ಸರ್ಪದೋಷ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಡಿ

0
3853

Kannada News | Karnataka Temple History

ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಸರ್ಪ ದೋಷ ಎನ್ನುವುದು ಕಷ್ಟಕರ ಬದುಕಿನ ಸಂಕೇತವಾಗಿದೆ ಎಂದು ನಂಬಲಾಗಿದೆ.

sarpa-dosha

ಮತ್ತೊಂದು ವಿಷಯವೆಂದರೆ ಕೆಲ ಜ್ಯೋತಿಷಿಗಳ ಪ್ರಕಾರ, ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರಲ್ಲಿ ಕಂಡುಬರುತ್ತದೆಯಂತೆ. (ನಂಬಿಕೆಯ ಪ್ರಕಾರ, ಈ ದೋಷವು ತಿಳಿದೊ ತಿಳಿಯದೆಯೊ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ನಾನಾ ವಿಧಗಳ ಮೂಲಕ ಬರುವ ದೋಷ) ಈ ರೀತಿ ಹೇಳುವವರ ಉದ್ದೇಶ ಏನೆ ಇರಲಿ ಆದರೆ ಇದಕ್ಕೊಂದು ಪರಿಣಾಮಕಾರಿಯಾದ ಪರಿಹಾರ ಕರುಣಿಸುವಾತನೊಬ್ಬ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎನ್ನುವುದು ನಮಗೆಲ್ಲ ಸಂತುಷ್ಟಿ ನೀಡುವ ವಿಷಯವಾಗಿದೆ.

ಹೌದು, ಜಾತಕಗಳಲ್ಲಿರುವ ದೋಷ, ಬಹು ಮುಖ್ಯವಾಗಿ ಸರ್ಪ ದೋಷ ನಿವಾರಣೆಗೆ ಅತಿ ಪ್ರಮುಖ ಸ್ಥಳವಾಗಿ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಸಿರುವ ಕುಕ್ಕೆಯು ದೇಶದಲ್ಲೆ ಅತಿ ಜನಪ್ರಿಯ ಹಾಗೂ ಹೆಸರುವಾಸಿಯಾದಂತಹ ಸರ್ಪದೋಷ ನಿವಾರಣಾ ಕ್ಷೇತ್ರವಾಗಿದೆ. ಸಾಕ್ಷಾತ್ ಸುಬ್ರಹ್ಮಣ್ಯನೆ ಇಲ್ಲಿ ನೆಲೆಸಿರುವುದರಿಂದ ಈ ಸ್ಥಳವನ್ನು ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರಿನ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ

30-kukke-5
ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಈ ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಸೇವೆಗಳು. ಸರ್ಪ ಹತ್ಯೆ, ನಾಗದೋಷ ಪರಿಹಾರಕ್ಕಾಗಿ ಈ ಸೇವೆಗಳನ್ನು ಜನರು ಸಲ್ಲಿಸುತ್ತಾರೆ. ಮಹಾಪೂಜೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದ ಸೇವೆಗಳೂ ಸಮರ್ಪಣೆಯಾಗುತ್ತವೆ.

ಇಲ್ಲಿ ಮುಖ್ಯವಾಗಿ ಎರಡು ಸೇವೆಗಳನ್ನು ದೋಷವಿರುವವರು ಅಥವಾ ಭೇಟಿ ನೀಡುವ ಭಕ್ತಾದಿಗಳು ಮಾಡಬಹುದು. ಈ ಎರಡು ಮುಖ್ಯ ಪೂಜೆಗಳೆಂದರೆ ಒಂದು ಅಶ್ಲೇಷ ಬಲಿ ಪೂಜೆ ಹಾಗೂ ಇನ್ನೊಂದು ಸರ್ಪ ಸಂಸ್ಕಾರ/ಸರ್ಪದೋಷ. ತಿಳಿಯಬೇಕಾದ ಅಂಶವೆಂದರೆ ಈ ಎರಡೂ ಪೂಜೆಗಳಿಗೆ ಬಹಳ ಬೇಡಿಕೆಯಿರುವುದರಿಂದ ಮುಂಗಡವಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಬೇಕಾಗಿರುವುದು ಅವಶ್ಯ.

30-kukke-2

ಅಶ್ಲೇಷ ಬಲಿ ಪೂಜೆಯನ್ನು ಪ್ರತಿ ತಿಂಗಳು ಅಶ್ಲೇಷ ನಕ್ಷತ್ರದ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ. ಒಂದೆ ದಿನದಲ್ಲಿ ಸಮಾಪ್ತಗೊಳ್ಳುವುದರಿಂದ ಭೇಟಿ ನೀಡಿದ ದಿನದಲ್ಲೆ ಸೇವಾ ಕೌಂಟರಿಗೆ ತೆರಳಿ ಅದರ ನಿಗದಿತ ಶುಲ್ಕ ಪಾವತಿಸಿ ರಸೀದಿ ಪಡೆದು ಈ ಸೇವೆಯಲ್ಲಿ ಭಾಗವಹಿಸಬಹುದು. ನೆನಪಿರಲಿ ಈ ಪೂಜೆಯು ಬೆಳಿಗ್ಗೆ 7 ಹಾಗೂ 9 ಘಂಟೆಗೆ ಮಾತ್ರ ನೆರವೇರಿಸಲಾಗುತ್ತದೆ. ಸಾಮಾನ್ಯವಾಗಿ ಶ್ರಾವಣ ಮಾಸ, ಕಾರ್ತಿಕ ಮಾಸ ಹಾಗೂ ಮಾರ್ಗಶಿರ ಮಾಸಗಳು ಈ ಪೂಜೆ ನೆರವೇರಿಸಲು ಉತ್ತಮ ಸಮಯ ಎನ್ನಲಾಗುತ್ತದೆ.

ಆದರೆ ಮುಖ್ಯ ಪೂಜೆಯಾದ ಸರ್ಪಸಂಸ್ಕಾರ ಅಥವಾ ಸರ್ಪ ದೋಷಕ್ಕೆ ಎರಡು ದಿನಗಳನ್ನು ಮೀಸಲಿಡಬೇಕಾಗುತ್ತದೆ. ಈ ಒಂದು ವಿಧಾನವು ಶ್ರಾದ್ಧದ ಪೂಜೆಗೆ ಸಮನಾಗಿರುವುದರಿಂದ ಕಟ್ಟು ನಿಟ್ಟಾದ ಶಿಸ್ತುಗಳನ್ನು ಪಾಲಿಸಬೇಕಾಗುತ್ತದೆ. ಈ ಪೂಜೆಯಲ್ಲಿ ಯಾರೆ ಆಗಲಿ ಯಾವುದೆ ಭೇದ ಭಾವನೆಗಳಿಲ್ಲದೆ ಪಾಲ್ಗೊಳ್ಳಬಹುದು. ಪೂಜೆ ಮಾಡಿಸುವವರಿಗೆ ದೇವಸ್ಥಾನದ ವತಿಯಿಂದಲೆ ಉಪಹಾರ, ಭೋಜನದ ವ್ಯವಸ್ಥೆಯಿರುತ್ತದೆ. ಪ್ರತಿ ಕುಟುಂಬದಿಂದ ಗರಿಷ್ಠ ನಾಲ್ಕು ಜನರು ಮಾತ್ರ ಪಾಲ್ಗೊಳ್ಳಬಹುದು.

Also Read: ನಾವು ದೇವರಿಗೆ ದೀಪವನ್ನು ಹಚ್ಚುವುದರ ಹಿಂದಿನ ವೈಜ್ಞಾನಿಕ ಕಾರಣ