ಕೋಪದ ಸೃಜನಶೀಲ ಆಯಾಮ

0
581

‘ಕೋಪಬಂದರೆ ನಾನೇನು ಮಾಡಿ ಬಿಡುತ್ತೇನೋ ಗೊತ್ತಿಲ್ಲ!’ ಎಂಬ ಹಬ್ಬರಿಸದೇ ಇರುವವರು ಈ ಪ್ರಪಂಚದಲ್ಲಿ ಯಾರೂ ಇರಲಾರರು. ಆದರೆ ಕೋಪಬಂದರೆ ತಾವೇನು ಮಾಡುತ್ತೇವೆ ಎಂದು ಅರಿತವರ ಸಂಖ್ಯೆ ಬಹಳ ಸಣ್ಣದು. ಕೋಪ ಬಂದಾಗ ಗೊತ್ತಿಲ್ಲದ ಏನೋ ಒಂದನ್ನು ಮಾಡುವ ಬದಲಿಗೆ ಗೊತ್ತಿರುವ ಏನನ್ನಾದರೂ ಮಾಡಬೇಕು.

ಇಂಥ ಮಾತು ಕೇಳಿದಾಕ್ಷಣ ಕೆಲವರಿಗೆ ಕೋಪ ಬರಬಹುದು. ಅಂಥವರು ಕೋಪವನ್ನು ಸ್ವಲ್ಪ ಹತೋಟಿಯಲ್ಲಿಟ್ಟುಕೊಂಡರೆ ಚರ್ಚೆ ಮುಂದುವರಿಸಬಹುದು. ಮನುಷ್ಯ ದುಡುಕುವುದೇ ಅಸಹನೆಯ ಕ್ಷಣಗಳಲ್ಲಿ. ಒಂದು ಕ್ಷಣಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಏನಾಯಿತು ಎಂಬುದನ್ನು ಯೋವಿಸಲು ತೊಡಗಿದರೆ ಅತ್ಯಂತ ಸೃಜನಶೀಲವಾದ ಏನೋ ಒಂದು ಸಂಭವಿಸುತ್ತದೆ.

ಅನರ್ ಬೋಸ್ ಅರಿಗೆ ಸ್ಪೀಕರ್’ಗಳ ಮೇಲೆ ಸಿಟ್ಟು ಬಂದದ್ದರಿಂದ ‘ಬೋಸ್’ ಎಂಬ ಧ್ವನಿಯನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವಸ್ಪೀಕರ್ಗಳು ಸೃಷ್ಟಿಯಾದವು.

ಗಾಂಧೀಜಿ ತಮ್ಮನ್ನು ರೈಲಿನಿಂದ ತಳ್ಳಿದವನನ್ನು ಹುಡುಕಿ ಹೊಡೆದಿದ್ದರೆ ಇಬ್ಬರು ಹೊಡೆದಾಟದಲ್ಲಿ ಪ್ರಕರಣ ಮುಕ್ತಾಯವಾಗುತ್ತಿತ್ತು. ಆದರೆ ಗಾಂಧೀಜಿಯ ಪ್ರತಿಕ್ರಿಯೆ ದೊಡ್ಡದೊಂದು ಸಾಮಾಜಿಕ ಪಿಡುಗನ್ನು ತೊಡೆಯುವ ಹಾದಿಯಲ್ಲಿಸಾಗಿತು. ಭಾರತದ ಸ್ವಾತಂತ್ರ್ಯ ಹೊರಾಟಕ್ಕೆ ಹೊಸ ತಿರುವು ನೀಡಿತು. ಸಿಟ್ಟು ನಾಶಕ್ಕೆ ಕಾರಣವಾಗುವಂತೆಯೇ ಸೃಷ್ಟಿಗೂ ಕಾರಣವಾಗಬಹುದು ಎಂಬುದಕ್ಕೆ ವಿಶ್ವಾಮಿತ್ರ ಮಹರ್ಷಿಗಳ ಉದಾಹರಣೆಯಂತೂ ಇದ್ದೇ ಇದೆ. ತ್ರಿಶಂಕು ಸ್ವರ್ಗ ಎಂಬುದು ಪ್ರತಿಭಟನೆಯೊಂದರ ಸೃಜನಶೀಲ ಅಭಿವ್ಯಕ್ತಿ.

ಇಂಥದ್ದು ನಮ್ಮ ಬದುಕಿನಲ್ಲೂ ಸಾಧ್ಯವಾಗಬಹುದು. ನಮ್ಮ ಬಗ್ಗೆ ನಮಗೆ ಬರುವ ಸಿಟ್ಟುಗಳ ಕುರಿತು ಅರೆ ಕ್ಷಣ ಆಲೋಚಿಸಿದರೆ ನಮ್ಮೊಳಗೆ ಒಂದು ದೊಡ್ಡ ಬದಲಾವಣೆ ಸಂಭವಿಸಿಬಿಡಬಹುದು. ಗಣಿತದ ಬಗ್ಗೆ ಇರುವ ಸಿಟ್ಟನ್ನು ಅದನ್ನು ಕರಗತ ಮಾಡಿಕೊಳ್ಳುವ ಹಟವನ್ನಾಗಿ ಪರಿವರ್ತಿಸಿದರೆ ಅದರಿಂದ ಕೆಟ್ಟದ್ದಂತೂ ಆಗುವುದಿಲ್ಲ. ಬೆಳಿಗ್ಗೆ ಏಳುವುದಕ್ಕೆ ಆಗುವುದಿಲ್ಲ ಎಂದು ಸಿಟ್ಟು ಮಾಡಿಕೊಳ್ಳುವ ಬದಲಿಗೆ ಏಕೆ ಏಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಂಡರೆ ನಮ್ಮ ದಿನಚರಿಯೇ ಬದಲಾಗಿಬಿಡಬಹುದು.

ಎಲ್ಲಾ ಸಿಟ್ಟುಗಳೂ ಲೋಕೋತ್ತರವಾದುದನ್ನೇ ಸೃಷ್ಟಿಸುತ್ತವೆ ಎಂದಲ್ಲ. ನಮ್ಮ ಕುಟುಂಬದೊಳಗೆ ನಮ್ಮ ನಿತ್ಯದ ಬದುಕಿನೊಳಗೆ ಅದು ಉಂಟುಮಾಡುವ ಬದಲಾವಣೆಗಳೂ ದೊಡ್ಡವೇ ತಾನೇ. ಥೂ ಕಸ ಬಿದ್ದಿದೆ ಎಂದು ಮುಖ ಸಿಂಡರಿಸಿಕೊಳ್ಳುವುದರ ಬದಲಿಗೆ ಅದನ್ನು ಶುಚಿಗೊಳಿಸುವ ಕೆಲಸ ಆರಂಭಿಸಿದರೆ ಅದರ ಪರಿಣಾಮ ಹೇಗಿರಬಹುದು?

ಪ್ರತಿಭಟನೆ ಎಂಬುದು ಪರ್ಯಾಯಗಳ ಶೋಧನೆಯೂ ಆದಾಗ ಅದರಿಂದ ಸಾಧ್ಯವಾಗುವ ಪರಿವರ್ಥನೆಗಳು ದೊಡ್ಡವೇ. ಸಿಟ್ಟನ್ನು ಗೆಲ್ಲುವುದು ಬದಲು ಸ್ವಲ್ಪ ಯೋಚಿಸಲು ಹೊರಟರೆ ನಾವು ಏನು ಮಾಡಬೇಕು ಎಂಬುದನ್ನು ಹೊಳೆಯುತ್ತದೆ. ಏನೂ ಹೊಳೆಯದೇ ಇದ್ದರೂ ಸಿಡುಕಿನಿಂದ ಆಗುವ ಅನಾಹುತವಂತೂ ಸಂಭವಿಸುವುದಿಲ್ಲ. ಅದ್ದರಿಂದ ಸಿಟ್ಟು ಬಂದಾಗ ಅದನ್ನು ನಿಂತ್ರಿಸಲು ಪ್ರಯತ್ನಿಸಿ. ಅದು ದೊಡ್ಡದೊಂದು ಸಾಧನೆಗೆ ಹೇತುವಾಗಬಹುದು.