ಅತಿ ಮುಖ್ಯ, ಪ್ರಭಾವಶಾಲಿ ಹಾಗೂ ಏಳು ಬೆಟ್ಟಗಳ ಅಧಿದೇವಿಯಾಗಿ ನೆಲೆಸಿರುವ ಸಪ್ತಶೃಂಗಿ ಮಹಿಷಾಸುರ ಮರ್ದಿನಿ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ..!!

0
768

ಸಪ್ತಶೃಂಗಿಯಲ್ಲಿ ನೆಲೆಸಿರುವ ಮಹಿಷಾಸುರ ಮರ್ದಿನಿ

ಭಾರತದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಲಾಗಿರುವ ಘಟನೆ ಹಾಗೂ ಪ್ರಸಂಗಗಳ ಕುರಿತಂತೆ ಸಾಕಷ್ಟು ಸ್ಥಳಗಳಿವೆ. ಇಂದಿಗೂ ಆ ಸ್ಥಳ ಧಾರ್ಮಿಕ ಮಹತ್ವ ಪಡೆದು ದಿನವೂ ಭಕ್ತ ಜನರಿಂದ ಭೇಟಿ ನೀಡಲ್ಪಡುವ ಪವಿತ್ರ ತಾಣಗಳಾಗಿ ಸಾಕಷ್ಟು ಹೆಸರುವಾಸಿಯಾಗಿವೆ. ಈ ಸ್ಥಳಗಳು ಒಂದೊಂದು ವಿಶೇಷತೆಯನ್ನು ಹೇಳುತ್ತವೆ.

ಆಂಧ್ರದಲ್ಲಿ `ಏಳು ಬೆಟ್ಟಗಳೊಡೆಯ ತಿಮ್ಮಪ್ಪ’ ಎಂಬ ಸಂಭೋದಿಸಲಾಗುತ್ತದೆಯೋ ಅದೇ ರೀತಿಯಾಗಿ ಇಲ್ಲಿ ನೆಲೆಸಿರುವ ಶಕ್ತಿ ದೇವಿಯನ್ನು ಏಳು ಬೆಟ್ಟಗಳ ಅಧಿದೇವಿ ಎಂದೆ ಪ್ರೀತಿಯಿಂದ ಕರೆಯಲಾಗುತ್ತದೆ. 18 ಕೈಗಳುಳ್ಳ ಈ ದೇವಿ ಮಹಿಷನನ್ನು ವಧಿಸಿ ಇಲ್ಲಿ ಬಂದು ನೆಲೆಸಿದ್ದಾಳೆ ಎಂಬ ನಂಬಿಕೆ ಭಕ್ತರ ಮನಸ್ಸಿನಲ್ಲಿದೆ. `ಸಪ್ತಶೃಂಗಿ’ ಬೆಟ್ಟದಲ್ಲಿಯೇ ಶಾಂತಚಿತ್ತಳಾಗಿ ನೆಲೆಯೂರಿರುವ ದೇವಿ ಭಕ್ತಾದಿಗಳ ಸಂಕಷ್ಟಗಳನ್ನು ಪರಿಹರಿಸುತ್ತಾ ಸುಖ ಸಮೃದ್ಧಿ ತಾಂಡವಾಡುವಂತೆ ಹರಿಸುತ್ತಿದ್ದಾಳೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ತಾಲೂಕಿನ ನಂದೂರಿ ಗ್ರಾಮದ ಬಳಿಯಿರುವ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಯ ಬೆಟ್ಟಗಳಲ್ಲಿ ಈ ಸಪ್ತಶೃಂಗಿ ದೇವಾಲಯ ಸ್ಥಿತವಿದೆ. ನಾಸಿಕ್ ಪಟ್ಟಣದ ಪಶ್ಚಿಮಕ್ಕೆ ಸುಮಾರು 60 ಕಿ.ಮೀಗಳಷ್ಟು ದೂರ ಕ್ರಮಿಸಿದರೆ ದೇವಿಯ ಪವಿತ್ರ ಸಾನಿಧ್ಯ ಕಾಣುತ್ತದೆ. ರೈಲಿನ ವ್ಯವಸ್ಥೆ ಇಲ್ಲದ ಕಾರಣ ಬಸ್ ಅವಲಂಬನೆ ಅನಿವಾರ್ಯವಾಗಿದೆ. ನಾಸಿಕ್‍ನಿಂದ ಖಾಸಗಿ ವಾಹನಗಳಲ್ಲಿಯೂ ಈ ಸ್ಥಳಕ್ಕೆ ಸುಲಭವಾಗಿ ಹೋಗಬಹುದು.

ಪುರಾಣದ ಹಿನ್ನೆಲೆ

ಈ ಕ್ಷೇತ್ರಕ್ಕೆ ಸಂಬಂಧಿಸಿದ ಕಥೆಯೊಂದು ತುಂಬಾ ಪ್ರಚಲಿತವಾಗಿದೆ. ಹಿಂದೆ ರಂಭ ಎಂಬ ಹೆಸರಿನ ಅಸುರ ರಾಕ್ಷಸ ಇದ್ದ. ಅವನು ಒಂದು ಬಾರಿ ವಿಹರಿಸುತ್ತಿರುವಾಗ ಎಮ್ಮೆಯೊಂದನ್ನು ನೋಡಿ ಮೋಹಿತನಾದ. ಹೀಗೆ ಕಾಮಾಂಧನಾಗಿ ಆ ಎಮ್ಮೆಯಿಂದ ಮಗನೊಬ್ಬನನ್ನು ಪಡೆದ. ಆ ಮಗನೇ ಮಹಿಷಾಸುರ. ಅರ್ಧ ಕೋಣವಾಗಿ ಇನ್ನು ಅರ್ಧ ಮನುಷ್ಯನ ದೇಹ ಪಡೆದುಕೊಂಡ ಈತ ತಂದೆಯ ನಂತರ ತನ್ನ ಸಾಮ್ರಾಜ್ಯದ ಅಧಿಪತಿಯಾದ ಹಾಗೂ ಅಸುರ ಕುಲದ ಶತ್ರುಗಳಾದ ದೇವತೆಗಳನ್ನು ನಿರ್ನಾಮ ಮಾಡಲು ಹವಣಿಸತೊಡಗಿದ. ತಾನು ಅಂದುಕೊಂಡ ಕೆಲಸಕ್ಕೆ ಅಪಾರ ಶಕ್ತಿಯ ಅವಶ್ಯಕತೆ ಇದೆ ಎಂದು ಮನಗಂಡ ಅವನು ಬ್ರಹ್ಮನ ಕುರಿತು ತಪ್ಪಸ್ಸು ಆಚರಿಸಿ ಆತನನ್ನು ಪ್ರಸನ್ನಗೊಳಿಸಿದ.

ಬ್ರಹ್ಮನು ಪ್ರತ್ಯಕ್ಷನಾಗಿ ಯಾವ ವರದಾನ ಬೇಕೆಂದು ಕೇಳಲು ತನಗೆ ಅಮರತ್ವ ನೀಡಬೇಕು ಎಂದು ವಿನಂತಿಸಿಕೊಂಡ. ಆದರೆ ಇದು ಸೃಷ್ಟಿಯ ನಿಯಮದ ವಿರುದ್ಧವಾಗಿದ್ದರಿಂದ ಈ ವರವನ್ನು ನೀಡಲು ಸಾಧ್ಯವಿಲ್ಲ ಎಂದು ಬ್ರಹ್ಮ ಹೇಳಿದ. ಅದಕ್ಕೆ ಸ್ವಲ್ಪ ಯೋಚಿಸಿದ ಮಹಿಷ ಸರಿ ಹಾಗಾದರೆ ತನಗೆ ಯಾವ ಪ್ರಾಣಿ ಪಕ್ಷಿಗಳಿಂದಾಗಲಿ, ಪುರುಷನಿಂದಾಗಲಿ, ದೇವರಿಂದಾಗಲಿ ಮರಣ ಬರಬಾರದು ಎಂದು ಕೇಳಿಕೊಂಡ. ಇದರ ಪ್ರಕಾರ ತಾನು ಒಂದು ಸ್ತ್ರೀಗಿಂತಲೂ ಅಪಾರ ಶಕ್ತಿಶಾಲಿ ಇನ್ನೂ ತಾನು ಸದಾ ಅಮರ ಎಂದು ಸಂತಸಗೊಂಡ. ನಂತರ ದೇವತೆಗಳ ಮೇಲೆ ಯುದ್ಧ ಸಾರುತ್ತಾ ಮೊದಲು ಇಂದ್ರಲೋಕವನ್ನು ವಶಪಡಿಸಿಕೊಂಡ. ಇದರಿಂದ ಭಯಬೀತರಾದ ಎಲ್ಲ ದೇವತೆಗಳು ಸಾಕಷ್ಟು ಕಷ್ಟ, ಅವಮಾನ ಅನುಭವಿ ಕೊನೆಗೆ ತ್ರಿಮೂರ್ತಿಗಳ ಮೊರೆ ಹೋದಾಗ ತ್ರಿಮೂರ್ತಿಗಳು ಒಟ್ಟಿಗೆ ಸೇರಿ ತಮ್ಮ ತೇಜಸ್ಸುಗಳಿಂದ ಒಬ್ಬ ಸ್ತ್ರೀಯನ್ನು ರೂಪಿಸಿದರು.

ಹಾಗೇ ರೂಪಗೊಂಡ ಸ್ತ್ರೀ ದುರ್ಗೆ. ಸ್ತ್ರೀಯಾಗಿರುವುದಷ್ಟೇ ಅಲ್ಲದೇ ತ್ರಿಮೂರ್ತಿಗಳ ಅಪರಿಮಿತವಾದ ಶಕ್ತಿಯುಳ್ಳವಳಾಗಿದ್ದಳು. ಅಂತೆಯೆ ಮಹಿಷಾಸುರನನೊಡನೆ ಭಯಂಕರ ಯುದ್ಧ ಮಾಡಿ ಆತನನ್ನು ವಧಿಸಿದಳು. ಹೀಗೆ ಅತ್ಯಂತ ಬಲಿಷ್ಠಶಾಲಿ ಅಸುರ ರಾಜ ಒಂದೆ ಘಳಿಗೆಯಲ್ಲಿ ದುರ್ಗೆಯಿಂದ ಸಂಹಾರಗೊಂಡ. ನಂತರ ದೇವಿ ಈ ಏಳು ಬೆಟ್ಟಗಳ ಒಂದು ಪ್ರದೇಶದಲ್ಲಿ ಬಂದು ನೆಲೆಸಿದಳು. ಆ ಏಳು ಬೆಟ್ಟಗಳ ಅಧಿದೇವತೆಯಾಗಿ ಮರೆಯಾಗಿ ಸಪ್ತಶೃಂಗೆ ಎನಿಸಿಕೊಂಡಳು.