ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

0
2419

ಪರಶಕ್ತಿಯಾದ ಧಾರೆಯಲ್ಲಿ ಒಂದಲ್ಲ ಒಂದು ಕಾರಣದಿಂದ ಅವತರಿಸಿ ಭುವಿಯ ಜನರ ಕಷ್ಟ ನಷ್ಟಗಳನ್ನು ಪರಿಹರಿಸಿ ಸಕಲರ ಆರಾಧ್ಯ ದೇವಿಯಾಗಿ ನೆಲೆಸಿದ್ದಾಳೆ. ಪುರಾಣದಲ್ಲಿ ಹಲವಾರು ರಕ್ಕಸರ ಸಂಹಾರ ಮಾಡುವುದಕ್ಕಾಗಿ ಅವತರಿಸಿ ವಿವಿಧ ನಾಮದಿಂದ ಕರಿಸಿಕೊಂಡು, ಹಲವು ಸ್ಥಳಗಳಲ್ಲಿ ಶಕ್ತಿಯ ರೂಪದಲ್ಲಿ ಆದಿಶಕ್ತಿಯು ಸರ್ವರ ಪಾಲಿಗೂ ಮಾತೆಯಾಗಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದೇಶದಲ್ಲಿ ಪ್ರಖ್ಯಾತಿ ಪಡೆದಿರುವ ಸುಪ್ರಸಿದ್ಧ ದೇವಾಲಯ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಪೂರಣ ಪ್ರಸಿದ್ಧವಾದದ್ದು. ಹಾಗಾಗಿ ದುರ್ಗಾ ದೇವಿ ಜನಗಳ ಆರಾಧ್ಯ ದೈವ. ಲೋಕಕಲ್ಯಾಣಕ್ಕಾಗಿ ಮಹಾನ್ ಅಸುರರಾದ ಶುಂಭ, ನಿಶುಂಭ ರಾಕ್ಷಸರನ್ನು ಸಂಹರಿಸಿದ ಮಹಾ ಮಾತೇ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ.

ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಹೀಗೆ ಭೂಲೋಕದಲ್ಲಿ ಯಜ್ಞ ಯಾಗಾದಿಗಳು ನೆಡೆಯದೆ ಇದ್ದಾಗ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇತ್ತ ಭೂಲೋಕದಲ್ಲಿ ಮಳೆ ಬೆಳೆ ಇಲ್ಲದೆ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು.

ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ ಜಾಬಾಲಿ ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು.

ಇತ್ತ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತಿದ್ದ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ಸಾವು ಬರದಂತೆ ಕರುಣಿಸು ಎಂದು ಮೊರೆನೀಡುತ್ತಾನೆ. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನು ಉಪದೇಶಿಸಿ ಚಿರಂಜಿವಿಯಾಗಲು ವರ ಕರುಣಿಸುತ್ತಾಳೆ. ಎಲ್ಲ ದೇವತೆಗಳು ಈ ಅಸುರನ ಉಪಠಲ ತಾಳಲಾರದೆ ತ್ರಿಮೂರ್ತಿಗಳ ಜೊತೆಗೂಡಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳುತ್ತಾಳೆ. ಅದರಂತೆ ದೇವಗುರು ಬೃಹಸ್ಪತಿಗಳ ಸಹಾಯದಿಂದ ಅಸುರನ ಬಳಿಗೆ ತೆರಳಿ ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸುತ್ತಾರೆ. ಅಸುರನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳುತ್ತಾಳೆ. ದೇವಿಯ ಮಾಯಾ ರೂಪವನ್ನು ಅರಿತ ಅಸುರ ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದ್ದು ಇವಳೇ ಎಂದು ಭಾವಿಸಿ ದೇವಿಯ ಮೇಲೆ ದಾಳಿಮಾಡುತ್ತಾನೆ.

ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಕೋಪಗೊಂಡ ಅರುಣಾಸುರ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಸಂಹರಿಸಿದಳು. ಹೀಗೆ ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಈ ಕ್ಷೇತ್ರದಲ್ಲಿ ತಾಯಿ ಪ್ರಖ್ಯಾತಿಯಾದಳು. ಇಂದಿಗೂ ಈ ಒಡೆದ ಬಂಡಿಯು ಈ ಕ್ಷೇತ್ರಭಾಗದಲ್ಲಿದ್ದು ಇಂದಿಗೂ ಇದ್ದು ಪ್ರತಿದಿನ ಪೂಜಿಸಲಾಗುತ್ತದೆ.

ನಾಡಿನ ಹಲವಾರು ಭಾಗಗಳಿಂದ ಭಕ್ತರು ಬಂದು ಇಲ್ಲಿ ಸೇವೆಸಲ್ಲಿಸುತ್ತಾರೆ ಅದರಲ್ಲಿ ಹೂವಿನ ಸೇವೆ ಎಂದರೆ ಪುಷ್ಪಾಲಂಕಾರ ಸೇವೆ. ಇದಕ್ಕೆ ಮುಖ್ಯವಾದ ಕಾರಣ ದುಂಬಿಗೆ ಪ್ರಿಯವಾದ ವಸ್ತು ಎಂದರೆ ಹೂ. ಆದುದರಿಂದ ಈ ದೇವಾಲಯದಲ್ಲಿ ಸಾವಿರಾರು ಹೂವುಗಳಿಂದ ಪೂಜಿಸಲಾಗುತ್ತದೆ. ಅದರಲ್ಲಿ ಮಲ್ಲಿಗೆ ಇಲ್ಲಿ ಪರಿಕಲ್ಪವಾದುದು. ಇದರ ಜೊತೆಗೆ ತಾಯಿಗೆ ಇಷ್ಟವಾದ ಇನ್ನೊಂದು ಹರಕೆ ಏನೆಂದರೆ ಪಟ್ಟೆ ಸೀರೆ ಹರಿಕೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪಟ್ಟೆ ಸೀರೆ ನೀಡುವುದಾಗಿ ಹರಿಕೆ ಹೊತ್ತರೆ ಆ ತಾಯಿ ಅವರ ಆಸೆಯನ್ನು ಇದಿರಿಸುತ್ತಲೇ ಅನ್ನುವುದು ಇಲ್ಲಿನ ಭಕ್ತರ ನಂಬಿಕೆ. ಈ ದೇವಾಲಯದಲ್ಲಿ ನಿತ್ಯವೂ ಬರುವ ಭಕ್ತಾದಿಗಳಿಗೆ ಅನ್ನದಾನ ನಡೆಯುತ್ತದೆ. ಊಟ ಮಾಡುವುದೂ ಕೂಡ ಇಲ್ಲಿ ಹರಕೆ ಉಂಟು. ಬರಿ ನೆಲದಲ್ಲಿ ಎಲೆ ಹಾಕದೆ ಊಟಮಾಡುವುದು ಕ್ರಮವುಂಟು.

ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. 6 ಯಕ್ಷಗಾನ ಮೇಳಗಳು ಸೇವಾರೂಪದಲ್ಲಿ ಯಕ್ಷಗಾನ ಬಯಲಾಟ ವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.

ವಿಳಾಸ:
ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ,
ಕಟೀಲು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ

ದಾರಿಯ ವಿವರ:
ಉಡುಪಿ – ಮಂಗಳೂರಿನಿಂದ ಶ್ರೀ ದೇವಾಲಯವನ್ನು ತಲುಪಲು ಮೂಲ್ಕಿ ಅಥವಾ ಮಂಗಳೂರಿನಿಂದ ಬಸ್ಸಿನ ವ್ಯವಸ್ಥೆಗಳು ಇವೆ.

Also read: ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ಸ್ಥಳ ಪುರಾಣ/ಉದ್ಬವದ ಹಿನ್ನೆಲೆ…!!