ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ತೆರಿಗೆ ಇಲಾಖೆ ಕೆಂಗೆಣ್ಣಿಗೆ ಗುರಿ

0
689

ಭಾರತದ ಟೆನಿಸ್‍ ತಾರೆ ಸಾನಿಯಾ ಮಿರ್ಜಾ ಇದೀಗ ತೆರಿಗೆ ಇಲಾಖೆ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ತೆಲಂಗಾಣ ಸರಕಾರದಿಂದ 1 ಕೋಟಿ ರೂ. ಪಾವತಿಸದೇ ಮುಚ್ಚಿಟ್ಟ ಕಾರಣಕ್ಕೆ ಫೆಬ್ರವರಿ 16ರೊಳಗೆ ಹೈದರಾಬಾದ್‍ನ ಕಚೇರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದೆ.

ಭಾರತದ ಅಗ್ರಮಾನ್ಯ ಟೆನಿಸ್‍ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ತೆಲಂಗಾಣ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಇದಕ್ಕಾಗಿ 1 ಕೋಟಿ ರೂ. ಪಡೆದಿದ್ದರು. ಆದರೆ ಈ ಮೊತ್ತವನ್ನು `ಬಹುಮಾನ ಮೊತ್ತ’ ಎಂದು ಲೆಕ್ಕ ತೋರಿಸಿ ವಿನಾಯಿತಿ ಪಡೆಯಲಾಗಿದೆ. ಆದರೆ ರಾಯಭಾರಿ ಆಗಿ ನೇಮಕಗೊಂಡಿರುವುದಕ್ಕೆ ಪಡೆದ ಶುಲ್ಕ ಇದು ಎಂದು ತೆರಿಗೆ ಇಲಾಖೆ ಅಭಿಪ್ರಾಯಪಟ್ಟಿದೆ.

2014 ಜುಲೈ 22ರಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‍ ರಾವ್‍, ರಾಜ್ಯದ ಪ್ರಚಾರ ರಾಯಭಾರಿಯಾಗಿ ಸಾನಿಯಾ ಮಿರ್ಜಾ ಅವರನ್ನು ನೇಮಿಸಿದ್ದರು. ಅಲ್ಲದೇ 1 ಕೋಟಿ ರೂ. ಚೆಕ್‍ ನೀಡಿದ್ದರು. ಅಲ್ಲದೇ ಯುಎಸ್‍ ಓಪನ್‍ ಡಬಲ್ಸ್‍ ಗೆದ್ದಿದ್ದಕ್ಕೆ 2014, ಸೆಪ್ಟೆಂಬರ್ 11ರಂದು ಮತ್ತೊಮ್ಮೆ 1 ಕೋಟಿ ರೂ. ಬಹುಮಾನ ಮೊತ್ತ ನೀಡಿದ್ದರು.

ಸಾನಿಯಾ ಮಿರ್ಜಾ ರಾಯಭಾರಿಯಾಗಿ ಆಯ್ಕೆಯಾಗಿದ್ದಕ್ಕಾಗಿ ಪಡೆದ 1 ಕೋಟಿ ರೂ. ಮೊತ್ತದಲ್ಲಿ ಶೇ.15 ತೆರಿಗೆ ಹಾಗೂ ದಂಡ ಸೇರಿ 20 ಲಕ್ಷ ರೂ. ಪಾವತಿ ಬಾಕಿ ಇರಿಸಿಕೊಂಡಿದ್ದಾರೆ ಎಂದು ಇಲಾಖೆ ನೋಟೀಸ್‍ನಲ್ಲಿ ವಿವರಿಸಿದೆ.

2017, ಫೆಬ್ರವರಿ 6ರಂದು ಸಾನಿಯಾ ಮಿರ್ಜಾಗೆ ಸೇವಾ ತೆರಿಗೆ ಇಲಾಖೆಯ ಸೂಪರಿಟೆಂಡೆಂಟ್‍ ಕೆ. ಸುರೇಶ್‍ ಕುಮಾರ್‍ ನೋಟೀಸ್‍ ಜಾರಿ ಮಾಡಿದ್ದು, ತನಿಖೆಗೆ ಆದೇಶಿಸಿದ್ದಾರೆ.

ತೆಲಂಗಾಣ ಸರಕಾರದಿಂದ ಪಡೆದ 1 ಕೋಟಿ ರೂ. ತೆರಿಗೆ ವಿನಾಯಿತಿ ವ್ಯಾಪ್ತಿಗೆ ಬರುತ್ತದೆ. ತೆರಿಗೆ ಇಲಾಖೆಯಿಂದ ನೋಟೀಸ್‍ ಬಂದಿರುವುದು ನಿಜ. ಈ ಬಗ್ಗೆ ನಾವು ಉತ್ತರವನ್ನೂ ಕೊಟ್ಟಿದ್ದೇವೆ ಎಂದು ಸಾನಿಯಾ ಮಿರ್ಜಾ ಅವರ ಚಾರ್ಟೆಡ್‍ ಅಕೌಂಟೆಂಟ್ ಹಮೀನುದ್ದೀನ್‍ ಪ್ರತಿಕ್ರಿಯಿಸಿದ್ದಾರೆ.