ಸಿಂಧು ನದಿ ನೀರು : ಪಾಕ್ ಅಂತಾರಾಷ್ಟ್ರೀಯ ನ್ಯಾಯಲಯಕ್ಕೆ ಮೊರೆ

0
865

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ನೀಡದಿರುವ ಬಗ್ಗೆ ಭಾರತ ಚಿಂತನೆ ನಡೆಸಿರುವ ಬೆನ್ನಲ್ಲೆ ಪಾಕ್ ಸರಕಾರ ಅಂತಾರಾಷ್ಟ್ರೀಯ ನ್ಯಾಯಲಯದ ಮೊರೆ ಹೋಗುವ ನಿರ್ಧಾರ ಕೈಗೊಂಡಿದೆ.

ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿ ನೀರನ್ನು ನಿಲುಗಡೆ ಮಾಡುತ್ತದೆ ಎಂಬ ಊಹಾಪೋಗಳ ಹಿನ್ನಲೆಯಲ್ಲಿ ಪಾಕ್ ಸರ್ಕಾರ  ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ. ಅಟಾರ್ನಿ ಜನರಲ್ ಅಶ್ತರ್ ಆಸಫ್ ಅಲಿ ನೇತೃತ್ವದ ಪಾಕಿಸ್ತಾನ ನಿಯೋಗ ಅಮೆರಿಕದ ವಾಷಿಂಗ್ಟನ್ ನಲ್ಲಿ ವಿಶ್ವಬ್ಯಾಂಕ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ  ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿ ನೀರನ್ನು ಭಾರತ ತಡೆಯಲೆತ್ನಿಸುತ್ತಿದ್ದು, ಇದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ.

ಅಲ್ಲದೆ ಭಾರತದ ಬಹು ಉದ್ದೇಶಿತ ಕಿಶನ್ ಗಂಗಾ ಯೋಜನೆಗೂ ಪಾಕಿಸ್ತಾನ ಅಡ್ಡಗಾಲು ಹಾಕಲು ಯತ್ನಿಸುತ್ತಿದ್ದು, ಝೇಲಂ ನದಿಯಲ್ಲಿ ಭಾರತ ನಡೆಸುತ್ತಿರುವ ಕಿಶನ್ ಗಂಗಾ ಯೋಜನೆ  ಕುರಿತಂತೆ ಪಾಕಿಸ್ತಾನ ತಕರಾರು ಅರ್ಜಿ ಸಲ್ಲಿಸಲು ಮುಂದಾಗಿದೆ. ಅಂತೆಯೇ ನೀಲಂ ಹಾಗೂ ಚಿನಾಬ್ ನದಿಗಳಲ್ಲಿನ ಭಾರತದ ಜಲವಿದ್ಯುತ್ ಘಟಕ ಯೋಜನೆಗೂ ಪಾಕಿಸ್ತಾನ ತಕರಾರು  ತೆಗೆದು ಅರ್ಜಿ ಸಲ್ಲಿಸಿದೆ. ತನ್ನ ತಕರಾರು ಅರ್ಜಿ ವಿಲೇವಾರಿಯ ತ್ವರಿತ ವಿಚಾರಣೆಗಾಗಿ ಮೂವರು ನ್ಯಾಯಾಧೀಶರ ಪೀಠವನ್ನು ಕೂಡಲೇ ರಚಿಸುವಂತೆಯೇ ಪಾಕಿಸ್ತಾನ ವಿಶ್ವಬ್ಯಾಂಕ್ ಗೆ ಮೊರೆ ಇಟ್ಟಿದೆ.  ಇನ್ನು ಈ ಬಗ್ಗೆ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಎಜೀಜ್ ಅವರು ಭಾರತದ ನಡೆ ಪರೋಕ್ಷ ಯುದ್ಧದಂತಿದೆ ಎಂದು  ಹೇಳಿದ್ದಾರೆ. ಅಂತೆಯೇ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.