ನೀರೆಯರ ಸೀರೆ ಮತ್ತು ಸೆರಗು

0
1531

ಸೀರೆ ಉಟ್ಟನೀರೆ ಎಷ್ಟು ಸುಂದರ? ಚಂದ್ರಕಾಶಿ ಸೀರೆ ಉಟ್ಟು ಚಂದ್ರಮನಂಥ ಕುಂಕುಮ ಧರಿಸಿದ ಚಂದ್ರವದನೆ ಎಷ್ಟು ಚಂದ? ಸೀರೆ ನಮ್ಮ ಸಂಪ್ರದಾಯದ ಪ್ರತಿಕ. ಇತಿಹಾಸದ ಪ್ರಕಾರ ಸೀರೆ ಗ್ರೀಕರ ಕೊಡುಗೆ, ಚಂದ್ರಗುಪ್ತ ಮೌರ್ಯನಿಗೆ ಹೆಂಡತಿಯಾಗಿ ಬಂದ ಸೆಲ್ಯುಕಸ್’ನ ಪುತ್ರಿ ಹೆಲೆನ್ನಳಿಂದ ಸೀರೆ ಭಾರತಕ್ಕೆ ಬಂದಿತು, ಗ್ರೀಕ್ ಸೀರೆ ಹೊಲಿದ ವಸ್ತ್ರವಾಗಿತ್ತು. ವೇದಕಾಲದಲ್ಲಿ ಸಹ ಕಂಚುಕ ಎಂಬ ಹೊಲಿದ ವಸ್ತ್ರ ಸೀರೆಯಂತೆ ಕಾಣುತ್ತಿತ್ತು. ಪೌರಾಣಿಕ ಮತ್ತು ಮಹಾಕಾವ್ಯಗಳ ಕಾಲದ ಚಿತ್ರಗಳಲ್ಲಿ ಈ ರೀತಿಯ ಸೀರೆಗಳನ್ನು ಕಾಣಬಹುದು.

ಚೀರಾ ಶಬ್ದ ಸಂಸ್ಕೃತ. ಇದರ ಕನ್ನಡ ರೂಪ ಸೀರೆ. ಸೀರೆ ತನ್ನ ಬಣ್ಣ ಚಿತ್ತಾರಗಳಿಂದ ಆಕರ್ಷಕವಾಗಿ ಕಾಣುತ್ತದೆ. ಹತ್ತಿ, ರೇಷ್ಮೇ, ನಾರು, ನೂಲು ಮುಂತಾದ ಸಾಮಾಗ್ರಿಗಳಿಂದ ಸೀರೆಯನ್ನು ತಯಾರಿಸುತ್ತಾರೆ. ಕೈಮಗ್ಗ ಸೀರೆ ಭಾರತದಾದ್ಯಂತ ಪ್ರಚಾರದಲ್ಲಿದೆ. ರೇಷ್ಮೆ ಸೀರೆಗಳಿಗೆ ಮೈಸೂರು, ಕಂಚಿ, ಧರ್ಮಾವರಂ, ಬನಾರಸ್ ಪ್ರಸಿದ್ಧ, ಅತ್ಯಂತ ತೆಳ್ಳನೆಯ ಬನಾರಸ್ ಸಿಲ್ಕ್, ಅತ್ಯಂತ ತೆಳ್ಳನೆಯ ಬನಾರ್ ಸಿಲ್ಕ್ ಗಟ್ಟಿತನಕ್ಕೆ ಕಂಚಿ ಸಿಲ್ಕ್ ಹೆಸರಾಗಿವೆ. ಇಳಕಲ್ಲು. ಮೊಳಕಾಲ್ಮೂರು, ಗಧ್ ವಾಲ್, ಸೊಲ್ಲಪುರ ಮುಂತಾದ ಊರುಗಳಿಂದ ಅದೇ ಊರಿನ ಹೆಸರನ್ನು ಹೊಂದಿ ಸೀರೆಗಳು ದೇಶದಾದ್ಯಂತ ಪ್ರಖ್ಯಾತವಾಗಿವೆ.

ನಾಲ್ಕು ದಶಕಗಳ ಹಿಂದೆ, ಬಹುಶಃ ಉತ್ತರ ಕರ್ನಾಟಕದಲ್ಲಿ 10ರಿಂದ 18 ಮೊಳಗಳ ಸೀರೆಯನ್ನು ಉಡುತ್ತಿದ್ದರು, ಆ ಸೀರೆಗಳನ್ನು ಉಡುವ ಶೈಲಿ ವಿಭಿನ್ನ. ಪೂರ್ತಿ ಮೈಯನ್ನು ಮುಟ್ಟಿ ತಲೆ ಮೇಲೆ ಸೆರಗನ್ನು ಹೊದ್ದುಕೊಳ್ಳುತ್ತಿದ್ದರು. ಈ ಪದ್ಧತಿ ವಯಸ್ಸಾದ ಗ್ರಾಮೀಣ ಮಹಿಳೆಯರಲ್ಲಿ ಕಂಡುಬರುತ್ತದೆ. ಒನಕೆ ಓಬವ್ವ, ಕಿತ್ತೂರುಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ ಇವರೆಲ್ಲ ವೀರಗಚ್ಚೆ ಹಾಕಿ ವೈರಿಗಳ ವಿರುದ್ಧ ಕಾದಾಡಿದವರು ಸೀರೆ ಉಟ್ಟವರೇ.

ಉತ್ತರ ಭಾರತದ ಸ್ತ್ರೀ ಬಲಗಡೆಯ ಭುಜದ ಮೇಲಿಂದ ಸೆರಗನ್ನು ಮುಂದೆ ಇಳಿಸಿಕೊಂಡು ಹರಡುತ್ತಾರೆ ಮತ್ತು ಹಿಂದಿನಿಂದ ಸೆಗಿನ ಮೇಲುತುದಿಯನ್ನು ತಲೆಯ ಮೇಲೆ ಎಳೆದುಕೊಂಡು ಸೆರಗು ಹಾಕಿಕೊಳ್ಳುವರು. ಗುಜರಾತ್, ಬಂಗಾಲ ಪ್ರದೇಶದ ಸ್ತ್ರೀಯರು ಈ ರೀತಿ ಧರಿಸುವರು. ಆದಿವಾಸಿಗಾಳದ ಗೊಂಡರು, ಸಂತಾಲರು ಸೀರೆಗಳನ್ನು ಮೈಗೆ ಹತ್ತಿಕೊಂಡು ಉಟ್ಟುಕೊಳ್ಳುವರು. ಇದೇ ರೀತಿಯಾಗಿ ಉತ್ತರ ಕನ್ನಡದಲ್ಲಿ ಕೆಲಸಗಾರ ಸ್ತ್ರೀಯರು ಧರಿಸುವರು. ತಮಿಳುನಾಡಿನ ಅಯ್ಯರ್, ಸೀರೆಗೆ ಎಡಗಾಲಿಗಂಟಿದ ನಿರಿಗೆ ಕುಚ್ಚು ಬಲಗಡೆಯ ಭುಜಕ್ಕೆರಿದರೆ ಸೆರಗು ಬೆನ್ನನ್ನು ಹಾಯ್ದು ಮುಂದೆ ಬಂದು ನಡುವಿನ ಸುತ್ತಲೂ ಜೋಳೊಗೆ ಆಕಾರದಲ್ಲಿರುವುದು. ಕನ್ನಡನಾಡಿನ ಸ್ಮಾರ್ತರ ಒಳಗಚ್ಚೆಸೀರೆ, ಮಾಧ್ವರ ಮೆಲ್ಗಚ್ಚೆ ಎರಡನ್ನೂ ಅಳವಡಿಸಿಕೊಂಡ ಮಹಾರಾಷ್ಟ್ರದ ಇರ್ಗಚ್ಚೆ ಒಂದು ವೈಶಿಷ್ಟ

ಇಂದಿನ ಚೂಡಿದಾರ್, ಸಲ್ವಾರ್ ಕಮಿಝ್ ಮತ್ತು ಮನೆಯಲ್ಲಿ ಧರಿಸುವ ನೈಟಿ ಇವೆಲ್ಲ ಸೀರೆಯನ್ನು ಆಕ್ರಮಿಸಿವೆ. ನಗರ ಪ್ರದೇಶಗಳಲ್ಲಿ ಸೀರೆಯ ಪ್ರಭಾವ ಕಡಿಮೆಯಾಗುತ್ತಲಿದೆ.

‘ಸೀರೆಗೆ ಸೆರಗ ಚಂದ, ಮಾರಿಗಿ ಮೂಗು ಚಂದ ಎಂಬ ಮಾತಿದೆ. ಸೀರೆಯ ಸೆರಗಿನಲ್ಲಿ ಸಾದಾ ಸೆರಗು, ಟೋಪಿನ ಸೆರಗು, ತೆನಿ ತುಗಿದ ಸೆರಗು ಎಂಬ ಪ್ರಕಾರಗಳಿವೆ. ಈಗ ಸೀರೆ ಉಟ್ಟವರು ಸೆರಗು ಹೊದ್ದುಕೊಳ್ಳುವುದು ಬಹಳ ಕಡಿಮೆಯಾಗಿದೆ. ಸೆರಗು ಹೊತ್ತವರನ್ನು ನಾವು ಕಾಣುವುದಾದರೆ, ಗದಗ, ಬಾಗಲಕೋಟೆ, ಬಿಜಾಪುರ, ಬೀದರ್, ಗುಲ್ಬರ್ಗಾ, ಧಾರವಾಡ ಈ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು.

ಸೆರಗು ಶಬ್ದದೊಡನೆ ಆನೇಕ ಪಡೆನುಡಿಗಳು ಜನಜನಿತವಾಗಿವೆ ಅವುಗಳಲ್ಲಿ ಕೆಲವೊಂದನ್ನು ಅರ್ಥಸಹಿತವಾಗಿ ವಿಶ್ಲೇಷಿಸಲಾಗಿದೆ.

ಸಂಬಂಧ, ಸ್ನೇಹ, ಬಿಡುವುದನ್ನು, ಬೆನ್ನಿಗೆ ಬಿದ್ದವರನ್ನು (ಸಹೋದರ-ಸಹೋದರಿ) ಆದಷ್ಟು ದೂರ ಮಾಡುವುದನ್ನು ‘ಸೆರಗು ಬಿಡು’ ಎನ್ನುವರು. ಹೆಣ್ಣನ್ನು ಭೋಗಕ್ಕೆ ಆಹ್ವಾನಿಸಿದಾಗ ‘ಸೆರಗು ಎಳೆ’ದನು ಎನ್ನುವರು. ಮಕ್ಕಳು ತಾಯಿಯನ್ನು ಹಿಂಬಾಲಿಸಿದಾಗ ‘ಸೆರಗು ಹಿಡಿದರು’ ಎನ್ನುವರು

ವಧು-ವರರ ಬ್ರಹ್ಮಗಂಟನ್ನು ಹಾಕುವುದು ವರನ ಶಲ್ಯದ ತುದಿ ಮತ್ತು ವಧುವಿನ ಸೆರಗಿನ ತುದಿಗೆ ನಾ ಏನ ಹೇಳ್ತಿನಿ ಅದನ್ನ ನೀ ಮಾಡು ಎಂದು ಹೇಳುವ ಸೂಚನೆ ಸೆರಗಿನ್ಯಾಗ ಗಂಟು ಹಾಕು ಎನ್ನುತ್ತದೆ. (ಇದು ಪುರುಷತ್ವ ಅಧಿಪತ್ಯ)

ಹೀಗೆ ಸೀರೆ ಸೆರಗು ಹೆಣ್ಣಿನ ಮಾನ ಮುಚ್ಚುವುದು ಅಲ್ಲದೇ ಕೆಲವು ನಡೆನುಡಿಗಳ ಉಪಯೋಗದಿಂದ ಹೆಣ್ಣಿನಕೆಲವು ನಿಷಿದ್ದ ಕಾರ್ಯಗಳನ್ನು ಪರಿಪೂರ್ಣ ಉಡುಗೆ, ಈಗ ಸೀರೆಯ ಸೆರಗು ಹೊತ್ತವರು ಅನಾಗರೀಕರು ಅಶಿಕ್ಷಿತರು ಎನ್ನುವ ಭಾವನೆ ಬಂದಿದೆ.