ಶಾಂತಿ ಸೌಹಾರ್ದತೆಯ ಸಾರುವ-ರಂಜಾನ್ ಹಬ್ಬದ ಮಹತ್ವ

0
1898

ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾಗಿರುವ ಮಾಸ ಎಂದರೆ ರಂಜಾನ್ ಅಥವಾ ರಮಧಾನ್. ಚಂದ್ರನ ಚಲನೆಯನ್ನು ಆಧರಿಸಿದ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಬತ್ತನೆಯ ತಿಂಗಳಾಗಿರುವ ರಮಧಾನ್, ಹೆಚ್ಚಿನವರು ಅಂದುಕೊಂಡಿದ್ದಂತೆ ಉಪವಾಸದ ತಿಂಗಳಾಗಿದೆ. ವಾಸ್ತವವಾಗಿ ಈ ತಿಂಗಳಲ್ಲಿ ಹಗಲಿನ ಸುಮಾರು ಹದಿನಾಲ್ಕು ಗಂಟೆ ಉಪವಾಸವಿರುವುದು ರಂಜಾನ್ ಮಾಸದ ಆಚರಣೆಯ ಒಂದು ಭಾಗವಷ್ಟೇ ಹೊರತು ಉಪವಾಸವೇ ಆಚರಣೆಯಲ್ಲ.

ವಿಶ್ವದಾದ್ಯಂತ ಮುಸ್ಲಿಮ್ ಬಾಂಧವರು ಈ ತಿಂಗಳಿಡೀ ಯಾವುದೇ ಪ್ರಲೋಭನೆಗೆ ಒಳಗಾಗದೇ ಸೂರ್ಯಾಸ್ತದವರೆಗೆ ಕುರಾನ್ ಪಠಣ, ಪ್ರಾರ್ಥನೆ, ದಾನ ಮತ್ತಿತರ ಕೆಲಸಗಳನ್ನು ನಮ್ಮ ನಿತ್ಯದ ಕೆಲಸಗಳೊಂದಿಗೆ ಆಚರಿಸುವುದೇ ನಿಜವಾದ ಉಪವಾಸವಾಗಿದೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ನೆನಪಿಲ್ಲದೇ ಊಟ ಮಾಡಿದರೂ ಆ ಉಪವಾಸ ಸ್ವೀಕೃತವಾಗುತ್ತದೆ! ಆದರೆ ನೆನಪಿದ್ದೂ ಚಿಟಿಕೆ ಉಪ್ಪಿನ ರುಚಿ ನೋಡಿದರೂ ಉಪವಾಸ ಹೋದಂತೆ.

ಇಲ್ಲಿ ರುಚಿ ನೋಡುವುದು ಎಂದರೆ ಉಪವಾಸದ ಅವಧಿಯಲ್ಲಿ ಮನಸ್ಸು ಏನನ್ನೋ ಬಯಸುವುದು. ಇದು ವಾಸನೆ, ಸ್ಪರ್ಶ, ಸುಳ್ಳು ಹೇಳುವುದು, ಲಾಭ ಮಾಡಿಕೊಳ್ಳುವುದು, ಇನ್ನೊಬ್ಬರಿಗೆ ನೋವು ನೀಡುವುದು, ಕಳ್ಳತನ ಮಾಡುವ ಬಯಕೆ, ಲೈಂಗಿಕ ಬಯಕೆ ಮೊದಲಾದ ಎಲ್ಲಾ ಮನಸ್ಸಿಗೆ ಸಂಬಂಧಿಸಿದ ಬಯಕೆಗಳೇ ಆಗಿವೆ. ಈ ಬಯಕೆಗಳನ್ನು ಮೂಲದಲ್ಲಿಯೇ ಹತ್ತಿಕ್ಕುವುದೇ ರಂಜಾನ್ ತಿಂಗಳ ಪ್ರಮುಖ ಉದ್ದೇಶವಾಗಿದೆ.

ಒಂದು ತಿಂಗಳ ಈ ಕಠಿಣ ತರಬೇತಿ ಪಡೆದವರು ವರ್ಷದ ಇನ್ನು ಹನ್ನೊಂದು ತಿಂಗಳೂ ಯಾವ ತಪ್ಪು ಕೆಲಸದ ಬಗ್ಗೆ ಚಿಂತನೆಯನ್ನೂ ಮಾಡುವುದಿಲ್ಲ. ಇದೇ ಅಲ್ಲಾಹನು ತನ್ನ ಮಕ್ಕಳಿಗಾಗಿ ನೀಡಿರುವ ಪಾಠವಾಗಿದೆ. ಬನ್ನಿ ರಂಜಾನ್ ಹಬ್ಬದ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ಓದಿ…

ಇಸ್ಲಾಂ ಕ್ಯಾಲೆಂಡರ್‌ನ ಪ್ರಕಾರ :-

ಇಸ್ಲಾಂ ಕ್ಯಾಲೆಂಡರ್‌ನಲ್ಲಿ ರಂಜಾನ್ ಮಾಸಕ್ಕೇಕೆ ಇಷ್ಟು ಮಹತ್ವ ನೀಡಲಾಗಿದೆ ಎಂದರೆ ಪವಿತ್ರವಾದ ಕುರಾನ್ ಅಲ್ಲಾಹನಿಂದ ಪ್ರವಾದಿ ಮೊಹಮ್ಮದರ ಮೂಲಕ ಭೂಮಿಗೆ ಅವತೀರ್ಣಗೊಳ್ಳಲು ಪೂರ್ಣವಾಗಿ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಅದರ ಪ್ರಪ್ರಥಮ ವಾಕ್ಯಗಳು ಈ ತಿಂಗಳಲ್ಲಿಯೇ ಅವತೀರ್ಣಗೊಂಡುದುದರಿಂದ ರಂಜಾನ್ ಮಾಸಕ್ಕೆ ಅತಿಹೆಚ್ಚಿನ ಮಹತ್ವವಿದೆ.

ರೋಜಾ ಅವಧಿಯಲ್ಲಿ :-

ರಂಜಾನ್‌ ತಿಂಗಳ ರೋಜಾ ಅವಧಿಯಲ್ಲಿ ಕೇವಲ ಅನ್ನಾಹಾರಗಳನ್ನು ತ್ಯಜಿಸುವುದು ಮಾತ್ರ ಉಪವಾಸವಲ್ಲ. ಮೂಲತಃ ಮನಸ್ಸಿನಲ್ಲಿ ಅನ್ನಾಹಾರದ ಸಹಿತ ಯಾವುದೇ ಬಯಕೆಗಳನ್ನು ಹೊಂದದಿರುವುದು, ಸುಳ್ಳು ಆಡದಿರುವುದು, ಕೆಟ್ಟದ್ದನ್ನು ಯೋಚಿಸದಿರುವುದು, ಲೈಂಗಿಕ ಕಾಮನೆಗಳನ್ನು ಕೆರಳಿಸದಿರುವುದು, ಚಾಡಿ ಹೇಳದಿರುವುದು ಮೊದಲಾದವುಗಳಿಂದ ಮನಸ್ಸನ್ನು ನಿಗ್ರಹಿಸುವುದು ಕಡ್ಡಾಯವಾಗಿದೆ. ಅಷ್ಟೇ ಏಕೆ, ಸುವಾಸನೆಯನ್ನು ಅಘ್ರಾಣಿಸುವುದು, ರುಚಿ ನೋಡುವುದು ಮತ್ತು ಉಗುಳು ನುಂಗುವುದನ್ನೂ ರೋಜಾ ಅವಧಿಯಲ್ಲಿ ನಿಷೇಧಿಸಲಾಗಿದೆ.

ಉಪವಾಸದ :-

ಮಹತ್ವ ರಂಜಾನ್‌‌ನ ಉಪವಾಸ ಎಲ್ಲಾ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಆದರೆ ದೈಹಿಕವಾಗಿ ಸಬಲರಲ್ಲದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಗರ್ಭಿಣಿಯರು, ಮಾನಸಿಕ ಸ್ಥಿಮಿತವಿಲ್ಲದಿರುವವರು, ದೈಹಿಕವಾಗಿ ಉಪವಾಸವಿರಲು ಅಸಮರ್ಥರಾಗಿರುವವರು, ಬಾಣಂತಿಯರಿಗೆ ವಿನಾಯಿತಿ ಇದೆ. ಇನ್ನೂ ಪ್ರೌಢಾವಸ್ಥೆಯನ್ನು ತಲುಪಿಲ್ಲದ ಮಕ್ಕಳಿಗೂ ಉಪವಾಸ ಕಡ್ಡಾಯವಲ್ಲ.

ಈದ್ ದಿನಗಳನ್ನು ನಿರ್ಧರಿಸುವುದು ಹೇಗೆ? :-

ರಂಜಾನ್ ತಿಂಗಳ ಮೊದಲದಿನ ಮತ್ತು ಈದ್ ಆಚರಣೆಗೆ ಅಮವಾಸ್ಯೆಯ ಬಳಿಕದ ಪ್ರಥಮ ದಿನದ ಚಂದ್ರನನ್ನು ಕಾಣುವುದು ಅಗತ್ಯವಾಗಿದೆ. ಇದನ್ನು ಮಾನಸಿಕ ಸ್ಥಿಮಿತವಿರುವ ಮತ್ತು ವಯಸ್ಕರು ತಮ್ಮ ಕಣ್ಣಾರೆ ನೋಡಬೇಕಾಗಿದ್ದು ಕನಿಷ್ಟ ಇಬ್ಬರ ಸಾಕ್ಷಿಯ ಅಗತ್ಯವಿದೆ. ಈ ಆಧಾರದ ಮೇಲೆ ರಂಜಾನ್ ಪ್ರಾರಂಭ ಮತ್ತು ಈದ್ ದಿನಗಳನ್ನು ನಿರ್ಧರಿಸಲಾಗುತ್ತದೆ.

ಉಡುಗೆಯ ವಿಚಾರದಲ್ಲಿ :-

ಇಸ್ಲಾಂ ಎಂದಿಗೂ ಮೈಮಾಟವನ್ನು ಪ್ರಚುರಪಡಿಸುವ ಉಡುಗೆಗಳ ಉಪಯೋಗವನ್ನು ನಿಷೇಧಿಸಿದೆ. ಮನೆಯಿಂದ ಹೊರಗಿದ್ದಾಗ ಇತರರು ಈ ಮೈಮಾಟವನ್ನು ತಪ್ಪು ದೃಷ್ಟಿಯಿಂದ ನೋಡಬಹುದಾದ ಸಾಧ್ಯತೆಯನ್ನು ಪರಿಗಣಿಸಿ ಈ ಕಟ್ಟುಪಾಡು ವಿಧಿಸಲಾಗಿದೆ. ಇದು ಇತರರ ಉಪವಾಸವನ್ನೂ ಭಂಗಗೊಳಿಸುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಮೈಮಾಟ ತೋರದ, ಅಪಾರದರ್ಶಕ, ಇಡಿಯ ಮೈಯನ್ನು ಮುಚ್ಚುವ ಉಡುಗೆಗಳನ್ನೇ ತೊಡಿರಿ. ಇರು ಪುರುಷರಿಗೂ, ಮಹಿಳೆಯರಿಗೂ ಸಮಾನವಾಗಿ ಅನ್ವಯಿಸುತ್ತದೆ.

ಆಧಾರ : ಕನ್ನಡ. ಬೋಲ್ಡ್ ಸ್ಕೈ.ಕಾಂ