ಶಿವಪೂಜೆಗೆ ಸಲ್ಲದ ಕೇದಗೆ ಹೂವು

0
2204

ಶಿವನು ತ್ರಿಲೋಕ ಸಂಚಾರಿ ಮತ್ತು ಬ್ರಹ್ಮಸ್ವರೂಪ ಎಂದು ಈ ಜಗತ್ತಿಗೆ ತೋರಿಸಲು ಭೂಮಿಯಿಂದ ಆಕಾಶದವರೆಗೆ ಎತ್ತರವಾಗಿ ಶಿವಲಿಂಗದ ರೂಪದಲ್ಲಿ ಜ್ಯೋತಿಯಾಗಿ ನಿಂತವ. ಶಿವನ ವಿಶೇಷ ಮಂತ್ರ ‘ನಮಃ ಶಿವಾಯ’ ಇದಕ್ಕೆ ಪಂಚಾಕ್ಷರಿ ಮಂತ್ರ ಎನ್ನುವರು. ಈ ಮಂತ್ರದಲ್ಲಿ ಪೃಥ್ವಿ, ಆಪ್, ತೇಜ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳು ಮತ್ತು ಗಂಧರಸ, ರೂಪ, ಸ್ಪರ್ಶ ಮತ್ತು ಶಬ್ದವೆಂಬ ಪಂಚತನ್ಮಾತ್ರೆಗಳು ಸೇರಿವೆ. ಶಿವನ ದರ್ಶನ ಮಾಡಬೇಕಾದರೆ ನಂದೀಶ್ವರನ ಹಿಂಭಾಗವನ್ನು ಸ್ಪರ್ಶಿಸುತ್ತಾ ಅದರ ಶೃಂಗಗಳ ಮಧ್ಯದಿಂದ ಶಿವನನ್ನು ಕಾಣಬೇಕು. ಇದರ ಒಳಾರ್ಥ ಪ್ರಾಣಿಗಳಲ್ಲೂ ಶಿವನನ್ನು ಕಾಣು ಎಂದು. ಆದರೆ ಶಿವಪೂಜೆಗೆ ಕೇದಗೆ ಹೂ ಅನ್ನು ಬಳಸಬಾರದು.

ಪುರಾಣಿಕ ಹಿನ್ನಲೆ:

ಒಮ್ಮೆ ವಿಷ್ಣು ಮತ್ತು ಬ್ರಹ್ಮನಿಗೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂದು ವಾಗ್ವಾದ ಪ್ರಾರಂಭವಾಗಿ ವಿಕೋಪಕ್ಕೆ ತಿರುಗಿತು. ಅವರು ಒಬ್ಬರ ಮೇಲೆ ಮತ್ತೊಬ್ಬರು ಯುದ್ಧ ಮಾಡಲು ಶುರು ಮಾಡಿದರು. ಪರಸ್ಪರರ ಮೇಲೆ ಆಯುಧ ಪ್ರಯೋಗ ನಡೆಸಿದರು. ಇದರಿಂದ ಮೂರು ಲೋಕಗಳೂ ಹಾನಿಗೀಡಾದವು. ಆಗ ದೇವತೆಗಳೆಲ್ಲ ಶಿವನ ಮೊರೆ ಹೋದರು. ಆಗ ಶಿವನು ಲಿಂಗರೂಪ ಧರಿಸಿ ವಿಷ್ಣು ಮತ್ತು ಬ್ರಹ್ಮರ ನಡುವೆ ಕಾಣಿಸಿಕೊಂಡ. ತಮ್ಮ ನಡುವೆ ಇದ್ದಕ್ಕಿದ್ದಂತೆ ಉದ್ಭವವಾದ ಲಿಂಗವನ್ನು ಕಂಡು ಅಚ್ಚರಿಗೊಳಗಾದ ಬ್ರಹ್ಮನು ಲಿಂಗದ ಮೇಲ್ಭಾಗ, ವಿಷ್ಣು ಕೆಳಭಾಗ ಅನ್ವೇಷಿಸಲು ಹೊರಟರು. ಆದರೆ ಅದರ ಅಂತ್ಯವನ್ನೇ ಕಾಣಲಿಲ್ಲ. ಆಗ ಮೇಲ್ಭಾಗದಲ್ಲಿದ್ದ ಬ್ರಹ್ಮನಿಗೆ ಕೇದಗೆ ಹೂವೊಂದು ಕೆಳಗೆ ಬೀಳುತ್ತಿರುವುದು ಕಂಡಿತು. ಆಗ ಬ್ರಹ್ಮನು ಲಿಂಗದ ಅಂತ್ಯವನ್ನು ತಾನು ಕಂಡದ್ದಾಗಿ ತಿಳಿಸಬೇಕೆಂದು ಕೇದಗೆಯನ್ನು ಕೇಳಿಕೊಂಡ. ಕೇದಗೆ ಸುಳ್ಳು ಹೇಳಲು ಒಪ್ಪಿ ವಿಷ್ಣುವಿನ ಬಳಿ ಬಂದು ಬ್ರಹ್ಮನು ಲಿಂಗದ ಅಂತ್ಯವನ್ನು ಕಂಡಿದ್ದಾಗಿ ತಿಳಿಸಿತು. ಆಗ ವಿಷ್ಣು ಸೋಲೊಪ್ಪಿಕೊಂಡು ಬ್ರಹ್ಮನೇ ಶ್ರೇಷ್ಠನೆಂದ. ಇದು ಶಿವನಿಗೆ ತಿಳಿಯಿತು. ಕೇದಗೆ ಹೂವಿನ ಮೇಲೆ ಆತನಿಗೆ ಸಿಟ್ಟು ಬಂದಿತು. ಸುಳ್ಳು ಹೇಳಿದ್ದಕ್ಕಾಗಿ ಆ ಹೂವಿಗೆ ಶಿಕ್ಷೆ ಕೊಡಲು ನಿರ್ಧರಿಸಿ ನನ್ನ ಪೂಜೆಗೆ ಯಾರೂ ಕೇದಗೆ ಹೂವನ್ನು ಉಪಯೋಗಿಸಬಾರದು ಎಂದು ಶಾಪವಿತ್ತ. ಅಂದಿನಿಂದ ಶಿವ ಪೂಜೆಗೆ ಯಾರೂ ಕೇದಗೆ ಹೂವು ಬಳಸುವುದಿಲ್ಲ.