ಶಿಕ್ಷಕ ಸಮಾಜದ ಶಿಲ್ಪಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್!!!

0
1165

ಶಿಕ್ಷಕ ಸಮಾಜದ ಶಿಲ್ಪಿಯಾಗಿದ್ದು, ಯಾವುದೇ ಮೋಹ ಅಥವಾ ಬಂಧನಗಳಿಗೊಳಗಾಗದೇ ಸುಂದರ ಮತ್ತು ಸ್ವಸ್ಥ ಸಮಾಜ ನಿರ್ಮಿಸುತ್ತಾನೆ. ಶಿಕ್ಷಕನ ಕೆಲಸ ಕೇವಲ ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನ ನೀಡುವುದಕ್ಕೆ ಸೀಮಿತವಾಗಿರುವುದಿಲ್ಲ. ಬದಲಾಗಿ ಆತ ಸಾಮಾಜಿಕ ಪರಿಸ್ಥಿತಿಗಳ ಕುರಿತಂತೆಯೂ ವಿದ್ಯಾರ್ಥಿಗಳಿಗೆ ಪರಿಚಯ ನೀಡಬೇಕಾಗುತ್ತದೆ. ಶಿಕ್ಷಕರ ಇಂಥ ಮಹತ್ವಕ್ಕಾಗೇ ಅವ-ರಿಗೊಂದು ಶ್ರೇಷ್ಠ ಸ್ಥಾನ ನೀಡಲು ಸರ್ವಪಲ್ಲಿ ರಾಧಾಕೃಷ್ಣ ಸಾಕಷ್ಟು ಪ್ರಯತ್ನಿಸಿದ್ದರು. ಇಂಥ ಮಹತ್ವಪೂರ್ಣ ಕೊಡುಗೆಗಾಗಿಯೇ ರಾಷ್ಟ್ರಪತಿಯೂ ಆಗಿದ್ದ ರಾಧಾಕೃಷ್ಣ ಅವರ ಜನ್ಮದಿನವಾದ ಸೆ.5ರಂದು ಶಿಕ್ಷಕರ ದಿನ ಆಚರಿಸುವ ಮೂಲಕ ಅವರಿಗೆ ಗೌರವ ನೀಡಲಾಗುತ್ತದೆ.

ಜೀವನ ಪರಿಚಯ

ಚೆನ್ನೈನಿಂದ 200 ಕಿ.ಮೀ. ದೂರದ ತಿರುತ್ತಣಿ ಎಂಬ ಸಣ್ಣ ಗ್ರಾಮದಲ್ಲಿ 1888ರ ಸೆ.5 ರಂದು ರಾಧಾಕೃಷ್ಣ ಜನಿಸಿದರು. ತಂದೆ ಸರ್ವಪಲ್ಲಿ ವೀರಸ್ವಾಮಿ, ತಾಯಿ ಸೀತಮ್ಮ. ಐವರು ಸಹೋದರರು, ಓರ್ವ ಸೋದರಿ ಇರುವ ಬಡ ಕುಟುಂಬದಲ್ಲಿ ಎರಡನೆಯವರಾಗಿ ಹುಟ್ಟಿದ ರಾಧಾಕೃಷ್ಣರಿಗೆ ಓದಬೇಕೆನ್ನುವ ಅಪಾರ ಹಂಬಲವಿತ್ತು. ಶಿಷ್ಯವೇತನದಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಸಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ತತ್ವಜ್ಞಾನ ವಿಷಯದ ಮೇಲೆ ಬಿಎ ಮತ್ತು ಎಂಎ ಪದವಿ ಪಡೆದರು. ಎಂಎ ಅಧ್ಯಯನ ಮಾಡುತ್ತಿದ್ದಾಗ ಮಂಡಿಸಿದ `ದಿ ಎಥಿಕ್ಸ್ ಆಫ್ ವೇದಾಂತ’ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. 16ನೇ ವಯಸ್ಸಿನಲ್ಲೇ ಶಿವಕಾಶಮ್ಮ ಎಂಬುವವರೊಡನೆ ವಿವಾಹವಾಗಿ, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಲಾರಂಭಿಸಿದರು.

ಹಿಂದು ಧರ್ಮ ಸಾರ, ವೇದ, ಉಪನಿಷತ್ತು, ಜೈನ ತತ್ವಜ್ಞಾನ, ಪ್ಲೂಟೋ, ಮಧ್ವ, ಶಂಕರ, ರಾಮಾನುಜ ಸೇರಿದಂತೆ ಅನೇಕ ಮಹನೀಯರು ಬರೆದ ತತ್ವಜ್ಞಾನಗಳನ್ನು ಆಳವಾಗಿ ಅಧ್ಯಯನ ನಡೆಸಿದರು. 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ, 1931ರಲ್ಲಿ ಆಂಧ್ರ ವಿವಿಯ ಉಪಕುಲಪತಿಗಳಾಗಿ ಐದು ವರ್ಷ ಸೇವೆ ಸಲ್ಲಿಸಿದರು. ಅವರ ಅವಧಿಯಲ್ಲಿ ವಿಶ್ವವಿದ್ಯಾಲಯ ಹಲವಾರು ಸುಧಾರಣೆಗಳನ್ನು ಕಂಡಿತು.

1939ರಲ್ಲಿ ಬನಾರಸ್ ವಿವಿ ಉಪಕುಲಪತಿಗಳಾಗಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಅವರನ್ನು ವಿಶ್ವವಿದ್ಯಾಲಯದ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿತು. ವ್ಯಕ್ತಿತ್ವಮಹಾನ್ ಶಿಕ್ಷಕ, ದಾರ್ಶನಿಕ, ವಕ್ತಾರರೂ ಆಗಿದ್ದ ರಾಧಾಕೃಷ್ಣ ಅವರು ವಿಜ್ಞಾನಿ, ಓರ್ವ ಹಿಂದು ವಿಚಾರಕರೂ ಆಗಿ ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿ ಆದರ್ಶ ಶಿಕ್ಷಕರೆನಿಸಿಕೊಂಡರು. 1989ರಲ್ಲಿ ಅವರ ಪುತ್ರ ಡಾ. ಎಸ್ ಗೋಪಾಲ ರಾಧಾಕೃಷ್ಣರ ಜೀವನಚರಿತ್ರೆ ಬರೆದು ಪ್ರಕಟಿಸಿದರು.

1952ರಲ್ಲಿ ಭಾರತದ ಮೊಟ್ಟ ಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡರು. 1962ರಲ್ಲಿ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿ ದೇಶದ ಸರ್ವತೋಮುಖ ಏಳಿಗೆಗೆ ಶ್ರಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಗಟ್ಟಿಗೊಳಿಸಿದರು.ಬಿರುದುಗಳು: 1954ರಲ್ಲಿ ಭಾರತರತ್ನ ಪ್ರಶಸ್ತಿ, 1973ರಲ್ಲಿ ಟೆಂಪಲ್ಟನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್-1968, ವ್ಯಾಟಿಕನ್ ಸಿಟಿ ಪೋಪ್‍ರಿಂದ `ನೈಟ್ ಆಫ್ ದಿ ಆರ್ಮಿ’ ಪ್ರಶಸ್ತಿ, ಬ್ರಿಟನ್ ಆಕ್ಸಫರ್ಡ್ ವಿವಿಯಿಂದ ಗೌರವ ಡಾಕ್ಟರೇಟ್, ಅಮೆರಿಕ ಹಾರ್ವರ್ಡ್ ವಿವಿಯಿಂದ ಗೌರವ ಡಾಕ್ಟರೇಟ್ ಅಲ್ಲದೇ ಭಾರತೀಯ ವಿದ್ಯಾಭವನದಿಂದ `ಬ್ರಹ್ಮ ವಿದ್ಯಾ ಭಾಸ್ಕರ’ ಪ್ರಶಸ್ತಿ. ರಾಷ್ಟ್ರಪತಿ ಹುದ್ದೆಯ ಅಧಿಕಾರಾವಧಿ ನಂತರ ನಿವೃತ್ತಿ ಜೀವನ ನಡೆಸುತ್ತಿದ್ದ ರಾಧಾಕೃಷ್ಣ ಅವರು 1975ರ ಏ. 17ರಂದು ನಿಧನರಾದರು.