ಕೃಷ್ಣಾ ಸುಂದರಿ ಸೆರೆನಾ-ರವರ ಸಾಧನೆ ಪ್ರತಿಯೊಂದು ಹೆಣ್ಣಿಗೂ ಮಾದರಿ!!

0
563

Kannada News | Karnataka Achiecers

ಸಾಧನೆಯ ಮಾದರಿ ಸೆರೆನಾ

ಅವಳು ಕೃಷ್ಣ ಸುಂದರಿ.. ಬಲಿಷ್ಠ ಹೊಡೆತಗಳ ಆಟಗಾರ್ತಿ…ಛಲಗಾರ್ತಿ..ಸೋಲಿನ ಮೆಟ್ಟಿನ ಮೇಲೆ ಗೆಲುವಿನ ಆಸ್ಥಾನ ಕಟ್ಟುವ ಹೋರಾಟಗಾರ್ತಿ.. ಈಕೆ ಈಗ 23 ಗ್ರ್ಯಾನ್‍ಸ್ಲಾಮ್ ಒಡತಿ. ಇವರೇ ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್. ಆಟಗಾರನ ನಿವೃತ್ತಿಗೆ ವಯಸ್ಸು ಮುಖ್ಯವಲ್ಲ ಫಿಟ್‍ನೆಸ್ ತುಂಬಾ ಮುಖ್ಯ ಎಂಬುದನ್ನು ವಿಶ್ವಕ್ಕೆ ಸಾರಿದ ದಿಟ್ಟೆ. ಎದುರಾಳಿ ಬೀಸಿದ ಬಲೆಗೆ ಬೀಳದ ಸೆರೆನಾ ವರ್ಷದಿಂದ ವರ್ಷಕ್ಕೆ ತಮ್ಮ ಚಾರ್ಮ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನೇನು ಮುಗಿದೆ ಬಿಟ್ಟಿತು ಎಂದಾಗಲೇ ಕಪ್ ಎತ್ತಿ ಟೀಕೆಗಳಿಗೆ ಉತ್ತರಿಸುವ ಸೆರೆನಾ ಅವರ ಧಾಟಿಗೆ ಅವರೇ ಸಾಠಿ.

ತಮ್ಮ 5ನೇ ವಯಸ್ಸಿನಲ್ಲಿ ಅಕ್ಕ ವೀನಸ್ ಅವರನ್ನು ನೋಡಿ ಟೆನಿಸ್ ಅಂಗಳಕ್ಕೆ ಪ್ರವೇಶಿಸಿದ ಸೆರೆನಾ ಈಗ ಮತ್ತೆ ವಿಶ್ವದ ನಂಬರ್ 1 ಆಟಗಾರ್ತಿ ಪಟ್ಟಕ್ಕೇರಿದ್ದಾರೆ. ಒಂದು ಗ್ರ್ಯಾನ್‍ಸ್ಲಾಮ್ ಗೆದ್ದರೆ ಇತಿಹಾಸ ಸೃಷ್ಟಿಯಾಗುತ್ತದೆ. ಸೆರೆನಾ 2017ರ ಮೊದಲ ಗ್ರ್ಯಾನ್‍ಸ್ಲಾಮ್ ಪ್ರಶಸ್ತಿ ಎತ್ತಿ ದಾಖಲೆಯ ಪ್ರಶಸ್ತಿ ಪಡೆದು ಬೀಗಿದರು. ಅತಿ ಹೆಚ್ಚು ಗ್ರ್ಯಾನ್‍ಸ್ಲಾಮ್ ಪ್ರಶಸ್ತಿ ಗೆದ್ದ ಆಟಗಾರ ಪಟ್ಟಿಯಲ್ಲಿ ಸದ್ಯ ಸೆರೆನಾ ಅವರಿಗೆ ಎರಡನೇ ಸ್ಥಾನ. ಸರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಮಾರ್ಗರೆಟ್ ಕೋರ್ಟ್ 24 ಗ್ರ್ಯಾನ್ ಸ್ಲಾಮ್ ಗೆದ್ದು ಮೊದಲ ಸ್ಥಾನದಲ್ಲಿದ್ದಾರೆ. ಸೆರೆನಾ ನಂತರದ ಸ್ಥಾನದಲ್ಲಿ ಜರ್ಮನಿಯ ಸ್ಟಾಫಿ ಗ್ರಾಫ್ (22) ಇದ್ದಾರೆ.

ಟೆನಿಸ್ ಕೋರ್ಟ್‍ನಲ್ಲಿ ಯುವಕರು ನಾಚುವಂತೆ ಆಡುವ, ಅಂಗಳದಲ್ಲಿ ಚುರುಕಿನಿಂದ ಓಡಾಡಿ ಚೆಂಡಿಗೆ ರಾಕೆಟ್ ದರ್ಶನ ಮಾಡಿಸುವ ಸೆರೆನಾ ಹಿಂಗೈ, ಮುಂಗೈ ಹಾಗೂ ಶರವೇಗದ ಸರ್ವ್‍ಗಳಿಂದಲೇ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ. ಯಶಸ್ಸು ಕಾಪಾಡಿಕೊಳ್ಳುವ ತಪಸ್ಸಿನಲ್ಲಿ ಸೆರೆನಾ ಎಲ್ಲರೂ ಸೈ ಎನ್ನುವಂತಹ ಸಾಧನೆ ಮಾಡಿದ್ದಾರೆ. ಸೆರೆನಾ ಸತತ 309 ವಾರ ಅಗ್ರ ಶ್ರೇಯಾಂಕ ಹೊಂದಿದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದಕ್ಕೂ ಮೊದಲೆರಡು ಸ್ಥಾನಗಳಲ್ಲಿ ಸ್ಟೆಫಿ ಗ್ರಾಫ್ (377), ಮಾರ್ಟಿನಾ ನವರಾಟಿಲೋವಾ (332) ಇದ್ದಾರೆ.

ಸೆರೆನಾ ಒಟ್ಟು 67 ಗ್ರ್ಯಾನ್‍ಸ್ಲಾಮ್ ಟೂರ್ನಿಗಳಲ್ಲಿ ಭಾಗವಹಿಸಿದ್ದು 23 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಒಲಿಂಪಿಕ್ಸ್‍ನಲ್ಲಿ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಒಂದು, ಡಬಲ್ಸ್‍ನಲ್ಲಿ ಮೂರು ಚಿನ್ನ ಗೆದ್ದಿದ್ದಾರೆ. ಇಎಸ್ಪಿ ಎನ್ ಮ್ಯಾಗಜಿನ್ ಮುಖಪುಟಕ್ಕಾಗಿ ಅಗ್ರ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್ ನೀಡಿದ ಭಂಗಿಗೆ ಎಲ್ಲಡೆ ಟೀಕೆಗಳು ಕೇಳಿ ಬಂದವು. ಆದರೂ ಛಲ ಬಿಡದ ಸೆರೆನಾ ತಮ್ಮ ಕ್ಷಮತೆಯನ್ನು ಜಗತ್ತಿಗೆ ಪ್ರದರ್ಶಿಸಿದರು.

Also Read: ವಿಜಯ್ ಸಂಕೇಶ್ವರ್-ರವರು ನಡೆದುಬಂದ ಹಾದಿ ಎಲ್ಲರಿಗು ಪ್ರೇರಣಿಯ!!