ಶಾಕಾಂಬರಿ ದೇವಿಯ ಮಹಾತ್ಮೆ ಹಾಗು ಪುರಾಣಗಳನ್ನು ತಿಳಿದುಕೊಂಡು ಆಕೆಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪುನೀತರಾಗಿ..!!

0
1763

Kannada News | Karnataka Temple History

ಶಾಕಾಂಬರಿ ದೇವಿ

ಬನಶಂಕರಿಯಲ್ಲಿ ನೆಲೆಸಿರುವ ಶಾಕಾಂಬರಿ ದೇವಿಯು ಮೂಲತಃ ಪಾರ್ವತಿ ದೇವಿಯ ಇನ್ನೊಂದು ಅವತಾರವೆಂದು ನಂಬಲಾಗಿದೆ. ನಂಬಿಕೆಗಳ ಪ್ರಕಾರ ಶಾಕಾಂಬರಿ ದೇವಿ, ಹಸಿದುಕೊಂಡಿರುವ ಭಕ್ತರಿಗೆ ಸಸ್ಯಾಹಾರಿ ಆಹಾರವನ್ನು ನೀಡಿ ತೃಪ್ತಿ ಪಡಿಸುತ್ತಾಳೆ ಎಂದು. ಶಾಕಾಂಬರಿ ದೇವಿಯನ್ನು ’ತರಕಾರಿಗಳನ್ನು ಧರಿಸಿರುವ ದೇವಿ’ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಯಾವುದೇ ಸಸ್ಯಾಹಾರಿ ಆಹಾರವನ್ನು ಶಾಕಾಂಬರಿ ದೇವಿಗೆ ಪ್ರಸಾದವೆಂದು ಪರಿಗಣಿಸಲಾಗುತ್ತದೆ.

ಕರ್ನಾಟಕದಲ್ಲಿ ಮುಖ್ಯವಾದ ಶಾಕಾಂಬರಿ ದೇವಸ್ಥಾನಗಳು ಬಾದಾಮಿ ಹಾಗು ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿದೆ. ಈ ದೇವಸ್ಥಾನಗಳಲ್ಲಿ ಇವಳನ್ನು ಬನಶಂಕರಿ ದೇವಿ ಎಂದು ಕರೆಯಲಾಗಿದ್ದು, ಇಲ್ಲಿ ಬನದ ಅಷ್ಟಮಿ ಬಹಳ ಅದ್ಧೂರಿಯಾದ ಆಚರಣೆ. ಬನಶಂಕರೀ ನವರಾತ್ರಿ ಅಥವಾ ಶಾಕಂಭರೀ ನವರಾತ್ರಿ ಆಚರಿಸುತ್ತಾರೆ. ಬನದ ಹುಣ್ಣಿಮೆಯ ನವರಾತ್ರಿಯು ಪ್ರತಿ ವರ್ಷ ಪುಷ್ಯ ಶುಕ್ಲ ಅಷ್ಟಮಿ (ಬನದ ಅಷ್ಟಮೀ)ಯಿಂದ ಪುಷ್ಯ ಪೂರ್ಣಿಮೆಯ(ಬನದ ಹುಣ್ಣಿಮೆ) ವರೆಗೆ ಪ್ರಾರಂಭವಾಗುವುದು. ಏಕಾದಶಿ ದಿನದಂದು ಏಕಾದಶ ರುದ್ರರಿಂದ ಪೂಜಿತಳಾದ ಪರಮೇಶ್ವರಿಯನ್ನು ಪೂಜಿಸಬೇಕು. ದ್ವಾದಶೀ ದಿನದಂದು ಆದಿತ್ಯ ಮಂಡಲಸ್ವಳಾದ ಜಗನ್ಮಾತೆಯನ್ನು ಪೂಜಿಸಬೇಕು. ಚತುದರ್ಶಿ ದಿನದಂದು ಸಿದ್ಧಿಯನ್ನು ಕೊಡುವ ಪ್ರಣವ ಸ್ವರೂಪಿ ದೇವಿಗೆ ವಿವಿಧ ರೀತಿಯ 108 ತರಕಾರಿಗಳನ್ನು ಸಂಗ್ರಹಿಸಿ, ಮುಂಜಾನೆಯಿಂದಲೇ ಮಡಿಯುಟ್ಟು ದೇವಿಗೆ ಶಾಕಾಂಬರಿ ಅಲಂಕಾರ ಮಾಡಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು 108 ತರಕಾರಿಗಳ ಪಲ್ಯವನ್ನು ಮಾಡಿ ಶಾಕಾಂಬರಿಗೆ ನೈವೇದ್ಯ ಮಾಡಬೇಕು. ಕೊನೆಯ ದಿನವೇ ಬನದ ಹುಣ್ಣಿಮೆ.

ಪಾರ್ವತಿ ದೇವಿಯು ಶಾಕಾಂಬರಿ ದೇವಿಯಾಗಿ ಅವತರಿಸಿದ ಹಿಂದಿನ ಪೌರಾಣಿಕ ಕಥೆ

ಹಿಂದೆ ದುರ್ಗಮಾಸುರ ಎಂಬ ರಕ್ಕಸನೊಬ್ಬನಿದ್ದ. ಅವನಿಗೆ ಎಲ್ಲ ವೇದಗಳನ್ನು ತಾನೆ ವಶಪಡಿಸಿಕೊಳ್ಳಬೇಕೆಂಬ ಆಸೆಯಿಂದ ಹಿಮಾಲಯಕ್ಕೆ ಹೋಗಿ ನೀರು, ಆಹಾರಗಳಿಲ್ಲದೆ ಕೇವಲ ಗಾಳಿಯನ್ನು ಸೇವಿಸುತ್ತ ಒಂದು ವರ್ಷಗಳ ಕಾಲ ಬ್ರಹ್ಮನ ಕುರಿತು ಕಠಿಣ ತಪಸ್ಸನ್ನು ಮಾಡಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವರು ಎಲ್ಲ ವೇದಗಳನ್ನು ಅವನ ವಶಕ್ಕೆ ಕೊಟ್ಟ. ಇದರ ಪರಿಣಾಮವಾಗಿ ಭೂಲೋಕದಲ್ಲಿ ಎಲ್ಲ ಋಷಿ ಮುನಿಗಳು, ಸಾಧು ಸಂತರು ವೇದಗಳು ಮಾಯವಾಗಿ ಪ್ರತಿನಿತ್ಯ ನಡೆಯುವ ದೇವತಾ ಕಾರ್ಯಗಳು, ವಿಧಿ ವಿಧಾನಗಳು ಯಜ್ಞ ಯಾಗಾದಿಗಳು ನಿಂತು ಹೋದವು.

ದೇವತಾ ಕಾರ್ಯಗಳು, ವಿಧಿ ವಿಧಾನಗಳು ಯಜ್ಞ ಯಾಗಾದಿಗಳಿಂದ ದೇವತೆಗಳಿಗೆ ಸಿಗುತ್ತಿದ್ದ ಹವಿಸ್ಸು ನಿಂತು, ಕ್ರಮೇಣ ದೇವತೆಗಳು ತಮ್ಮ ತಮ್ಮ ಶಕ್ತಿಗಳನ್ನು ಕಳೆದುಕೊಳ್ಳುತ್ತ ಅಶಕ್ತರಾಗತೊಡಗಿದರು. ಇದರ ಪರಿಣಾಮವಾಗಿ ಭುಲೋಕದೆಲ್ಲೆಡೆ ಅರಾಜಕತೆ ಉಂಟಾಯಿತು. ಒಂದು ಹನಿಯೂಮಳೆಯಾಗ ತೊಡಗಲಿಲ್ಲ. ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ಬಂದೊದಗಿತು. ಇದರಿಂದ ದೇವಾನು ದೇವತೆಗಳು ಒಂದಾಗಿ ಸಮಚಿತ್ತದಿಂದ ಆ ಶಕ್ತಿ ದೇವಿಯನ್ನು ಕುರಿತು ಪ್ರಾರ್ಥಿಸಿದರು.

ಪಾರ್ವತಿಯು ಪ್ರಸನ್ನಳಾಗಿ ಪ್ರತ್ಯಕ್ಷಳಾದಳು. ಸ್ವತಃ ಪಾರ್ವತಿಯು ಭೂಲೋಕದ ನೈಜ ಸ್ಥಿತಿಯತ್ತ ತನ್ನ ದೃಷ್ಟಿಯನ್ನು ನೋಡಿದಾಗ ಭೂಲೋಕದಲ್ಲಿ ಹಸಿವಿನಿಂದ ಬಳಲುತ್ತಿದ್ದ ಮನುಷ್ಯ ಹಾಗೂ ಪ್ರಾಣಿಗಳ ಆಕ್ರಂದನ ದೇವಿಯ ಮನಸ್ಸನ್ನು ಹಿಂಡಿದವು. ಇದರ ಪರಿಣಾಮವಾಗಿ ದೇವಿಯು ಅಗಾಧ ಸ್ವರೂಪ ಪಡೆದು ಕಣ್ಣಿರನ್ನು ಹರಿಸತೊಡಗಿದಳು. ಇದರಿಂದಾಗಿ ಎಲ್ಲೆಡೆ ಧಾರಾಕಾರವಾಗಿ ಮಳೆಯು ಸುರಿಯತೊಡಗಿತು. ಎಲ್ಲ ಕೆರೆ-ತೊರೆ, ನದಿಗಳು ಮತ್ತೆ ಮೈದುಂಬಿ ಹರಿಯತೊಡಗಿದವು. ದೇವಿಯು ಪ್ರಕೃತಿಯ ರೂಪ ಧರಿಸಿ ಎಲ್ಲ ರೀತಿಯ ಸಸ್ಯ ಹಾಗೂ ಹಣ್ಣುಗಳನ್ನು ಚಿಗುರಿಸಿ ಎಲ್ಲರಿಗೂ ಆಹಾರ ನೀಡತೊಡಗಿದಳು. ಶಾಕಾಂಬರಿ ಹೀಗೆ ಪ್ರತಿಯೊಬ್ಬರಿಗೂ ಪ್ರಕೃತಿಯು ಒದಗಿಸುವ ಶಾಕಾಹಾರದ ಆಹಾರಗಳನ್ನು ಪ್ರತಿಯೊಬ್ಬರಿಗೂ ಹಸಿವು ನೀಗಿಸುವ ದೃಷ್ಟಿಯಿಂದ ಕೊಡುತ್ತಿದ್ದುದರಿಂದ ಆ ದೇವಿಗೆ ಶಾಕಾಂಬರಿ ದೇವಿ ಎಂಬ ಹೆಸರು ಬಂದಿತು.

Also Read: ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ..!!