ರಾಜಕೀಯದ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

0
434

ನವದೆಹಲಿ: ರಾಜ್ಯದ ಮಾಜಿ ಮುಖ್ಯಮಂತ್ರಿ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ವಿದ್ಯುಕ್ತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ, ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತ ಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಹಾಜರಿದ್ದರು.

ಬಿಜೆಪಿ ಸೇರಿದ ಬಳಿಕ ಮಾತನಾಡಿದ ಕೃಷ್ಣ, ರಾಜಕೀಯದಲ್ಲಿ ಬಹು ದೊಡ್ಡ ಪ್ರಯಾಣ ಮಾಡಿದ್ದೇನೆ. ನನ್ನ ಪ್ರಯಾಣ ಈಗ ಅತ್ಯಂತ ಪ್ರಮುಖ ನಿಲ್ದಾಣಕ್ಕೆ ಬಂದು ನಿಂತಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಕಾಣುತ್ತಿದೆ ಎಂದು ಮಾಜಿ ಹಿರಿಯ ಕಾಂಗ್ರೆಸ್ ನಾಯಕ ಹೊಗಳಿದ್ದಾರೆ.

ಸುಮಾರು 50 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದ 84 ವರ್ಷದ ಎಸ್ ಎಂ ಕೃಷ್ಣ ಅವರು ಕರ್ನಾಟಕ ಮುಖ್ಯಮಂತ್ರಿ, ಮಹಾರಾಷ್ಟ್ರ ರಾಜ್ಯಪಾಲ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ಪಕ್ಷದಲ್ಲಿ ತಮ್ಮ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಸೇರುವಂತೆ ಕೃಷ್ಣ ಅವರಿಗೆ ಆಹ್ವಾನ ನೀಡಿದ್ದರು. ಯಡಿಯೂರಪ್ಪ ಆಹ್ವಾನ ಸ್ವೀಕರಿಸಿ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇದೇ ತಿಂಗಳ 15ರಂದೇ ಕೃಷ್ಣ ಅವರು ಬಿಜೆಪಿ ಸೇರುವುದು ಖಚಿತವಾಗಿತ್ತು. ಆ ಹಿನ್ನೆಲೆಯಲ್ಲಿ ಅವರು ಅದರ ಹಿಂದಿನ ದಿನವೇ (ಮಾರ್ಚ್ 14) ದೆಹಲಿಗೂ ತೆರಳಿದ್ದರು. ಆದರೆ, ಅಂದೇ ಕೃಷ್ಣ ಅವರ ಸಹೋದರಿ ನಿಧನರಾದ ಹಿನ್ನೆಲೆಯಲ್ಲಿ ಅವರ ಬಿಜೆಪಿ ಸೇರ್ಪಡೆಯನ್ನು ಮುಂದೂಡಲಾಗಿತ್ತು.