ಹಗಲುದರೋಡೆಯಾಗಿದೆ ಇಂದಿನ ಶಿಕ್ಷಣ ವ್ಯವಸ್ಥೆ!!! ಪ್ರತಿಯೊಬ್ಬರೂ ಇದನ್ನು ಓದಲೇಬೇಕು!!!

1
5095

ಶೈಕ್ಷಣಿಕ ವ್ಯಾಪಾರೀಕರಣಕಡಿವಾಣ ಅತ್ಯಗತ್ಯ!!!

ಶಿಕ್ಷಣ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಸರ್ವರ ಬಾಳು ಬೆಳಗುವ ಬೆಳಕು. ಸುಂದರ ಭವಿಷ್ಯವನ್ನು ಸೃಷ್ಟಿಸುವ ಹೊಂಬೆಳಕು. ಅಜ್ಞಾನದ ಪೊರೆ ಕಳಚಿ ಸುಜ್ಞಾನದ ಅಮೃತಧಾರೆಯೆರೆಯುವ ಕಲ್ಪತರು. ಮನುಷ್ಯನಿಗೆ ಆಲೋಚನಾ ಕ್ರಮ, ದೃಷ್ಟಿಕೋನ, ಸಾಮಾಜಿಕ ಬದ್ಧತೆ, ಕೌಟುಂಬಿಕ ಸಂಪನ್ನತೆ, ಸಾರ್ವಜನಿಕ ಮನ್ನಣೆಗಳನ್ನು ದಯಪಾಲಿಸುವ ದಯಾಸಿಂಧು. ಮನುಷ್ಯ ಅಕ್ಷರದ ಅಂಗಳಕ್ಕೆ ಕಾಲಿಟ್ಟ ಘಳಿಗೆಯಿಂದ ಈವರೆಗೆ ಔಪಚಾರಿಕ ಶಿಕ್ಷಣ ಅರ್ಥಾತ್ ಕಲಿಕೆ ಕಾಲಾನುಕಾಲಕ್ಕೆ ಹಲವಾರು ರೂಪ, ಸ್ವರೂಪ ಮತ್ತು ಆಯಾಮಗಳನ್ನು ಕಂಡಿದೆ.

ಗುರುಕುಲ ಶಿಕ್ಷಣ ಪದ್ಧತಿಯಿಂದ ಆರಂಭವಾದ ಕಲಿಕಾಕ್ರಮ ಇಂದು ವಿಶ್ವವಿದ್ಯಾಲಯದ ಹಂತದವರೆಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಸುಂದರ ಪರಿಸರದಲ್ಲಿ ಪ್ರಕೃತಿಯ ನಡುವೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ವೇದ-ಪುರಾಣಗಳ ಕಥನಗಳನ್ನು ವಿವರಿಸುವ ಮೂಲಕ ನೀಡುತ್ತಿದ್ದ ನೈತಿಕ ಶಿಕ್ಷಣದ ಗುರುಕುಲ ಪದ್ಧತಿ ಸರ್ವಕಾಲಕ್ಕೂ ಮಾದರಿ. ಗುರುಗಳಿಗೆ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಎಂಬ ಅನುಭವವಾಣಿಯಂತೆ ಗುರುವಿನ ಸಾನಿಧ್ಯ, ಗುರುನಿಷ್ಠೆ ಮತ್ತು ಗುರುಭಕ್ತಿಗಳೇ ಕಲಿಕಾರ್ಥಿಗಳ ಬೆಳವಣಿಗೆಯನ್ನು ನಿರ್ಧರಿಸುತ್ತಿದ್ದ ಕಾಲವದು.

ಗುರುವಿನ ಪೂರ್ಣಾಶೀರ್ವಾದ ಪಡೆದವನೇ ಅತ್ಯುತ್ತಮ ವಿದ್ಯಾರ್ಥಿಯೆಂಬ ಹೆಗ್ಗಳಿಕೆ ಅಂದಿನದ್ದಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಗುರುಗಳು ಆತ್ಮತೃಪ್ತಿಗಾಗಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಸದುದ್ದೇಶದಿಂದ ಶಿಕ್ಷಣಾರ್ಥಿಗಳಿಗೆ ಕಲಿಸುತ್ತಿದ್ದರು. ಈ ಶಿಕ್ಷಣ ನೀಡಿಕೆಗೆ ಗುರುಗಳು ದವಸಧಾನ್ಯಗಳ ರೂಪದಲ್ಲಿ ಪ್ರತಿಫಲಗಳನ್ನು ಪಡೆಯುತ್ತಿದ್ದರು, ಹಣದ ವಹಿವಾಟುಗಳೇ ಅಷ್ಟಾಗಿ ಕಂಡುಬರುತ್ತಿರಲಿಲ್ಲ. ವಿದ್ಯೆ `ದಾನರೂಪಿ’ಯಾಗಿತ್ತು. ವಿದ್ಯಾದಾನ ಅತ್ಯಂತ ಶ್ರೇಷ್ಠ ದಾನ ಎಂಬ ಮಾತು-ನಂಬಿಕೆ ಬಲವಾಗಿತ್ತು. ಗುರುವಿಗೆ ಅತ್ಯಂತ ಉನ್ನತ ಸ್ಥಾನವಿತ್ತು, ವಿದ್ಯಾರ್ಥಿಗಳಲ್ಲಿ ವಿಧೇಯತೆ-ವಿನಯಗಳೆ ದೊಡ್ಡ ಸಂಪತ್ತಾಗಿತ್ತು. ಆಗಲೂ ಎಲ್ಲರಿಗೂ ವಿದ್ಯೆ ದೊರೆಯುತ್ತಿರಲಿಲ್ಲವಾದರೂ ಸಾಮಾಜಿಕ ನ್ಯಾಯದ ಅಸೀಮ ಉಲ್ಲಂಘನೆಯಾಗಲಿ, ಅತೀವ ದಿವ್ಯ ನಿರ್ಲಕ್ಷ್ಯವಾಗಲಿ ಇರಲಿಲ್ಲ.

Image result for school children india

ಆದರೆ…,ಈಗ ಎಲ್ಲವೂ ಬದಲಾಗಿಬಿಟ್ಟದೆ. ಜಾಗತೀಕರಣದ ಕಬಂಧಬಾಹು ಎಲ್ಲೆಡೆ ಚಾಚಿರುವಂತೆಯೇ ಆ ಸುಂಟರಗಾಳಿ ಶಿಕ್ಷಣದತ್ತಲೂ ಬಿರುಬೀಸಾಗಿಯೇ ಬೀಸಿದೆ. ಪರಿಣಾಮ ಶಿಕ್ಷಣ ನೀಡಿಕೆ ಶುದ್ಧ ವ್ಯಾಪಾರ-ವಹಿವಾಟಿನ ರೂಪ ಪಡೆದು ಶಿಕ್ಷಣ ರಂಗವೇ ವ್ಯಾಪಾರೀಕರಣಗೊಂಡಿದೆ!ಶಿಕ್ಷಣ ವ್ಯವಸ್ಥೆ ಖಾಸಗೀಕರಣದ ಹೊಡೆತಕ್ಕೆ ಸಿಕ್ಕಿದ್ದೇ ತಡ ಸಂಪೂರ್ಣ ಬದಲಾಗಿಬಿಟ್ಟಿದ್ದು ಕಟುವಾಸ್ತವ. ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣವಾದ ಪರಿಣಾಮ ಬಂಡವಾಳಶಾಹಿಗಳೆಲ್ಲಾ ಶಿಕ್ಷಣ ಕ್ಷೇತ್ರದೆಡೆಗೆ ಮುಖಮಾಡಿದ್ದರಿಂದ ಗಲ್ಲಿಗಲ್ಲಿಗಳಲ್ಲಿ ನಾಯಿಕೊಡೆಗಳಂತೆ ಖಾಸಗಿ ಶಾಲೆ ಅರ್ಥಾತ್ ಕಾನ್ವೆಂಟ್‍ಗಳು ತಲೆ ಎತ್ತಿವೆ.

ಕಾನ್ವೆಂಟ್‍ಗಳ ಹಾವಳಿಯಿಂದ ಆರಂಭವಾದ ಶಿಕ್ಷಣದ ಖಾಸಗೀಕರಣ ಮುಂದುವರೆದು ಖಾಸಗಿ ಶಿಕ್ಷಣ ಸಂಸ್ಥೆಗಳು, ವೃತ್ತಿಶಿಕ್ಷಣ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗುವುದರೊಂದಿಗೆ ಶಿಕ್ಷಣ ಕ್ಷೇತ್ರ ಪೂರ್ಣಪ್ರಮಾಣದಲ್ಲಿ ಖಾಸಗಿಯವರ ಕೈಸ್ವತ್ತಾಗಿದ್ದು ದುರಂತ.ಶಿಕ್ಷಣದ ಖಾಸಗೀಕರಣದ ಫಲವೇ ಶಿಕ್ಷಣದ ವ್ಯಾಪಾರೀಕರಣ! ವ್ಯಾಪಾರಂ ದ್ರೋಹ ಚಿಂತನಂ ಎಂಬ ನಾಣ್ನುಡಿಯಂತೆ ವಿದ್ಯಾಸಂಸ್ಥೆಗಳು ಪಕ್ಕಾ ವ್ಯಾಪಾರಿ ಕೇಂದ್ರಗಳಾದ ಮೇಲೆ ಇಂದು ಕಲಿಸುವಿಕೆಗಿಂತಲೂ ವ್ಯಾಪಾರವೇ ಪ್ರಧಾನವಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಎಂಬ ಮಾರುಕಟ್ಟೆಯ ನೀತಿ ಶಿಕ್ಷಣ ಕ್ಷೇತ್ರದಲ್ಲೂ ನುಸುಳಿ ಲಾಭ-ನಷ್ಟದ ಲೆಕ್ಕಾಚಾರವೇ ಬಹುಮುಖ್ಯವಾಗಿಬಿಟ್ಟಿದೆ. ಹಣವಂತ ಜನಪ್ರತಿನಿಧಿಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಮೇಲಂತೂ ಇಡೀ ವ್ಯವಸ್ಥೆಯೇ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿದಂತಾಗಿದೆ.

Image result for school children india

ಅಡಿಯಿಂದ ಮುಡಿಯವರೆಗೆವ್ಯಾಪಾರೀಕರಣ ಶಿಕ್ಷಣದ ಎಲ್ಲಾ ಹಂತದಲ್ಲೂ ಹಬ್ಬಿನಿಂತಿದೆ. ಬೇಬಿ ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ವ್ಯಾಪಾರಿ ಪ್ರವೃತ್ತಿ ವ್ಯಾಪಿಸಿ ಬಡ ಮಕ್ಕಳಿಗೆ ಶಿಕ್ಷಣ ನಿಜಕ್ಕೂ ಗಗನಕುಸುಮವಾಗಿದೆ. ಪಶ್ಚಿಮದಿಂದ ಬೀಸಿದ ಇಂಗ್ಲೀಷ್ ಗಾಳಿ ಜನಮಾನಸದಲ್ಲಿ ಹಲವು ಭ್ರಮೆ-ಕನಸುಗಳನ್ನು ತುಂಬಿರುವ ಈ ಹೊತ್ತಿನಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಕಲಿಸುವ ಸರ್ಕಾರಿ ಶಾಲೆಗಳಿಗಿಂತಲೂ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠ ಮಾಡುವ ಕಾನ್ವೆಂಟ್‍ಗಳೇ ಪೋಷಕರಿಗೆ ಬಲು ಪ್ರಿಯವಾಗಿದೆ.

ಬಡವರು, ಮಧ್ಯಮವರ್ಗದವರು, ಮೇಲ್ ಮಧ್ಯಮವರ್ಗದವರಾದಿಯಾಗಿ ಎಲ್ಲ ಆರ್ಥಿಕ ಸ್ಥಿತಿಯ ಜನರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲೇ ಕಲಿಸುವ ಸಂಕಲ್ಪ ಮಾಡಿದ ಮೇಲೆ ಶಿಕ್ಷಣದ ವ್ಯಾಪಾರಿ ಮನೋಭಾವ ಮತ್ತಷ್ಟು ಬಲಗೊಂಡಿದೆ. ಇದರಿಂದಾಗಿ ಕಾಸು ಇದ್ದೋನೇ ಬಾಸು ಎಂಬಂತೆ ಹಣವುಳ್ಳವರು, ಸಾಲಸೋಲ ಮಾಡಿ ದಕ್ಕಿಸಿಕೊಳ್ಳುವಂತಹರಷ್ಟೇ ತಮ್ಮ ಶೈಕ್ಷಣಿಕ ಕನಸುಗಳನ್ನು ನನಸಾಗಿಸಿಕೊಳ್ಳಬಹುದೆಂಬ ಸಾರ್ವತ್ರಿಕ ಅಭಿಪ್ರಾಯ ಬಲವಾಗಿರುವುದು ಬೇಸರದ ವಿಚಾರ.ವಿಪರೀತ ತುಟ್ಟಿಪೋಷಕರ ಮನೋಭಾವ ಮತ್ತು ಶೈಕ್ಷಣಿಕ ಗುಣಮಟ್ಟದ ಹುಸಿ ಭ್ರಮೆಗಳು ಹೆಚ್ಚಾದ ಬೆನ್ನಲ್ಲೇ ಪ್ರಾಥಮಿಕ ಶಿಕ್ಷಣವೂ ಬಲುತುಟ್ಟಿಯಾಗಿ ಪರಿಣಮಿಸಿದೆ.

ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಪ್ರತಿಷ್ಠಿತವೆಂಬ ಸ್ವಯಂಘೋಷಿತ `ಸ್ಕೂಲ್-ಕಾನ್ವೆಂಟ್’ ಗಳು ಲಕ್ಷಾಂತರ ರೂಪಾಯಿಯನ್ನು ಪೀಕುವಷ್ಟು ಶಿಕ್ಷಣ ವಿಪರೀತ ತುಟ್ಟಿಯಾಗಿದೆ. ಕಾನ್ವೆಂಟ್‍ಗಳ ಹಂತ ದಾಟಿ ಪಿಯುಸಿ ಮತ್ತು ಉನ್ನತ ಶಿಕ್ಷಣಕ್ಕೆ ಹೋದರಂತೂ ಕ್ಯಾಪಿಟೇಷನ್ ಶುಲ್ಕ ಬಡ ವಿದ್ಯಾರ್ಥಿಗಳು ಹಾಗೂ ಪೋಷಕರ ಜಂಘಾಬಲ ಅಡಗಿಹೋಗುವುದು ನಿಶ್ಚಿತ. ವೃತ್ತಿಶಿಕ್ಷಣ ಕೋರ್ಸ್‍ಗಳಲ್ಲಂತೂ ಮನೆಮಠ ಮಾರಿಯೋ, ಮನೆಯಲ್ಲಿದ್ದ ಒಡವೆಗಳನ್ನು ಮಾರಿಯೋ, ಬ್ಯಾಂಕ್‍ಗಳಲ್ಲಿ ಲಕ್ಷಗಟ್ಟಲೆ ಸಾಲ ಮಾಡಿಯೋ ಮಕ್ಕಳನ್ನು ಓದಿಸುವಂತಹ ಪರಿಸ್ಥಿತಿ ತಲೆದೋರಿದೆ.

ದಿನೇ ದಿನೇ ವರ್ಷದಿಂದ ವರ್ಷಕ್ಕೆ ಈ `ಕ್ಯಾಪಿಟೇಷನ್ ಮಾಫಿಯಾ’ ಬಲಗೊಳ್ಳುತ್ತಲಿದ್ದು ಆಡಳಿತ ವ್ಯವಸ್ಥೆಯೂ ಈ ಮಾಫಿಯಾಗೆ ಮಣಿಯಬೇಕಾದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಪ್ರತಿಭೆಗೆ ಮಂಕುಶಿಕ್ಷಣದ ಈ ಪರಿಯ ವ್ಯಾಪಾರೀಕರಣದಿಂದಾಗಿ ಪ್ರತಿಭೆ, ಅಂಕಗಳಿದ್ದರೂ ಉನ್ನತಶಿಕ್ಷಣ ಮಾಡಲು ಹಣದ ಕಂತೆಗಳು ಇರಲೇಬೇಕಾದ ಅನಿವಾರ್ಯ ವಿಷಮ ಸ್ಥಿತಿಯಿದ್ದು ಹಣವೊಂದಿಸಲಾಗದೆÀ, ಹಣ ಪೂರೈಸಲಾಗದೆ ಎಷ್ಟೋ ಪ್ರತಿಭಾವಂತ ಮಕ್ಕಳು ತಮ್ಮ ಶೈಕ್ಷಣಿಕ ಕನಸುಗಳಿಗೆ ಎಳ್ಳುನೀರು ಬಿಟ್ಟು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಜೀವಸವೆಸುವಂತಾಗಿರುವುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ.

ಕಡಿವಾಣಕ್ಕೆ ಸಕಾಲಶಿಕ್ಷಣ ಕ್ಷೇತ್ರವನ್ನು ಆವರಿಸಿರುವ ಈ ಮಾಫಿಯಾವನ್ನು ಬಗ್ಗುಬಡಿಯುವುದು ಅತ್ಯಂತ ಜರೂರಾಗಿ ಆಗಬೇಕಿರುವ ಕೆಲಸ. ಸಮಸ್ಯೆ-ಸವಾಲುಗಳನ್ನು ಎದುರಿಸಿ ಎದುರಾಳಿಗಳಿಗೆ `ಚಳಿ’ ಬಿಡಿಸುವುದೇ ಆಡಳಿತಯಂತ್ರದ ನೈಜ ಗಮ್ಮತ್ತು. ಆ ಗಮ್ಮತ್ತಿನ ಘಮಲನ್ನು ವಿದ್ಯಾರ್ಥಿಗಳು-ಪೋಷಕರು ಅಘ್ರಾಣಿಸುವಂತಾಗಬೇಕು. ಇಂತಹ ದಿಟ್ಟ ಕ್ರಮಕ್ಕೆ ಮುಂದಾಗಬೇಕಾದರೆ ಆಡಳಿತ ವ್ಯವಸ್ಥೆಗೆ ಇಚ್ಛಾಶಕ್ತಿ ಅತ್ಯಗತ್ಯ. ಉಚಿತ ಶಿಕ್ಷಣ ಪದ್ಧತಿ ಇಲ್ಲವೆ ರಿಯಾಯಿತಿ ದರದ ಶಿಕ್ಷಣ ಪದ್ದತಿಯನ್ನು ಆಡಳಿತ ವ್ಯವಸ್ಥೆ ಬಲಪಡಿಸಬೇಕು.

ಅಂತಹ ಸಾಮುದಾಯಿಕ-ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸಬೇಕು. ಖಾಸಗಿಯವರಿಗೆ ಕಾನ್ವೆಂಟ್, ಕಾಲೇಜು, ಶಿಕ್ಷಣ ಸಂಸ್ಥೆ ಸ್ಥಾಪಿಸಲು ನೀಡಲಾಗುತ್ತಿರುವ ಅನುಮತಿಯನ್ನು ತಾತ್ಕಾಲಿಕವಾಗಿಯಾದರೂ ಕೆಲ ವರ್ಷಗಳ ಮಟ್ಟಿಗೆ ತಡೆ ಹಿಡಿಯಬೇಕು. ಸದ್ಯ ವಿದ್ಯಾರ್ಜನೆಯಲ್ಲಿ ತೊಡಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕು. ವಿದ್ಯಾರ್ಥಿಗಳಿಗೆ ವಿಧಿಸಲಾಗುವ ಶೈಕ್ಷಣಿಕ ಶುಲ್ಕ, ಬೋಧನಾ ಶುಲ್ಕಗಳು ಕೈಗೆಟುಕುವ ರೀತಿಯಲ್ಲಿರುವಂತೆ ತಾಕೀತು ಮಾಡಬೇಕು.

ಈ ನಿಯಮ ಉಲ್ಲಂಘಿಸಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿದ್ರ್ರಾಕ್ಷಿಣ್ಯ ಕ್ರಮ ಜರುಗಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಕಟ್ಟಡ ಶುಲ್ಕ, ಕಂಪ್ಯೂಟರ್ ಶುಲ್ಕ ಮತ್ತಿತರ ಶುಲ್ಕಗಳ ಹೆಸರಿನಲ್ಲಿ ಪೋಷಕರಿಂದ ಲಕ್ಷಾಂತರ ರೂಪಾಯಿಯನ್ನು ವಸೂಲಿ ಮಾಡುವ ಹಗಲುದಂಧೆಗೆ ಕಡಿವಾಣ ಆಗಲೇಬೇಕು. ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿಗಾಗಿ ಕೂಗು ಎದ್ದಿರುವ ಈ ಹೊತ್ತಿನಲ್ಲಿ ಆಯಾ ಶೈಕ್ಷಣಿಕ ಕಲಿಕೆಗೆ ಇಂತಿಷ್ಟೇ ಎಂಬಂತೆ ಏಕರೂಪದ ಶುಲ್ಕ ಪದ್ಧತಿಯನ್ನು ಜಾರಿಗೆ ತರುವುದು ಈ ಎಲ್ಲಾ ಅವಾಂತರ-ಶೋಷಣೆಗಳಿಗೆ ರಾಮಬಾಣ.

ಹಾಗಂತ ಇಂತಹ ಪದ್ಧತಿಯನ್ನು ಏಕಾಏಕಿ ಜಾರಿಗೆ ತರಲಾಗದೇನೋ ನಿಜ. ಆದರೆ, ಸಾಮಾಜಿಕ ನ್ಯಾಯದ ನೀತಿಬೋಧಕ, ಜನಸಾಮಾನ್ಯರ ಭಗವದ್ಗೀತೆ `ಸಂವಿಧಾನ’ದ ಚೌಕಟ್ಟಿನಲ್ಲಿ ಈ ಸಂಬಂಧ ಕಟ್ಟುನಿಟ್ಟಿನ ಕಾನೂನು ತಿದ್ದುಪಡಿ ಮಾಡಿ ಹೊಸದಾದ ಶಿಕ್ಷಣ ನೀತಿ-ಶೈಕ್ಷಣಿಕ ಕಾನೂನನ್ನು ಅನುಷ್ಠಾನಗೊಳಿಸಬೇಕು. ಆಗ ಮಾತ್ರವೇ ನಿತ್ಯ ನಿರಂತರವಾಗಿ ದೇಶವ್ಯಾಪಿ ಹಗಲಿರುಳೆನ್ನದೆ ನಡೆಯುತ್ತಿರುವ `ಶೈಕ್ಷಣಿಕ ಶೋಷಣೆ’ ಕೊನೆಗೊಂಡು ಸಮಾನ ಶಿಕ್ಷಣ-ಸಮಾನ ಶುಲ್ಕಗಳು ಈ ನಾಡಿನ ಬಡ-ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಕನಸು ಸಾಕಾರಗೊಳ್ಳಲು ಸಾಧ್ಯ.