ ಬಲವಾದ ನಂಬಿಕೆಯೂ ಇದೆ.

ಬಾಹುಬಲಿಯ ಮಸ್ತಕಾಭಿಷೇಕದ ಸಂದರ್ಭದಲ್ಲಿ ರಕ್ತಚಂದನವನ್ನು ಕೊಡಗಳಲ್ಲಿ ಅಭಿಷೇಕ ಮಾಡಲಾಗುತ್ತದೆ. ಎಳೆಯ ಮಗುವಿನ ಮೈಗೆ ದಿನಾ ಚಂದನ ಲೇಪಿಸಿ ಬಳಿಕ ಸ್ನಾನ ಮಾಡಿಸುವ ಪದ್ಧತಿಯಿದೆ. ಇದರಿಂದ ಅನೇಕ ಚರ್ಮರೋಗಗಳು ಕಾಣೆಯಾಗಿ ಚರ್ಮ ಕಾಂತಿಯುಕ್ತವಾಗುತ್ತದೆ. ಆಯುರ್ವೇದದಲ್ಲಿ ಅದರ ಅನೇಕ ಔಷಧೋಪಯೋಗಗಳ ವಿವರಗಳಿವೆ.

ಲಾಭದಾಯಕ ಬೆಳೆ

ಸರಿಯಾಗಿ ಬೆಳೆದರೆ ಮರ ಬರೋಬ್ಬರಿ ಎಂಟು ಮೀಟರ್ ಎತ್ತರವಾಗುತ್ತದೆ. ಇಪ್ಪತ್ತು ವರ್ಷಗಳಲ್ಲಿ ಕಟಾವಿಗೆ ಬರುತ್ತದೆ. ಚಂದನಕ್ಕೆ ರೋಗ ಮತ್ತು ಕೀಟದ ಬಾಧೆ ವಿರಳ. ಬೇಸಿಗೆಯಲ್ಲಿ ಬುಡ ತಂಪಾಗುವಷ್ಟು ನೀರು, ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲದಂಥ ವ್ಯವಸ್ಥೆ ಮಾಡುವುದು ಮುಖ್ಯ. ಸಾವಯವ ಗೊಬ್ಬರವಿದ್ದರೆ ಒಳಿತು. ಇಲ್ಲವಾದರೆ ಮಣ್ಣಿನಲ್ಲಿ ಸಿಗುವ ಸತ್ವದಿಂದಲೇ ಬೆಳೆಯುತ್ತದೆ. ಮೊದಲ ಮೂರೇ ವರ್ಷದಲ್ಲಿ ಐದು ಮೀಟರ್ ಎತ್ತರವಾಗುವ ಮರ, ಅನಂತರ ಎತ್ತರವಾಗದೆ ದಪ್ಪವಾಗುತ್ತ ಬೆಳೆಯುತ್ತದೆ. ಶುಷ್ಕ ಹವೆಯಲ್ಲಿಯೂ ಇದರ ಕೃಷಿ ಸಾಧ್ಯ ಎನ್ನುತ್ತಾರೆ ಕೃಷಿಕರು.

ಶ್ರೀಗಂಧಕ್ಕಿಂತ ಮೂರು ಪಟ್ಟು ಬೆಲೆ ಅಧಿಕವಿದ್ದರೂ ಸರ್ಕಾರ ಶ್ರೀಗಂಧದ ಕೃಷಿಗೇ ಅಧಿಕ ಆದ್ಯತೆ ನೀಡಿದೆ. ಇಪ್ಪತ್ತು ವರ್ಷ ಸಾಕಿದರೆ ಒಂದೊಂದು ಮರವೂ ಲಕ್ಷಾಂತರ ರೂ. ಆದಾಯ ತರಬಲ್ಲುದು ಎನ್ನುತ್ತಾರೆ ಕೃಷಿಕರು.

ಎಲ್ಲೆಲ್ಲಿವೆ ಮರಗಳು?

ಆಂಧ್ರ ಪ್ರದೇಶದ ಕಡಪಾ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ಈ ಮರಗಳು ಕಾಣಸಿಗುತ್ತವೆ. ಮಂಡ್ಯದ ಹುಲಿಕೆರೆ ಲೋಯರ್ ಟನಲ್, ಮಳವಳ್ಳಿ ತಾಲೂಕಿನ ಬಸವನಬೆಟ್ಟ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಶೆಟ್ಟಹಳ್ಳಿಯ ಅರಣ್ಯ ಪ್ರದೇಶಗಳಲ್ಲಿ ರಕ್ತಚಂದನ ಮರಗಳು ಹೆಚ್ಚಾಗಿವೆ.

ಅರಣ್ಯ ಇಲಾಖೆಯ ಮಂಡ್ಯದ ಶೆಟ್ಟಿಹಳ್ಳಿ, ಬೀದರ್, ಹುಮ್ನಾಬಾದ್, ಕಲಬುರಗಿಯ ಚಿಂಚೋಳಿ, ಕೋಲಾರ ಮತ್ತು ಹೊಸಕೋಟೆ ಬಳಿ ರಕ್ತಚಂದನ ಸಸಿಗಳನ್ನು ಬೆಳೆಸುತ್ತಾರೆ. ಆದರೆ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿಲ್ಲ. ಪ್ರಾಯೋಗಿಕ ಸಂಶೋಧನಾ ಕಾರ್ಯಗಳಿಗಷ್ಟೇ ಬಳಸಲಾಗುತ್ತಿದೆ.

ವಿದೇಶಗಳಲ್ಲಿ ಬೇಡಿಕೆ

ಮಲೇಷಿಯಾ, ಚೀನಾ ಮತ್ತು ಜಪಾನ್‍ನಲ್ಲಿ ಇದಕ್ಕೆ ವಿಪರೀತ ಬೇಡಿಕೆ ಇದೆ. ರಕ್ತಚಂದನವನ್ನು ಅಣುವಿಕಿರಣ ಕ್ರಿಯೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಎನ್ನಲಾಗುತ್ತಿದೆ. ಇದರಲ್ಲಿ ಥೋರಿಯಂ ಅಂಶ ಇರುವುದು ಇದಕ್ಕೆ ಕಾರಣ.

ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಆಯುರ್ವೇದ ಔಷಧ, ಸುಗಂಧ ದ್ರವ್ಯ ತಯಾರಿಕೆಯಲ್ಲಿ ಮತ್ತು ಸಂಗೀತ ವಾದ್ಯಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಚೀನಾದಲ್ಲಿ ಇದಕ್ಕೆ ಆಟಿಕೆ ತಯಾರಿಸಲು ಬಳಸಲಾಗುತ್ತದೆ.ಅಲ್ಲದೆ ಚೀನಾದಲ್ಲಿರುವ ಬೌದ್ಧ ಧರ್ಮಿಯರು ಮನೆಗಳಲ್ಲಿ ರಕ್ತಚಂದನ ಇಟ್ಟು ಪೂಜಿಸುತ್ತಾರೆ.

ಶ್ರೀಗಂಧ ಮತ್ತು ಬೀಟೆ ಮರದ ನಂತರ ರಕ್ತಚಂದನ ಮರಕ್ಕೂ ಈಗ ಕುತ್ತು ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗಿರುವುದರಿಂದ ಮರಗಳ್ಳರು ಇದೀಗ ರಕ್ತಚಂದನ ಮರಗಳತ್ತ ವಕ್ರದೃಷ್ಟಿ ಬೀರಿದ್ದಾರೆ. ಇದರಿಂದಾಗಿ ಅಪರೂಪದ್ದು ಎನ್ನಲಾದ ಔಷಧೀಯ ಗುಣವುಳ್ಳ ರಕ್ತಚಂದನ (ಕೆಂಪುಚಂದನ) ಮರಗಳು ಅರಣ್ಯ ಪ್ರದೇಶಗಳಿಂದ ಅವ್ಯಾಹತವಾಗಿ ಲೂಟಿಯಾಗುತ್ತಿವೆ.

ಬೆಲೆ ಎಷ್ಟು?

ಮಾರುಕಟ್ಟೆಯಲ್ಲಿ ಶ್ರೀಗಂಧ ಮತ್ತು ಬೀಟೆ ಮರ ಹೊರತು ಪಡಿಸಿದರೆ ರಕ್ತಚಂದನ ಮರಕ್ಕೆ ಹೆಚ್ಚಿನ ಬೆಲೆ ಮತ್ತು ಬೇಡಿಕೆ ಎರಡೂ ಇದೆ. ಶ್ರೀಗಂಧದ ಮರದ ತುಂಡು ಕೆಜಿಗೆ 3 ರಿಂದ 5 ಸಾವಿರ ರುಪಾಯಿ ಇದೆ. ಬೀಟೆ ಮರದ ತುಂಡು ಅಡಿಗೆ 3 ರಿಂದ 4 ಸಾವಿರ ರೂ.ಗಳಿದೆ.

ಇನ್ನು ರಕ್ತಚಂದನ ಮರದ ತುಂಡು ಕೆಜಿ ಮತ್ತು ಅಡಿ ಲೆಕ್ಕದಲ್ಲಿಯೂ ಮಾರಾಟವಾಗುತ್ತದೆ. ರಕ್ತಚಂದನ ಅಡಿಗೆ 3 ರಿಂದ 4 ಸಾವಿರ ರೂಪಾಯಿ ಮೌಲ್ಯವಿದೆ. ರಕ್ತಚಂದನ ಮರವನ್ನು ದೇವರ ವಿಗ್ರಹ, ಔಷಧಕ್ಕೂ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಈ ಮರದಿಂದ ತಯಾರಿಸಲಾದ ದೇವರ ವಿಗ್ರಹಗಳಿಗೆ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.