ಇಂದು ಉತ್ಥಾನ ದ್ವಾದಶಿ, ತುಳಸಿಯ ಹಬ್ಬ. ಈ ಸಂದರ್ಭದಲ್ಲಿ ತುಳಸಿಯ ಮಹಿಮೆಯ ಕುರಿತ ಲೇಖನವಿಲ್ಲಿದೆ….

0
1693

 ಏನು ಧನ್ಯಳೋ ‘ತುಳಸಿ’ ಎಂಥಾ ಮಾನ್ಯಳೋ…

ಬೆಳಕಿನ ಮಾಸ ಕಾರ್ತಿಕ ಶುದ್ಧ ದ್ವಾದಶಿ ಬೃಂದಾವನದಿ ಪವಡಿಸಿದ ಶ್ರೀಮನ್ನಾರಾಯಣನ ಎಚ್ಚರಿಸುವ ದಿನ. ಅಂದೇ ಚಾತುರ್ಮಾಸ್ಯದ ಅಂತ್ಯ. ಅಂದು ತುಳಸಿಗೂ, ಶ್ರೀಮನ್ನಾರಾಯಣನಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುತ್ತಾರೆ. ಈ ದೇವೋತ್ಥಾನದ ದಿನ ಮಾನಿನಿಯರು ಸಿಂಧೂರಾದಿಯಿಂದ ಮನೆಯನ್ನೂ ತುಳಿಸಿ ಕಟ್ಟೆಯನ್ನು ಸಿಂಗರಿಸಿ, ಮಂಟಪ ನಿರ್ಮಿಸಿ, ಅಗಸೆ ಹಾಗೂ ಫಲಸಹಿತವಾದ ಬೆಟ್ಟನೆಲ್ಲಿಯ ಕೊನೆಯನ್ನು ತುಳಸಿ ಕಟ್ಟೆಯಲ್ಲಿ ಸ್ಥಾಪಿಸಿ, ನೆಲ್ಲಿಕಾಯಿಯ ಕೊರೆದು ಬತ್ತಿ ಹಾಕಿ ದೀಪಾರತಿ ಮಾಡುತ್ತಾರೆ.

Also read: ತುಳಸಿ ಮತ್ತು ಶ್ರೀಕೃಷ್ಣನ ವಿವಾಹದ ಹಿಂದಿನ ಧಾರ್ಮಿಕ ಮಹತ್ವ ತಿಳಿಯೋಣವೇ!!

ಉತ್ಥಾನ ದ್ವಾದಶಿಗೆ ಕಿರು ದೀಪಾವಳಿ ಎಂಬ ಹೆಸರೂ ಇದೆ. ಅಂದೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಆನಂದಿಸುತ್ತಾರೆ. ಕಾರ್ತಿಕ ಶುದ್ಧ ದ್ವಾದಶಿಯ ದಿನ ತುಳಸಿಯ ದರ್ಶನದಿಂದ, ತುಳಸಿ ಪೂಜಿಸುವುದರಿಂದ ಸಪ್ತಜನ್ಮಕೃತ ಪಾಪಗಳು ಕಳೆಯುತ್ತವೆ ಎಂಬುದು ಹಿರಿಯರ ನಂಬಿಕೆ. ತುಳಸಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ತುಳಸಿ, ಪೂಜೆಗೂ ಶ್ರೇಷ್ಠ. ಅಂದು ತುಳಸಿಯ ದರ್ಶನ ಮಾತ್ರದಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ.

ತುಳಸಿಯ ಹಿರಿಮೆ:

ತುಳಸಿ ಹುಲುಸಾಗಿ ಬೆಳೆದೆಡೆ ಸೊಳ್ಳೆಗಳು ಇರುವುದಿಲ್ಲ. ತುಳಸಿ ಒಂದು ಔಷಧೀಯ ಸಸ್ಯ. ಮಕ್ಕಳಿಗೆ ಕೆಮ್ಮು ನೆಗಡಿ ಆದರೆ, ತುಳಸಿ ರಸ ಕುಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ. ಶ್ರೀಕೃಷ್ಣ ತುಲಾಭಾರದ ಸಮಯದಲ್ಲಿ ಸತ್ಯಭಾಮಾದೇವಿಯು ಖಜಾನೆಯಲ್ಲಿದ್ದ ನಗ ನಾಣ್ಯವನ್ನೇಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿಹೊಂದುವುದಿಲ್ಲ. ಆದರೆ, ರುಕ್ಮಿಣಿ ಮಾತೆ, ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಶ್ರೀಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದುಷ್ಟಾಂತ.

ತುಳಸಿ ಕೇವಲ ಹಿಂದೂಗಳಿಗೆ ಮಾತ್ರ ಪವಿತ್ರವಲ್ಲ. ತುಳಸಿಯ ಬಗ್ಗೆ ಕ್ರೈಸ್ತರು, ಮುಸಲ್ಮಾನರಿಗೂ ಪೂಜ್ಯ ಭಾವನೆಯಿದೆ. ಕ್ರೈಸ್ತರು ತುಳಸಿ ಗಿಡವನ್ನು ಚರ್ಚ್‌ಗೆ ತೆಗೆದುಕೊಂಡು ಹೋಗಿ ಪೂಜಿಸಿ, ನಂತರ ಮನೆಯಂಗಳದಿ ನೆಟ್ಟು, ತಮ್ಮ ಮುಂದಿನ ಬದುಕು, ಸುಖ, ಶಾಂತಿಯಿಂದಿರಲೆಂದು ಪ್ರಾರ್ಥಿಸುತ್ತಾರೆ. ಸೂಫಿ ಪಂಥದಲ್ಲಿಯೂ ತುಳಸಿಯ ಪೂಜಿಸಲಾಗುತ್ತದೆ. ಅವರೂ ತುಳಸಿಗೆ ಮಾನ್ಯತೆ ನೀಡುತ್ತಾರೆ. ಜೈನರೂ ಪೂಜೆಗೆ ತುಳಸಿಯ ದಳ ಬಳಸುತ್ತಾರೆ. ಹಿಂದೂ ದೇವಾಲಯಗಳಲ್ಲಿ ತುಳಸಿ ಮಾಲೆಯಿಂದ ದೇವರನ್ನು ಅರ್ಚಿಸುತ್ತಾರೆ.

ಮೂಲ: ಸಂಗ್ರಹ ಮಾಹಿತಿ

ಎಲ್ಲರಿಗೂ ತಿಳಸಿ ಹಬ್ಬದ ಶುಭಾಶಯಗಳು