ಶಿರಡಿ ಶ್ರೀ ಸಾಯಿ ಬಾಬಾರವರ ಹಿನ್ನಲೆ ಮತ್ತು ಅವರ ಭೋದನೆಗಳು ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಿ..!

0
1564

Kannada News | Karnataka Temple History

ಶಿರಡಿಯು ಭಾರತದ ಒಂದು ಮುಖ್ಯ ಶ್ರದ್ಧಾ ಭಕ್ತಿ ಕೇಂದ್ರ. ಅಷ್ಟೇ ಅಲ್ಲ ಇದು ಹಿಂದೂ ಮುಸ್ಲೀಮರ ಸಾಮರಸ್ಯದ ಆರಾಧನಾ ಕೇಂದ್ರವೂ ಕೂಡ ಹೌದು. ಇಲ್ಲಿ ಸಾಯಿ ಬಾಬಾರನ್ನು ಪೂಜಿಸಲಾಗುತ್ತದೆ. ಶ್ರೀ ಸಾಯಿಬಾಬಾ ಭಾರತದಲ್ಲೇ ಎಂದೂ ಕಂಡಿರದ ಮಹಾನ್ ಸಂತರಲ್ಲಿ ಒಬ್ಬರು. ಅತ್ಯದ್ಭುತ ಶಕ್ತಿಗಳಿಂದ ಕೂಡಿ ದೇವರ ಅವತಾರ ಎಂದು ಪೂಜಿಸಲ್ಪಡುತ್ತಾರೆ.

ಬಾಬಾರವರ ಹಿನ್ನಲೆ

ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಲ್ಲಿ ಬಾಬಾರವರ ಪಾತ್ರ ಬಹು ದೊಡ್ಡದು. 20 ನೇ ಶತಮಾನದಲ್ಲಿ ಮಹಾನ್ ಸಂತರಾದ ಸಾಯಿ ಬಾಬಾರ ಮನೆ ಶಿರಡಿಯಾಗಿತ್ತು. ಬಾಬಾ ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಶಿರಡಿಯಲ್ಲಿ ಜೀವಿಸಿದ್ದರು, ತಮ್ಮ ಜೀವನದ 50 ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ಇದ್ದರು. ಸಾಯಿಬಾಬಾ ರವರ ನಿಜವಾದ ಹೆಸರಿನ ಹಾಗು ಜನ್ಮ ಸ್ಥಳದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟವಾದ ಉಲ್ಲೇಖಗಳಿಲ್ಲ. ಬಾಬಾರವರು ಮೊದಲು ಎಲ್ಲರ ಮುಂದೆ ಅವರು 16 ನೇ ವಯಸ್ಸಿನಲ್ಲಿ ಒಂದು ಬೇವಿನ ಮರದ ಕೆಳಗೆ ಕಾಣಿಸಿಕೊಂಡಿದ್ದರಂತೆ.

ಸಾಯಿ ಬಾಬಾ ಅವರು ಶಿವನ ಅವತಾರ ಎಂದು ನಂಬಿದ್ದ ಭಕ್ತರಲ್ಲಿ ಅವರು ‘ದೇವರ ಮಗು’ ಎಂದೇ ಪ್ರಖ್ಯಾತರಾಗಿದ್ದರು. ಅಂದು ಬಾಬಾರವರನ್ನು ಎಲ್ಲರೂ ಸಾಯಿ ಎಂದು ಕರೆಯುತ್ತಿದ್ದರು ‘ಸಾಯಿ’ ಎನ್ನುವ ಪದವು ಪೆರ್ಶಿಯಾ ಭಾಷೆಯಲ್ಲಿ ಸೂಫಿ ಸಂತರುಗಳಿಗೆ ಕೊಡುತ್ತಿದ್ದ ಒಂದು ಬಿರುದಾಗಿತ್ತು ಹಾಗು ಅದು ‘ಬಡ ವ್ಯಕ್ತಿ ‘ ಎಂಬ ಅರ್ಥ ಸೂಚಿಸುತ್ತದೆ. ಬಂಜಾರ ಭಾಷೆಯಲ್ಲಿ ಸಾಯಿ ಎಂದರೆ ‘ಒಳ್ಳೆಯ’ ಎಂಬ ಅರ್ಥವಿದೆ. ಬಾಬಾ ಎಂದರೆ ಭಾರತೀಯ ಭಾಷೆಯಲ್ಲಿ ತಂದೆಯ ತಂದೆ ಸ್ಥಾನ ಎಂಬರ್ಥವಿದೆ. ಹೀಗಾಗಿ ಸಾಯಿ ಬಾಬಾ ಎಂದರೆ ‘ಒಳ್ಳೆಯ ಗುರು’ ‘ಪವಿತ್ರ ಗುರು’ ‘ಸಂತ ಪಿತಾಮಹ’ ಎಂಬಂತಹ ಅರ್ಥಗಳು ಬರುತ್ತವೆ.

ಬಾಬಾರವರ ಭೋದನೆಗಳು ಮತ್ತು ಆಚರಣೆಗಳು

ಬಾಬಾರವರು ತಮ್ಮ ಸಂಪೂರ್ಣ ಜೀವನವನ್ನು ಬಡವರು ಮತ್ತು ಸಾಮಾಜದ ಕಟ್ಟುಪಾಡುಗಳಿಂದ ನೊಂದವರನ್ನು ಮೇಲೆತ್ತಲು ತಮ್ಮ ಸಂಪೂರ್ಣ ಜೀವನವನ್ನು ಮೀಸಲಿಟ್ಟಿದ್ದರು. ಬಾಬಾರವರ ಒಂದು ಸುಪ್ರಸಿದ್ಧ ವ್ಯಾಖ್ಯವೆಂದರೆ ‘ಸಬ್ ಕಾ ಮಾಲಿಕ್ ಏಕ್'(ಸರ್ವರ ಮಾಲೀಕನು ಒಬ್ಬನೇ). ಇದು ಹಿಂದೂ, ಇಸ್ಲಾಂ ಹಾಗು ಸೂಫಿ ತತ್ವಗಳನ್ನು ಒಳಗೊಂಡಿದೆ. ಅವರು ಸದಾ ಕಾಲ ಭಕ್ತರಿಗೆ ಕೊಡುತ್ತಿದ್ದ ಅಭಯ ವಾಕ್ಯಗಳೆಂದರೆ “ನನ್ನನ್ನು ನಂಬಿ, ನಿಮ್ಮ ಪ್ರಾರ್ಥನೆಗಳಿಗೆ ನನ್ನಲ್ಲಿ ಉತ್ತರಗಳಿವೆ” ಹಾಗು “ಅಲ್ಲಾ ಮಾಲಿಕ್ “. ಅವರು ತಮ್ಮ ಪೂರ್ತಿ ಜೀವನವನ್ನು ಎಲ್ಲಾ ಧರ್ಮಗಳ ನಡುವೆ ಸಾರ್ವತ್ರಿಕ ಭ್ರಾತೃತ್ವ ಮತ್ತು ಶಾಂತಿಯ ಸಂದೇಶವನ್ನು ಬೋಧಿಸುತ್ತಿದ್ದರು.

ಸಾಯಿ ಬಾಬಾ ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆಗಳನ್ನು, ಜಾತಿ ವಾದಗಳನ್ನು ವಿರೋಧಿಸುತ್ತಿದ್ದರು. ಯಾವುದೇ ಒಂದು ಧರ್ಮಕ್ಕೆ ಕಟ್ಟು ಬೀಳದೆ ಧರ್ಮಾತೀತವಾದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಮುಸ್ಲೀಮರ ರಂಜಾನ್ ಹಬ್ಬವನ್ನು, ಹಿಂದೂಗಳ ರಾಮ ನವಮಿಯನ್ನು ಸಾಂಗವಾಗಿ ಆಚರಿಸುತ್ತಿದ್ದರು. ಯಾವಾಗಲು ತಮ್ಮ ಅನುಯಾಯಿಗಳಿಗೆ ಸರಳ ಜೀವನವನ್ನೇ ನಡೆಸುವಂತೆ ಹಾಗು ತಮಗೆ ಇದ್ದುದರಲ್ಲಿಯೇ ದಾನ ಮಾಡಿ ಹಂಚಿ ತಿನ್ನುವ ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಕರೆ ಕೊಟ್ಟಿದ್ದರು. ದೇವರಿದ್ದಾನೆ ಎಂದು ಜನತೆಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಬಾಬಾ ಅವರು ಹಲವಾರು ಪವಾಡಗಳನ್ನು ಮಾಡಿದರು. ರೋಗ ಶಮನಗೊಳಿಸಿದರು. ತಮ್ಮ ಭಕ್ತರಿಗೆ ನೈತಿಕ ಆತ್ಮಬಲ ಮತ್ತು ಭೌತಿಕ ಬಲವನ್ನು ಒದಗಿಸಿದರು. ಎಲ್ಲಾ ಸಮುದಾಯಗಳಲ್ಲಿ ಏಕತೆ ಮತ್ತು ಸೌಹಾರ್ದತೆ ಮೂಡಿಸಲು ಶ್ರಮಿಸಿದರು.

Also Read: ವಿಶೇಷವಾದ “ಯೋನಿ” ರೂಪದಲ್ಲಿ ಪೂಜಿಸುವ ಕಾಮಾಕ್ಯ ದೇವಿಯ ದರ್ಶನ ಮಾಡಿದರೆ ನಿಮ್ಮೆಲ್ಲಾ ಕಷ್ಟಗಳು ದೂರವಾಗಿ ಮೋಕ್ಷ ಪ್ರಾಪ್ತಿಯಾಗುತ್ತಂತೆ..!