ಶ್ರೀ ಶಿವಕುಮಾರ ಸಿದ್ದಗಂಗಾ ಸ್ವಾಮೀಜಿಗೆ 110ನೇ ಜನ್ಮದಿನೋತ್ಸವ

0
473

ಸಿದ್ದಗಂಗಾ ಮಠಾಧೀಶ­ರಾದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಏ. 1ರಂದು 110ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ  ಜನ್ಮದಿನೋತ್ಸವವನ್ನು ಮಠದ ಆವರಣದಲ್ಲಿ ಆಯೋಜಿಸಲಾಗಿದೆ.

ರಾಜ್ಯದ ವಿವಿಧ ಭಾಗಗಳ ಮಠಾ­ಧೀಶರು, ಭಕ್ತರು ಮಠಕ್ಕೆ ಆಗಮಿಸಲಿ­ದ್ದಾರೆ. ಮಠದಿಂದ ಯಾರಿಗೂ ಅಧಿ­ಕೃತ ಆಹ್ವಾನ ನೀಡಿಲ್ಲ. ಕನಕಪುರ ಮಠ, ಬೇಲಿ ಮಠ ಸೇರಿ ವಿವಿಧ ಮಠ­ಗಳಿಂದ ಸ್ವಾಮೀಜಿಗಳು ಆಗಮಿಸಿ ಆಶೀರ್ವಾದ ಪಡೆಯಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಕರ್ನಾಟಕ ರತ್ನ ಡಾ|| ಶ್ರೀ.ಶಿವಕುಮಾರ ಸ್ವಾಮಿಗಳು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು. ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿರುವರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ.

ಸಿದ್ದಗಂಗಾ ಸ್ವಾಮೀಜಿಗೆ ಅದ್ದೂರಿ ಗುರುವಂದನೆ

‘ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವವನ್ನು ಏಪ್ರಿಲ್ 1ರಂದು ಮಠದ ಆವರಣದಲ್ಲಿ ಆಯೋಜಿಸಲಾಗಿದೆ’ ಎಂದು ಸಿದ್ದಗಂಗಾ ತಾಂತ್ರಿಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಿಗ್ಗೆ 10.30ಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು’ ಎಂದರು.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ  ‘ಸಂದೇಶಸಿರಿ’ ಗ್ರಂಥ ಬಿಡುಗಡೆ ಮಾಡುವರು. ಸಿದ್ದಗಂಗಾಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ನುಡಿನಮನ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.