ರಾಜಧಾನಿ ಸುತ್ತಸುತ್ತಲಿದೆ ಚುಕುಬುಕು
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಅನೇಕ ಪರಿಹಾರಗಳನ್ನು ಕಂಡುಕೊಳ್ಳಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮೆಟ್ರೋ ರೈಲು ಬಂದರೂ ಎಲ್ಲ ಪ್ರದೇಶಕ್ಕೂ ಇದು ಅನುಕೂಲವಾಗದು. ಈ ಹಿನ್ನೆಲೆಯಲ್ಲಿ ಈಗ ವರ್ತುಲ ರೈಲಿನ ಯೋಜನೆ ಮೊಳಕೆಯೊಡೆದಿದೆ. ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವರ್ತುಲ ರೈಲ್ವೆಯ ಚಿಂತನೆಯನ್ನು ಮಾಡಿದ್ದು ಅದನ್ನು ಕಾರ್ಯಗತಗೊಳಿಸುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವುದಲ್ಲದೆ, ಇದಕ್ಕಾಗಿ ಅನುದಾನ ಬಿಡುಗಡೆಗೂ ಸಿದ್ಧತೆ ಮಾಡಿಕೊಳ್ಳುತ್ತಿದೆ.
ರಾಜಧಾನಿಯಲ್ಲಿ ರೈಲ್ವೆ ಯೋಜನೆಗಳ ಅನುಷ್ಠಾನಕ್ಕಾಗಿ ಈ ಸಾಲಿನಲ್ಲಿ 1000 ಕೋಟಿ ರೂ. ಮೀಸಲಿಡಲು ಸರ್ಕಾರ ಉದ್ದೇಶಿಸಿದೆ. ಹಾಲಿ ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣವೇ ಪ್ರಮುಖವಾಗಿದ್ದು, ಇಲ್ಲಿಂದಲೇ ಯಶವಂತಪುರ, ತುಮಕೂರು ಮಾರ್ಗವಿದೆ. ಹಾಗೆಯೇ ಯಶವಂತಪುರದಿಂದ ಯಲಹಂಕ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ, ಯಶವಂತಪುರದಿಂದ ಹೆಬ್ಬಾಳ ಮಾರ್ಗವಾಗಿ ಬೈಯ್ಯಪ್ಪನಹಳ್ಳಿ, ಕೆ.ಆರ್. ಪುರ ಮಾರ್ಗವಾಗಿ ಚೆನ್ನೈಗೆ, ಯಶವಂತಪುರದಿಂದ ಹೆಬ್ಬಾಳ, ಬಾಣಸವಾಡಿ ಮಾರ್ಗವಾಗಿ ಸೇಲಂ ಕಡೆಗೆ ತೆರಳುವ ಮಾರ್ಗವಿದೆ. ಈ ಎಲ್ಲ ಮಾರ್ಗಗಳನ್ನು ಸಂಪರ್ಕಿಸುವಂತಹ ಮಾರ್ಗವನ್ನು ನಿರ್ಮಿಸುವುದೇ ಇದರ ಉದ್ದೇಶವಾಗಿದೆ.
ಯಲಹಂಕದಿಂದ ಹೆಬ್ಬಾಳ-ಕೆ.ಆರ್.ಪುರ-ವೈಟ್ಫೀಲ್ಡ್-ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವುದು ಒಂದು ಮಾರ್ಗವಾದರೆ, ಇನ್ನೊಂದು ಕಡೆ ಕೆಂಗೇರಿಯಿಂದ ನೆಲಮಂಗಲ-ಚಿಕ್ಕಬಾಣಾವರ-ಯಲಹಂಕಕ್ಕೆ ಸಂಪರ್ಕ ಕಲ್ಪಿಸುವುದು ಮತ್ತೊಂದು ಮಾರ್ಗವಾಗಿದೆ. ಇದರ ಜತೆಗೆ ಅತ್ತಿಬೆಲೆಯಿಂದ ಕೆಂಗೇರಿವರೆಗೆ ಹೊಸ ಮಾರ್ಗದ ನಿರ್ಮಾಣವಾದಲ್ಲಿ ವರ್ತುಲ ರೈಲು ಯೋಜನೆಯ ಕನಸಿಗೆ ಸಾಕಾರ ರೂಪ ಬರಲಿದೆ.
ಹಾಲಿ ಬೆಂಗಳೂರು ನಗರದಲ್ಲಿ 64 ಕಿ.ಮೀ. ವರ್ತುಲ ರಸ್ತೆ ಇದೆ. ಬನಶಂಕರಿಯಿಂದ ಜೆ.ಪಿ. ನಗರ, ಸೆಂಟ್ರಲ್ ಸಿಲ್ಕ್ ಬೋರ್ಡ್, ಅಗರ, ಇಬ್ಬಲೂರು, ಮಾರತ್ಹಳ್ಳಿ, ಕೆ.ಆರ್. ಪುರ, ಹೆಬ್ಬಾಳ, ಗೊರಗುಂಟೆ ಪಾಳ್ಯ, ಮಾಗಡಿ ರಸ್ತೆ, ಕೆಂಗೇರಿ ಉಪನಗರ, ಕೆಂಗೇರಿ, ನಾಯಂಡಹಳ್ಳಿ, ಹೊಸಕೆರೆಹಳ್ಳಿ ಮಾರ್ಗವಾಗಿ ಮತ್ತೆ ಬನಶಂಕರಿಗೆ ಸೇರುವ ಮಾರ್ಗ ಇದಾಗಿದೆ. ಇದೇ ರೀತಿಯಲ್ಲಿ ವರ್ತುಲ ರೈಲಿನ ಮಾರ್ಗ ಆರಂಭ ಮಾಡಿದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂಬುದು ಸರ್ಕಾರದ ಕಲ್ಪನೆ.
ವರ್ತುಲ ರೈಲು ಆರಂಭಿಸಿದರೂ ಇದು ನಿರಂತರವಾಗಿ ಓಡಾಟ ಇರಬೇಕು. ಇಲ್ಲವಾದಲ್ಲಿ ಜನ ಮತ್ತೆ ಖಾಸಗಿ ವಾಹನಗಳಿಗೆ ಮೊರೆ ಹೋಗಿ ಸರ್ಕಾರದ ಯೋಜನೆಗೆ ಕಿಮ್ಮತ್ತಿಲ್ಲದಂತಾಗುತ್ತದೆ ಎಂಬುದು ತಜ್ಞರು ಹೇಳುತ್ತಾರೆ. ವರ್ತುಲ ರೈಲು ಆರಂಭವಾದರೂ ಪ್ರಯಾಣಿಕರು ನಿರಂತರವಾಗಿ ಇದನ್ನು ಬಳಕೆ ಮಾಡುವಂತೆ ಯೋಜನೆ ರೂಪಿಸಬೇಕಾಗಿದೆ. ಮುಂಬೈ, ಚೆನ್ನೈ ಮಾದರಿಯಲ್ಲಿ ಸಬರ್ಬನ್ ರೈಲನ್ನು ಓಡಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರ ಜತೆಯಲ್ಲೇ ವರ್ತುಲ ರೈಲಿನ ಯೋಜನೆಯನ್ನು ಆರಂಭಿಸಿದಲ್ಲಿ ಸಂಚಾರ ದಟ್ಟಣೆಗೆ ಶೇ. 50ರಷ್ಟು ಕಡಿವಾಣ ಹಾಕಲು ಸಾಧ್ಯ ಎಂಬುದು ಸರ್ಕಾರದ ಆಶಯವಾಗಿದೆ. ಆದರೆ, ಈ ಯೋಜನೆಗೆ ಭೂ ಸ್ವಾಧೀನದ ಜತೆಗೆ ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಮತ್ತಷ್ಟು ಸೇತುವೆಗಳ ನಿರ್ಮಾಣವೂ ಆಗಬೇಕಾಗುತ್ತದೆ. ಒಟ್ಟಾರೆ ವರ್ತುಲ ರೈಲಿನ ಯೋಜನೆ ಸಾಕಾರಗೊಂಡಲ್ಲಿ ದೇಶದಲ್ಲೇ ಪ್ರಥಮವಾಗಿ ಇಂತಹ ಯೋಜನೆ ಜಾರಿಗೆ ತಂದ ನಗರ ಬೆಂಗಳೂರು ಆಗಲಿದೆ.