ಯಾವುದೇ ಪೂಜೆ ಪುನಸ್ಕಾರಗಳಲ್ಲಿ ಈ ಷೋಡಶೋಪಚಾರ ಪೂಜೆಯನ್ನು ಮಾಡಲೇಬೇಕು. ಆರಾಧಕರು ಅವರವರ ಸಂಪ್ರದಾಯಾನುಸಾರವಾಗಿ. ಆಯಾ ವಿಧಾನವನ್ನು ಅನುಸರಿಸಿ ಪೂಜೆ ಮಾಡುತ್ತಾರೆ, ಯಾವುದೇ ಮತಾನುಗುಣವಾಗಿ ಮಾಡಿದರೂ, ಯಾವ ದೇವರನ್ನು ಪೂಜಿಸಿದರೂ, ಷೋಡಶೋಪಚಾರ ಪೂಜಾ ವಿಧಾನ ಕ್ರಮ ಮಾತ್ರ ಒಂದೇ.
ಷೋಡಶೋಪಚಾರ ಪೂಜೆಯಲ್ಲಿ ಮುಖ್ಯವಾದ ಅಂಗಗಳು ಹದಿನಾರು. ಅವು ಯಾವುವು ಈ ಪೂಜೆಯನ್ನು ಯಾವ ಕಾರಣಕ್ಕೆ ಮಾಡಬೇಕು ಎಂದು ತಿಳಿದುಕೊಳ್ಳಿ.
1.ಆವಾಹನೆ : ಎಂದರೆ ದೇವರ ಮೂರ್ತಿಯಾಗಲಿ, ಕಲಶವನ್ನಗಲಿ ಪ್ರತಿಸ್ಥಾಪಿಸಿ ಹಸನ್ಮುಖನಾಗು ಮತ್ತು ಪೂಜೆಯನ್ನು ಸ್ವಿಕರಿಸು ಎಂದು ಹೇಳಬೇಕು.
2. ಆಸನ : ದೇವರಿಗೆ ಹೂವುಗಳನ್ನು ಆಸನವೆಂದು ಭಾವಿಸಿ ದೇವರಿಗೆ ಅರ್ಪಿಸಬೇಕು.
3. ಪಾದ್ಯಂ : ಮಂತ್ರಜಲವನ್ನು ಉದ್ದರಣೆಯಲ್ಲಿ ದೇವರ ಪಾದ ತೊಳೆದಂತೆ ಭಾವಿಸಿ ಜಲವನ್ನು ಪಾತ್ರೆಗೆ ಬಿಡಬೇಕು.
4. ಅರ್ಘ್ಯ : ಉದ್ದರಣೆಯಲ್ಲಿ ಜಲ ತೆಗದುಕೊಂಡು ದೇವರಿಗೆ ಕೈ ತೊಳೆದಂತೆ ಭಾವಿಸಬೇಕು.
5. ಆಚಮನ : ಉದ್ದರಣೆಯಲ್ಲಿ ನೀರನ್ನು ತೆಗೆದುಕೊಂಡು ದೇವರಿಗೆ ಮುಖ ತೊಳೆದಂತೆ ಭಾವಿಸಿ ನೀರನ್ನು ಪಾತ್ರೆಗೆ ಬಿಡಬೇಕು.
6. ಸ್ನಾನ : ದೇವರಿಗೆ ಸುಗಂಧೋದಕದಿಂದ ಸ್ನಾನ ಮಾಡಿಸಿದಂತೆ ಉದ್ದರಣೆಯಲ್ಲಿ ನೀರನ್ನು ಬಿಡಬೇಕು.
7. ವಸ್ತ್ರ : ದೇವರಿಗೆ ಶುಭ್ರ ವಸ್ತ್ರವನ್ನು ತೊಡಿಸಬೇಕು.
8. ಯಜ್ಞೋಪವಿತ : ದೇವರಿಗೆ ಮೂರು ಎಳೆಯ ಉಪವೀತದ ಒಂದು ಜೊತೆ ಆಕಬೇಕು.
9. ಶ್ರೀ ಗಂಧ : ಶುದ್ದವಾದ ತೇದ ಗಂಧವನ್ನು ದೇವರಿಗೆ ಆಕಬೇಕು.
10. ಪುಷ್ಪಂ : ಪರಿಮಳವಾದ ಶುದ್ದ ಹೂಗಳನ್ನು ಅರ್ಪಿಸಬೇಕು.
11. ಧೂಪ : ವಿಶೇಷವಾದ ಊದುಬತ್ತಿ ಹತ್ತಿಸಿ ದೇವರಿಗೆ ಧೂಪವನ್ನು ಆಘ್ರಾಣಿಸಬೇಕು.
12. ದೀಪ : ದೇವರಿಗೆ ತುಪ್ಪದ ಬತ್ತಿಯಿಂದ ಆರತಿಸೇವೆ ಮಾಡಬೇಕು.
13. ನೈವೇದ್ಯ : ದೇವರಿ ಪ್ರಿಯವಾದ ಭಕ್ಷ್ಯಭೋಜ್ಯಗಳಿಂದ ನಿವೇದನೆ ಅಥವಾ ಹಣ್ಣು ಕಾಯಿ ಸಮರ್ಪಿಸಬೇಕು.
14,15. ಪ್ರದಕ್ಷಿಣೆ ನಮಸ್ಕಾರ : ಮಂತ್ರಾಕ್ಷತೆ ಕೈಯಲ್ಲಿ ಇಟ್ಟುಕೊಂಡು ಪ್ರದಕ್ಷಿಣೆ ಮತ್ತು ನಮಸ್ಕಾರ ಮಾಡಬೇಕು.
16. ಉದ್ವಾಸನೆ : ಪೂಜೆ ಮುಗಿದಿದೆ ತಪ್ಪಿದ್ದರೆ ಕ್ಷಮಿಸಿ ಎಂದು ಪೂಜಾಪರಿ ಸಮಾಪ್ತಿ ಮಾಡಬೇಕು ನಂತರ ಸಾತ್ವಕ ತ್ಯಾಗ, ನಮ್ಮನ್ನು ಅರ್ಪಿಸಿಕೊಳ್ಳುವುದು.
ಈ ರೀತಿ ಷೋಡಶೋಪಚಾರ ಪೂಜೆಯನ್ನು ಅನೇಕ ಮಂತ್ರಗಳಿಂದ ದೇವರನ್ನು ಅರಾಧಿಸಬೇಕು.