ಕನ್ನಡ ಚಿತ್ರರಂಗ ಕಂಡ ಮಹೋನ್ನತ ನಟ, ನಿರ್ದೇಶಕ, ನಿರ್ಮಾಪಕ ದಿವಂಗತ ಶಂಕರ್ ನಾಗ್ ಅವರ ಬಗ್ಗೆ ನಿಮಗೆಷ್ಟು ಗೊತ್ತು???

0
1334

ಕನ್ನಡ ಚಿತ್ರರಂಗ ಕಂಡ ಒಬ್ಬ ಪ್ರತಿಭಾವಂತ ನಟರಲ್ಲಿ ಶಂಕರ್ ನಾಗ್ ಕೂಡ ಒಬ್ಬರೂ. ಅತಿ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಾಧನೆಯನ್ನು ಮಾಡಿ ಕನ್ನಡ ಚಿತ್ರರಂಗದ ಹಿರಿಮೆ ಹೆಚ್ಚಿಸುವಲ್ಲಿ ಅಗ್ರಗಣ್ಯರು ಇವರು ಎಂದರೆ ತಪ್ಪಾಗಲಾರದು. ತಮ್ಮ ಅಭಿಮಾನಿಗಳಿಂದ ಆಟೋ ರಾಜ, ಶಂಕರಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಇವರು ತಮ್ಮ ಛಾಪನ್ನು ಎಲ್ಲರ ಮನದಲ್ಲೂ ಅಚ್ಚೋತ್ತಿದ್ದಾರೆ.

source: thehindu.com

ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಊರಿನಲ್ಲಿ ಆನಂದಿ ಮತ್ತು ಸದಾನಂದ ನಾಗರಕಟ್ಟೆ ದಂಪತಿಗಳಿಗೆ ೩ ನೇ ಸಂತಾನವಾಗಿ ಜನಿಸಿ, ಅಣ್ಣ ಅನಂತನಾಗ್ ಮತ್ತು ಅಕ್ಕ ಶ್ಯಾಮಲಾ ರವರ ಮುದ್ದಿನ ತಮ್ಮನಾಗಿ ಬೆಳೆದರು.

source: jamuura.com

ಅಣ್ಣನಂತೆ ತಮ್ಮನೂ ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದ ಇವರು ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ತಮ್ಮ ಮೊದಲ ಚಿತ್ರದ ಅಭಿನಯಕ್ಕೆ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ಅದಾದ ನಂತರ ನಾಗ್ ಅವರು ಹಿಂತುರಿಗಿ ನೋಡಲೇ ಇಲ್ಲ . ೧೨ ವರ್ಷಗಳಲ್ಲಿ ಸುಮಾರು ೯೦ ಚಿತ್ರಗಳಲ್ಲಿ ನಟಿಸಿ, ಮಿಂಚಿನ ಓಟ, ಜನುಮ ಜನುಮದ ಅನುಬಂಧ, ಗೀತಾ ಇತರ ಸಿನಿಮಾಗಳನ್ನೂ ನಿರ್ದೇಶಿಸಿ ನಿರ್ಮಾಣ ಮಾಡಿದರು.

ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ “ಅಂಜು ಮಲ್ಲಿಗೆ”, “ನೋಡಿ ಸ್ವಾಮಿ ನಾವಿರೋದು ಹೀಗೆ” ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ನಿರ್ದೇಶಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.

ಶಂಕರ್ ನಾಗ್ ಅವರದು ಪ್ರೇಮವಿವಾಹ. ನಾಟಕರಂಗದಲ್ಲಿ ಪರಿಚಯವಾಗಿದ್ದ ಅರುಂಧತಿಯವರನ್ನು ಮದುವೆಯಾದರು. ಇಬ್ಬರಿಗೂ ಕಾವ್ಯ ಎಂಬ ಮಗಳಿದ್ದಾರೆ. ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಅನೇಕ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂಬುದರ ಆಶಯವೆ ಇಂದು ”ರಂಗಶಂಕರ ” ಸ್ಥಾಪನೆಗೆ ಬುನಾದಿಯಾಗಿದೆ.

ನಂದಿ ಬೆಟ್ಟಕ್ಕೆ ರೋಡ್ ವೇ, ಬೆಂಗಳೂರಿಗೆ ಮೆಟ್ರೋ ರೈಲು ಹಾಗು ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದು ನಮ್ಮ ಶಂಕರ್ ನಾಗ್.

ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭದ ವೇಳೆ ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು . ಇಡೀ ಚಿತ್ರೋಧ್ಯಮವನ್ನು ಅತೀ ಕಡಿಮೆ ಸಮಯದಲ್ಲಿ ತನ್ನತ್ತಾ ವಾಲುವಂತೆ ಮಾಡಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರೋಧ್ಯಮ ಅನಾಥ ವಾಯಿತೆಂದರೆ ತಪ್ಪಾಗಲಾರದು.

ಇಂದು ಶಂಕರ್ ನಾಗ್ ವೃತ್ತದ ಬಳಿಯೋ, ಆಟೋಗಳ ಹಿಂದೆ ಅವರ ಭಾವಚಿತ್ರವನ್ನು ನೋಡಿದಾಗ ಅವರ ಹಾಡು/ಚಿತ್ರಗಳನ್ನು ನೋಡಿದಾಗ ಅವರು ಇದ್ದಿದ್ದರೆ ಕನ್ನಡ ಚಿತ್ರರಂಗದ ದೆಶೆಯೇ ಬದಲಾಗುತ್ತಿತ್ತು ಅನ್ನಿಸುವುದಂತೂ ಸುಳ್ಳಲ್ಲ..ಏನಂತೀರಾ???