ಶ್ರೀಗಂಧದ ಉಪಯೋಗ

0
3366

ಶ್ರೀಗಂಧವನ್ನು ಮುಖ್ಯವಾಗಿ ಸುಗಂಧ ದ್ರವ್ಯ, ಸಾಬೂನು ಮತ್ತು ಪೀಠೋಪಕರಣಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತಿದೆ.

ಅತ್ಯಂತ ಶುದ್ಧರೂಪದಲ್ಲಿರುವ ಶ್ರೀಗಂಧದ ತೈಲವನ್ನು ಆಯುರ್ವೇದದ ಚಿಕಿತ್ಸೆಗಳಲ್ಲಿ ಉದ್ವೇಗ ಶಮನ ಮಾಡಲು ಉಪಯೋಗಿಸುವರು. ಶ್ರೀಗಂಧದ ತೈಲವು ಶರೀರದ ಒಳಗೆ ಮತ್ತು ಹೊರಭಾಗದಲ್ಲಿ ನಂಜು ನಿರೋಧಕವಾಗಿ ಬಳಸಲ್ಪಡುತ್ತದೆ. ಶ್ರೀಗಂಧದ ತೈಲದ ಮುಖ್ಯ ಅಂಗವಾದ ಬೀಟಾ-ಸನಟಾಲ್ ನಂಜನ್ನುಂಟುಮಾಡುವ ಸೂಕ್ಷ್ಮಜೀವಿಗಳನ್ನು ನಿರೋಧಿಸುವ ಗುಣವನ್ನು ಹೊಂದಿದೆ. ವಾಸನಾಚಿಕಿತ್ಸೆ ಮತ್ತು ಸುಗಂಧ ಸಾಬೂನುಗಳ ತಯಾರಿಕೆಯಲ್ಲಿ ಸಹ ಶ್ರೀಗಂಧವನ್ನು ಉಪಯೋಗಿಸುವರು. ಶ್ರೀಗಂಧದ ತೈಲವು ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವನ್ನು ಸಹ ಹೊಂದಿದೆ.

* ಚರ್ಮದ ಅಲರ್ಜಿ:ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಶ್ರೀಗಂಧವನ್ನು ಬಳಸಿದರೆ ಪರಿಣಾಮ ಬೀರುವುದು. ಒಂದು ಟೀ ಚಮಚ ನಿಂಬೇಹಣ್ಣಿನ ರಸದೊಂದಿಗೆ ಶ್ರೀಗಂಧದ ಪುಡಿಯನ್ನು ಬೆರೆಸಿ ಅಲರ್ಜಿಯಿರುವ ಚರ್ಮದ ಮೇಲೆ ಲೇಪಿಸುತ್ತಾ ಬಂದರೆ ಗುಣವಾಗುವುದು.

*ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಡಿ. ಈ ಪುಡಿಯನ್ನು ನೀವು ೩೦ ದಿನಗಳವರೆಗೂ ಇಡಬಹುದು. ಈ ಪುಡಿಗೆ ಸ್ವಲ್ಪ ಶ್ರೀಗಂಧದ ಪುಡಿ ಮತ್ತು ಹಾಲನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಮುಖದಲ್ಲಿ ಮೊಡವೆಗಳಿದ್ದರೆ ಈ ಪುಡಿಗೆ ಹಾಲಿನ ಬದಲು ಪನ್ನೀರು ಅಥವಾ ನೀರು ಹಾಕಿ ಕಲಸಿ.

ಔಷಧಿಗಳಲ್ಲಿ ಬಳಕೆ:

*ಶ್ರೀಗಂಧದ ಎಣ್ಣೆ ಕ್ರಿಮಿನಾಶಕ ಗುಣವನ್ನು ಹೊಂದಿದೆ.

*.ಕಫ‌ ಹಾಗೂ ಪಿತ್ತನಾಶಕ ಗುಣವಿದೆ.

*ರಕ್ತದೋಷಗಳನ್ನು ಪರಿಹಾರ ಮಾಡುತ್ತದೆ.

*ಶ್ರೀಗಂಧಯುಕ್ತ ನೀರನ್ನು ಕುಡಿಯುವುದರಿಂದ ಆಯಾಸ ಪರಿಹಾರವಾಗುತ್ತದೆ ಹಾಗೂ ಬಾಯಾರಿಕೆ ನಿವಾರಣೆಯಾಗುತ್ತದೆ.

*ಬಕ್ಕತಲೆಗೆ ಲೇಪಿಸುವುದರಿಂದ ಅಳಿದುಳಿದ ಕೂದಲುದುರುವಿಕೆ ನಿಲ್ಲುತ್ತದೆ.

*ಇದರ ಕಷಾಯ ಉರಿಮೂತ್ರದ ಸಮಸ್ಯೆಗೆ ಉತ್ತಮ ಪರಿಹಾರ.

*ಮೊಸರಿನಲ್ಲಿ ಶ್ರೀಗಂಧವನ್ನು ತೇಯ್ದು ಹಚ್ಚುವುದರಿಂದ ಕಜ್ಜಿ-ತುರಿ, ಸಿಬ್ಬು ಹೋಗುತ್ತದೆ.

*ಶ್ರೀಗಂಧದ ಚಕ್ಕೆ ಹಾಕಿ ಕುದಿಸಿ ಆರಿಸಿದ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮರೋಗಗಳು ನಿವಾರಣೆ ಆಗುತ್ತವೆ.

*ಗಂಧ ತೇಯ್ದು ಅದರಲ್ಲಿ ಕರ್ಪೂರ ಸೇರಿಸಿ ಚೆನ್ನಾಗಿ ತಿಕ್ಕಿ ಹಣೆ ಮತ್ತು ಕಪಾಳಕ್ಕೆ ಹಚ್ಚಿಕೊಂಡರೆ ತಲೆನೋವು ಮಾಯವಾಗುತ್ತದೆ.

*ಬಿರುಕು ಬಂದ ಚರ್ಮಕ್ಕೆ ತೇಯ್ದ ಶ್ರೀಗಂಧವನ್ನು ಹಸುವಿನ ಬೆಣ್ಣೆಯಲ್ಲಿ ಕಲಸಿ ಹಚ್ಚಬೇಕು.

*ಗಂಧದ ಕೊರಡನ್ನು ಜೇನುತುಪ್ಪದಲ್ಲಿ ತೇಯ್ದು ನಾಲಿಗೆಯ ಮೇಲೆ ಹಚ್ಚಿದರೆ ನಾಯಿಕೆಮ್ಮು ನಿವಾರಣೆಯಾಗುತ್ತದೆ.

*ಗಂಧವನ್ನು ನೆಲ್ಲಿಕಾಯಿ ರಸದಲ್ಲಿ ತೇಯ್ದು,ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.

*.ಶ್ರೀಗಂಧ ಮತ್ತು ಬಜೆಯನ್ನು ಮಜ್ಜಿಗೆಯಲ್ಲಿ ತೇಯ್ದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಹಳೆಯ ಜಿಡ್ಡು ಹೋಗುತ್ತದೆ.

*ಮೊಡವೆಗಳ ನಿವಾರಣೆಗೆ ಶ್ರೀಗಂಧ, ಅರಸಿನ ಕೊಂಬನ್ನು ನೀರಿನಲ್ಲಿ ತೇಯ್ದು ಗಂಧ ತಯಾರಿಸಿ ಅದನ್ನು ಹಾಲಿನ ಕೆನೆಯೊಂದಿಗೆ ತಿಕ್ಕಿ ಮುಲಾಮಿನಂತೆ ಮಾಡಿ ಹಚ್ಚಿಕೊಳ್ಳಬೇಕು.